ನವದೆಹಲಿ: ಕೇಂದ್ರ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದೊಂದಿಗೆ ಜನಜಾಗೃತಿ ಮೂಡಿಸುತ್ತಿರುವ ರಾಜ್ಯದ ಗದಗ ಜಿಲ್ಲೆಗೆ ನಿರ್ವಹಣೆ ವಿಭಾಗದ ವಿಶೇಷ ಪುರಸ್ಕಾರ ದೊರೆತಿದೆ.
ಗುರುವಾರ ಇಲ್ಲಿ ಏರ್ಪಡಿಸಿದ್ದ ‘ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ’ ಸಮಾರಂಭದಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಸಚಿವೆ ಮೇನಕಾ ಗಾಂಧಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ರಾಷ್ಟ್ರದ ಒಟ್ಟು 25 ಜಿಲ್ಲೆಗಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಗದಗ ಜಿಲ್ಲೆಯು ರಾಜ್ಯದ ಏಕೈಕ ಜಿಲ್ಲೆಯಾಗಿದೆ. ‘2011ರ ಜನಗಣತಿ ಪ್ರಕಾರ ಒಟ್ಟು 10.64 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಪುರುಷ:ಸ್ತ್ರೀ ಲಿಂಗಾನುಪಾತದ ಪ್ರಮಾಣ 1000:
947. ಕಾರ್ಯಕ್ರಮದ ಪರಿಣಾಮಕಾರಿ ಜಾರಿ ಹಾಗೂ ಜನಜಾಗೃತಿಗಾಗಿ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ರಚಿಸಿ, 122 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು’ ಎಂದು ಪ್ರಶಸ್ತಿ ಸ್ವೀಕರಿಸಿದ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
‘ಜನಪ್ರತಿನಿಧಿಗಳು, ಸರ್ಕಾರಿ ಸಿಬ್ಬಂದಿಯ ಸಹಭಾಗಿತ್ವದೊಂದಿಗೆ ವಿವಿಧ ಪ್ರಕಾರಗಳ ಕಲಾ ತಂಡದ ಸದಸ್ಯರು ಜಾನಪದ ಗೀತೆ, ನೃತ್ಯ ಮತ್ತು ಬೀದಿ ನಾಟಕ ಆಯೋಜಿಸಿ ಜಾಗೃತಿ ಮೂಡಿಸಿದ್ದಾರೆ. ಹೆಣ್ಣು ಮಕ್ಕಳ ಜನ್ಮ ದಿನಾಚರಣೆ, ಹೆಣ್ಣು ಮಗುವಿನ ತಾಯಂದಿರಿಗೆ ಸನ್ಮಾನ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು, ಸ್ವ–ಸಹಾಯ ಗುಂಪಿನ ಸದಸ್ಯೆಯರು, ಸ್ವಯಂ ಸೇವಾ ಸಂಘದ ಸದಸ್ಯೆಯರಿಂದ ಜಾಥಾ, ದೀಪೋತ್ಸವ ಏರ್ಪಡಿಸಿ ಅರಿವು ಮೂಡಿಸಲಾಗುತ್ತಿದೆ’ ಎಂದರು.
‘ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ, ಅಂಗನವಾಡಿ ಚಿಣ್ಣರಿಗೆ ವೀರ ಮಹಿಳೆಯರ ವೇಷ– ಭೂಷಣ ಸ್ಪರ್ಧೆ, ಕಿಶೋರಿಯರ ಆರೋಗ್ಯ ತಪಾಸಣೆ ಏರ್ಪಡಿಸಲಾಗುತ್ತಿದೆ. ಗ್ರಾಮ ಪಂಚಾಯ್ತಿ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ಯೋಜನೆಗಳು ಹಾಗೂ ಲಿಂಗಾನುಪಾತ ಸರಿಪಡಿಸುವ ಅಂಶಗಳ ಕುರಿತು ತರಬೇತಿ ಆಯೋಜಿಸಲಾಗುತ್ತಿದೆ’ ಎಂದರು. 2015ರಲ್ಲಿ ಆರಂಭಿಸಲಾಗಿರುವ ಈ ಕಾರ್ಯಕ್ರಮದಡಿ ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ, ಮಹಿಳಾ ಸಬಲೀಕರಣ, ಹೆಣ್ಣು ಭ್ರೂಣ ಹತ್ಯೆ ತಡೆಯುವ ಮತ್ತು ಲಿಂಗಾನುಪಾತ ಸರಿಪಡಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಲಿಂಗಾನುಪಾತ ಆಧರಿಸಿ ರಾಜ್ಯದ ನಾಲ್ಕು ಜಿಲ್ಲೆಗಳು ಸೇರಿದಂತೆ ರಾಷ್ಟ್ರದ 100 ಜಿಲ್ಲೆಗಳಲ್ಲಿ ಕಾರ್ಯಕ್ರಮ ಆರಂಭಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.