ಡಂಬಳ: ಸೂರ್ಯ ಉದಯಿಸುತ್ತಿದ್ದಂತೆ ಮಹಿಳೆಯರು, ಮಕ್ಕಳು, ವೃದ್ಧರಿಗೆ ನೀರಿನದ್ದೆ ದೊಡ್ಡ ಚಿಂತೆ. ಬಹುತೇಕ ಜನರು ನೀರಿಗಾಗಿ ಕೂಲಿ ಕೆಲಸವನ್ನು ಬೀಡಬೇಕಾದ ಪರಿಸ್ಥಿತಿ ಬಂದಿದ್ದು ಪೈಪಲೈನ್ ಅಳವಡಿಸಿದ್ದರೂ ಸರಿಯಾಗಿ ನೀರು ಬರುತ್ತಿಲ್ಲ. ಹೀಗಾಗಿ ಡಂಬಳ ಗ್ರಾಮದಲ್ಲಿ ಸಾರ್ವಜನಿಕರು ಬೆಳಿಗ್ಗೆ ಎದ್ದ ತಕ್ಷಣ ಓಣಿಯಿಂದ ಓಣಿಗೆ ಖಾಲಿ ಕೊಡಪಾನ ಹಿಡಿದುಕೊಂಡು ಅಲೆದಾಡುವುದು ಸಾಮಾನ್ಯವಾಗಿದೆ.
ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದರಿಂದ ಸಾರ್ವಜನಿಕರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಡಂಬಳ ಗ್ರಾಮ ಪಂಚಾಯ್ತಿ ಮುಂಡರಗಿ ತಾಲ್ಲೂಕಿನಲ್ಲಿಯೇ ಗ್ರೇಡ್–1 ಪಂಚಾಯ್ತಿಯಾಗಿದ್ದು ರಾಮೇನಹಳ್ಳಿ, ನಾರಾಯಣಪೂರ ಹಾಗೂ ಹೊಸಡಂಬಳ ಸೇರಿದಂತೆ 18 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಡಂಬಳ ಗ್ರಾಮದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿವೆ.
‘ಇಲ್ಲಿನ ಜಂಗಳಿಯವರ ಓಣಿಯಲ್ಲಿ ಪೈಪ್‌ಲೈನ್ ಇದ್ದರೂ ಬೆಳಿಗ್ಗೆ ಎದ್ದ ತಕ್ಷಣ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ತಪ್ಪಿಲ್ಲ. ಅಧಿಕಾರಿಗಳಿಗೆ ಜನ ಪ್ರತಿನಿಧಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ’ ಎಂಬುದು ಯಲ್ಲವ್ವ ವಾಲಿಕಾರ, ಬಸಮ್ಮ ಹಳ್ಳಾಕಾರ ಮತ್ತು ಮಹೇಶ ಗುಡ್ಡದ ಅವರ ನೋವಿನ ಮಾತು.
ಇಲ್ಲಿನ ಕುರುಬರ ಓಣಿ, ಮಾಯಮ್ಮನ ಗುಡಿ ಹತ್ತಿರ, ಹರಿಜನ ಓಣಿ, ಹಡಪದರ ಓಣಿ, ಮುಖ್ಯ ಬಜಾರ ಸೇರಿದಂತೆ ಬಹುತೇಕ ಕಡೆ ನೀರಿನ ಸಮಸ್ಯೆ ತಲೆದೋರಿದ್ದು ಕೂಲಿ ಕೆಲಸಕ್ಕೆ ಹೋಗಬೇಕಾದ ಜನರು ಕುಡಿಯುವ ನೀರಿಗಾಗಿ ಕೆಲಸವನ್ನು ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿನ ಬಹುತೇಕ ಕುಟುಂಬಗಳು ಸ್ವಂತ ನಳ ಹೊಂದಿದ್ದರೂ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯಬೇಕಾದ ಸ್ಥಿತಿಯಿದೆ. ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಹೆಚ್ಚಿನ ಬೇಡಿಕೆ ಬರುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಗ್ರತೆ ವಹಿಸಿಲ್ಲ ಎಂಬುದು ಅವರ ಆರೋಪವಾಗಿದೆ.
ಜನಸಂಖ್ಯೆಗೆ ಅನುಗುಣವಾಗಿ ನೀರಿನ ಲಭ್ಯತೆಯಾಗಬೇಕಾದರೆ 3ರಿಂದ 4 ವಾರ್ಡ್‌ಗಳಿಗೆ ಒಂದರಂತೆ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಬೇಕು. ವಿಶೇಷವಾಗಿ ಎಪಿಎಂಸಿಯಲ್ಲಿ ಹೊಸ ಟ್ಯಾಂಕರ್ ನಿರ್ಮಾಣ ಮಾಡಿದರೆ ಜನತಾ ಪ್ಲಾಟ್, ಚಿಕ್ಕರಡ್ಡೆವರ ಬಡಾವಣೆ, ವಿವಿಧ ಶಾಲಾ ಕಾಲೇಜು ವಸತಿ ನಿಲಯಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಆ ದಿಶೆಯಲ್ಲಿ ಅಧಿಕಾರಿಗಳು ಕ್ರಮ ಜರಗಿಸಬೇಕು ಎಂದು ಬಸವರಾಜ ಹಿರೇಮಠ ಮತ್ತು ನಿಂಗಪ್ಪ ಮಾದರ ಒತ್ತಾಯ ಮಾಡುತ್ತಾರೆ.
ಲಕ್ಷ್ಮಣ ಎಚ್. ದೊಡ್ಡಮನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.