ಗದಗ: ಹಳೆಯ ವರ್ಷದ ಹಣ್ಣೆಲೆಗಳು ಉದುರಿ ಹೊಸ ವರ್ಷದ ಚಿಗುರೆಲೆ ಮೂಡುತ್ತಿರುವ ಸಂಭ್ರಮದ ಕ್ಷಣಗಳಿವು. ಹೊಸ ಬೆಳಗು, ಹೊಸ ನಿರೀಕ್ಷೆ. ಎಲ್ಲೆಡೆ ನವೋಲ್ಲಾಸ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು, ಹಳೆಯ ವರ್ಷದ ಕುರಿತು ಅವಲೋಕನ ನಡೆಸುವ ಮಹತ್ವದ ಗಳಿಗೆಯೂ ಇದು.
2018 ಜಿಲ್ಲೆಗೆ ಗುಲಗಂಜಿಯಷ್ಟು ಸಿಹಿಯನ್ನೂ ಬೆಟ್ಟದಷ್ಟು ಕಹಿಯನ್ನೂ ನೀಡಿದ ವರ್ಷ. ಮಳೆ ಕೊರತೆ ಮತ್ತು ಬರ ಈ ವರ್ಷವೂ ರೈತರ ಜೀವ ಹಿಂಡಿತು. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಶೇ 68.8ರಷ್ಟು ಮಾತ್ರ ಬಿತ್ತನೆಯಾಗಿತ್ತು. ಬಿತ್ತನೆಯಾದ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ 1.51 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಯಿತು. ಹಿಂಗಾರಿನಲ್ಲೂ ಸಮರ್ಪಕ ಮಳೆ ಲಭಿಸದೆ ರೈತರು ಪರದಾಡಿದರು.
ಜಿಲ್ಲೆಯ ಗದಗ, ಶಿರಹಟ್ಟಿ, ರೋಣ, ಮುಂಡರಗಿ ಮತ್ತು ನರಗುಂದ ಸೇರಿ ಐದೂ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಆದೇಶ ಹೊರಡಿಸಿತು. ಮುಂಗಾರಿನಲ್ಲಿ ಹೆಸರಿಗೆ ಘೋಷಿಸಿದ ಬೆಂಬಲ ಬೆಲೆ ಮತ್ತು ಹಿಂಗಾರು ಆರಂಭದಲ್ಲಿ ಈರುಳ್ಳಿಗೆ ನೀಡಿದ ಪ್ರೋತ್ಸಾಹಧನದ ಲಾಭ ರೈತರಿಗೆ ಲಭಿಸಲಿಲ್ಲ.
2018ರ ಆರಂಭದಲ್ಲಿ ಚುರುಕು ಪಡೆದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವು ವರ್ಷವಿಡೀ ಸುದ್ದಿ ಮಾಡಿತು. ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ಹೊಸ ತಾಲ್ಲೂಕುಗಳಾಗುವ ಮೂಲಕ ಜಿಲ್ಲೆಯ ಒಟ್ಟು ತಾಲ್ಲೂಕುಗಳ ಸಂಖ್ಯೆ 5ಕ್ಕೆ ಏರಿಕೆಯಾಯಿತು.
2013ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಮತ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್, 2018ರ ಚುನಾವಣೆಯಲ್ಲಿ ಮೂರು ಸ್ಥಾನ ಕಳೆದುಕೊಂಡು ಮುಖಭಂಗ ಅನುಭವಿಸಿತು. ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಕಾಂಗ್ರೆಸ್ ನಂತರ ನಡೆದ 6 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೇಲುಗೈ ಸಾಧಿಸಿತು.
ವರ್ಷಾಂತ್ಯದಲ್ಲಿ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರ ನಿಧನ ವಾರ್ತೆ ಭಕ್ತ ವೃಂದಕ್ಕೆ ಬರಸಿಡಿಲಿನಂತೆ ಬಂದೆರಗಿತು. ನಾಲ್ಕೂವರೆ ದಶಕಗಳ ಕಾಲ ಅವರು ನಾಡು, ನುಡಿ, ನೆಲ, ಜಲ ಹಾಗೂ ಕೋಮು ಸಾಮರಸ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದರು. ಅವರ ಉತ್ತರಾಧಿಕಾರಿಯಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಅವರು ತೋಂಟದಾರ್ಯ ಸಂಸ್ಥಾನದ ಮಠದ 20ನೇ ಪೀಠಾಧಿಪತಿಯಾಗಿ ಪೀಠಾರೋಹಣ ಮಾಡಿದರು.
ರೋಣ: ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾದ ವರ್ಷ 2018...
2018ರ ಆರಂಭದಲ್ಲೇ ತಾಲ್ಲೂಕಿನ ಅಲ್ಲಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆಗಳು ನಡೆದವು. ಸಿಂಗಟಾಲೂರಿನಲ್ಲಿ ದಲಿತ ಮಹಿಳೆಯ ಅತ್ಯಾಚಾರ,ಕೊಲೆ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳಿಂದ ರೋಣ ಬಂದ್ ನಡೆಯಿತು. ಮಾರ್ಚ್ ನಂತರ ಚುನಾವಣಾ ಕಾವು ಚುರುಕು ಪಡೆಯಿತು. ಹಲವು ರಾಜಕೀಯ ಮೇಲಾಟಗಳಿಗೆ 2018 ಸಾಕ್ಷಿಯಾಯಿತು. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜಿ.ಎಸ್.ಪಾಟೀಲ ಅವರ ಪರ ಪ್ರಚಾರಕ್ಕಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೋಣಕ್ಕೆ ಬಂದರು. ಜಿ.ಎಸ್.ಪಾಟೀಲ ಅವರನ್ನು ಸೊಲಿಸಿದ ಕಳಕಪ್ಪ ಬಂಡಿ ರೋಣ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು.
ಚುನಾವಣೆ ಮುಗಿದ ಎರಡು ದಿನಗಳ ನಂತರ ಮೇ.17 ರಂದು ಪೌರಕಾರ್ಮಿಕರಿಗೆ ಸಂಬಳ ನೀಡದಿರುವುದನ್ನು ಖಂಡಿಸಿ ರಾಮಣ್ಣ ಕೊಪ್ಪದ ಎಂಬ ಪೌರ ಕಾರ್ಮಿಕ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಜಿಂಕೆಗಳ ಹಾವಳಿಗೆ ತತ್ತರಿಸಿದ ರೈತರು ಬೆಳೆಹಾನಿ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಆಗಸ್ಟ್ ತಿಂಗಳಲ್ಲಿ ಮತ್ತೆ ಪುರಸಭೆ ಚುನಾವಣೆ ಸದ್ದು ಮಾಡಿತು. ಚುನಾವಣೆ ನಡೆದು 23 ವಾರ್ಡುಗಳ ಪೈಕಿ 15 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಪಡೆಯಿತು. ನವೆಂಬರ್‌ನಲ್ಲಿ ಸಾಲಭಾದೆಯಿಂದ ತಾಲ್ಲೂಕಿನ ಹುಲ್ಲೂರು ಗ್ರಾಮದ ರೈತ ಪರಪ್ಪ ಬ್ಯಾಳಿ ಆತ್ಮಹತ್ಯೆ ಮಾಡಿಕೊಂಡರು. ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್‌ನಲ್ಲಿ ಕೊತಬಾಳ ಗ್ರಾಮದ ಜನಪದ ಕಲಾವಿದೆ ಬಸಮ್ಮ ಮಾದರ ಅವರಿಗೆ ಜಾನಪದ ಪ್ರಶಸ್ತಿ ಲಭಿಸಿತು.
ನರೇಗಲ್: ಬರಕ್ಕೆ ರೈತ ತತ್ತರ
ಹೋಬಳಿಯ ದೊಡ್ಡ ಜಾತ್ರೆ ಎಂದೇ ಹೆಸರಾಗಿರುವ ಕೋಡಿಕೊಪ್ಪದ ಹುಚ್ಚಿರಪ್ಪಜ್ಜನವರ ಜಾತ್ರೆ ವರ್ಷದ ಆರಂಭದಲ್ಲೇ ಸಂಭ್ರಮದಿಂದ ನಡೆಯಿತು.ಮಹಿಳೆಯರು ಹಾಲಕೆರೆ ಗ್ರಾಮದ ಬೆಳ್ಳಿರಥ ಎಳೆದು ಸಂಭ್ರಮಿಸಿದರು. 2018ರಲ್ಲೂ ಹೋಬಳಿ ರೈತರು ಬರ ಮತ್ತು ಕುಡಿಯುವ ನೀರಿನ ಬವಣೆ ಎದುರಿಸಿದರು. ಮುಂಗಾರು ಮತ್ತು ಹಿಂಗಾರು ಕೈ ಕೊಟ್ಟಿದ್ದರಿಂದ ಬೆಳೆಗಳೆಲ್ಲ ಒಣಗಿ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದರು.
ಕೋರ್ಟ್ ಅಫಿಡವಿಟ್ ಮಾಡಿಸಿ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ಜಕ್ಕಲಿಯ ರವೀಂದ್ರನಾಥ ದೊಡ್ಡಮೇಟಿ ಅವರು ರಾಜ್ಯದ ಗಮನ ಸೆಳೆದರು.
ಅಬ್ಬಿಗೇರಿ ಗ್ರಾಮದ ಪ್ರಗತಿಪರ ಮಹಿಳಾ ಸಾಧಕಿ ಅನಸೂಯಾ ಮನೋಹರ ತಳಬಾಳ ಇವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ನೀಡುವ ಗದಗ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಲಭಿಸಿತು. ಹಾಲಕೆರೆಯ ರಂಗ ಕಲಾವಿದ ಶೇಖಪ್ಪ ಕೋಗಿಲೆ ಅವರಿಗೆ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ, ಉಪನ್ಯಾಸಕಿ ಎಲ್.ಸಿ.ಹಿರೇಮಠ ಅವರಿಗೆ ಭಾರತ್ ವಿದ್ಯಾ ರತನ್ ಪ್ರಶಸ್ತಿ ಹಾಗೂ ಡಾ.ಶಿವರಾಜ ಗುರಿಕಾರ ಅವರಿಗೆ ಭಾರತ ಸೇವಾ ಪ್ರಶಸ್ತಿ ಲಭಿಸಿದವು. ಸತತ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಹೆಗ್ಗಳಿಕೆ ಹೋಬಳಿಯ ಅಬ್ಬಿಗೇರಿ ಗಾಮ ಪಂಚಾಯ್ತಿಗೆ ಲಭಿಸಿತು.
ಅಟ್ಯಾಪಟ್ಯಾದಲ್ಲಿ ಪಟ್ಟಣದ ಬಾಲಕಿಯರು ಭಾರತ ತಂಡವನ್ನು ಪ್ರತಿನಿಧಿಸಿ, ಪ್ರಶಸ್ತಿ ಜಯಿಸಿದರು. ವರ್ಷಾಂತ್ಯದಲ್ಲಿ ನೆಲ, ಜಲ ಸಂರಕ್ಷಣ ಸಮಿತಿಯಿಂದ ಹಿರೇಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಸಮುದಾಯದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಕಾಮಗಾರಿ ಜಿಲ್ಲೆಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. 2018ರಲ್ಲಿ ನಿಧನರಾದ ಕನ್ನಡದ ಶ್ರೇಷ್ಠ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಹೋಬಳಿಯ ಅಬ್ಬಿಗೇರಿ ಗ್ರಾಮದವರು.
ನರಗುಂದ: ಸಿಹಿ ತಂದ ಮಹದಾಯಿ ತೀರ್ಪು
ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟ 2018ರಲ್ಲಿ ನಾಲ್ಕು ವರ್ಷ ಪೂರೈಸಿತು. ಆಗಸ್ಟ್ 14ರಂದು ಮಹದಾಯಿ ನ್ಯಾಯಮಂಡಳಿ ತೀರ್ಪು ಪ್ರಕಟಗೊಂಡು ರಾಜ್ಯಕ್ಕೆ 13.5 ಟಿಎಂಸಿ ಅಡಿ ನೀರು ಹಂಚಿಕೆಯಾಯಿತು.ಇದನ್ನು ಸ್ವಾಗತಿಸಿ ರೈತರು ವಿಜಯೋತ್ಸವ ಆಚರಿಸಿದರು. ಆದರೆ, ನ್ಯಾಯಮಂಡಳಿ ಹಂಚಿಕೆ ಮಾಡಿದ ನೀರು ಪಡೆಯಲು ಇನ್ನೂ ಹೋರಾಟ ಮುಂದುವರಿದಿದೆ.
ಮುಂಗಾರು ಆರಂಭದಲ್ಲಿ ತಾಲ್ಲೂಕಿನ ಹದಲಿ ಗ್ರಾಮದಲ್ಲಿ ಮಹಿಳೆ ಸಿಡಿಲಿಗೆ ಬಲಿಯಾದರು. ರಸ್ತೆ ಅಪಘಾತದಲ್ಲಿ ಮೂವರು ಡಿಪ್ಲೊಮಾ ವಿದ್ಯಾರ್ಥಿಗಳು ಸಾವಿಗೀಡಾದರು. ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕ ಬಿ.ಆರ್.ಯಾವಗಲ್ ಸೋಲು ಕಂಡು ಬಿಜೆಪಿಯ ಸಿ.ಸಿ.ಪಾಟೀಲ ಶಾಸಕರಾಗಿ ಆಯ್ಕೆಯಾದರು.
ಜುಲೈ 28ರಂದು 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಾ.ಬಿ.ಎಂ.ಜಾಬಣ್ಣವರ ಅಧ್ಯಕ್ಷತೆಯಲ್ಲಿ ನಡೆಯಿತು.
ನವಿಲುತೀರ್ಥ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಜಲಾಯಶಯದ ಗೇಟ್ ಬಳಿ ನರಗುಂದ, ನವಲಗುಂದ ರೈತರು ಅಹೋರಾತ್ರಿ ಧರಣಿ ನಡೆಸಿದರು. ನೀರು ಮಾತ್ರ ಹರಿಯಲಿಲ್ಲ.
ಪಟ್ಟಣದ ಲಯನ್ಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆಯಾದರು. ತಾಲ್ಲೂಕಿನ ಶಿರೋಳದ ಯೋಗ ಪಟು ಬಸವರಾಜ ಕೊಣ್ಣೂರ ಯೋಗದಲ್ಲಿ ಶಲಭಾಸನ ಪ್ರದರ್ಶಿಸಿ ಗಿನ್ನೆಸ್ ದಾಖಲೆ ಬರೆದರು.
ರೀವರ್ಸ್ ರೋಪ್ ಜಂಪ್‌ನಲ್ಲಿ ತಾಲ್ಲೂಕಿನ ಹದಲಿಯ ಕೆವಿಜಿ ಬ್ಯಾಂಕ್‍ನ ಅಧಿಕಾರಿ ಜಿ.ಜಿ.ನಾಡಗೌಡ್ರ ಗಿನ್ನೆಸ್ ದಾಖಲೆ ಮಾಡಿದರು.
ಲಕ್ಷ್ಮೇಶ್ವರ: ಸಾಲಮನ್ನಾಕ್ಕೆ ಪಾದಯಾತ್ರೆ
ಜ.5, 6 ಮತ್ತು 7ರಂದು ಸೋಮೇಶ್ವರ ದೇವಸ್ಥಾನದಲ್ಲಿ ಮೂರು ದಿನ ಇನ್ಫೊಸಿಸ್ ಪ್ರತಿಷ್ಠಾನದಿಂದ ಪುಲಿಗೆರೆ ಉತ್ಸವ ನಡೆಯಿತು. ಜ. 24ರಂದು ಲಕ್ಷ್ಮೇಶ್ವರ ಹೊಸ ತಾಲ್ಲೂಕಾಗಿ ಉದ್ಘಾಟನೆಗೊಂಡಿತು.
ಸಾಲಬಾಧೆಯಿಂದ 2018ರಲ್ಲಿ ತಾಲ್ಲೂಕಿನ ಐವರು ರೈತರು ಆತ್ಮಹತ್ಯೆ ಮಾಡಿಕೊಂಡರು. ಹಿರಿಯ ದಿವಾಣಿ ನ್ಯಾಯಾಲಯವನ್ನು ನ್ಯಾಯಾಧೀಶ ಆರ್.ದೇವದಾಸ್ ಅವರು ಉದ್ಘಾಟಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಮಕೃಷ್ಣ ದೊಡ್ಡಮನಿ ಅವರು ಸೋಲುಂಡು, ರಾಮಣ್ಣ ಲಮಾಣಿ ಅವರು ಶಾಸಕರಾಗಿ ಆಯ್ಕೆಯಾದರು.
ಬಹು ಗ್ರಾಮಗಳ ಕುಡಿಯುವ ನೀರು ಪೂರೈಕೆ ಯೋಜನೆಯಡಿ ತಾಲ್ಲೂಕಿನ 24 ಹಳ್ಳಿಗಳಿಗೆ ತುಂಗಭದ್ರಾ ನದಿ ನೀರು ಸರಬರಾಜು ಪ್ರಾರಂಭವಾಯಿತು.
ಜೂನ್ 8ರಂದು ವೈದ್ಯ ಬಾಬುರಾವ್ ಕುಲಕರ್ಣಿ ಅವರಿಂದ ನಡೆದ ಆಸ್ತಮಾ ಯಜ್ಞದಲ್ಲಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಆಸ್ತಮಾ ರೋಗಿಗಳು ಉಚಿತ ಮಂತ್ರೌಷಧ ಸ್ವೀಕರಿಸಿದರು.
ಜೂನ್ 30ರಂದು ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಸಮೀಪದ ರಾಮಗಿರಿಯಿಂದ ಲಕ್ಷ್ಮೆಶ್ವದವರೆಗೆ ರೈತರಿಂದ ಪಾದಯಾತ್ರೆ ನಡೆಯಿತು. ಏ. 25ರಂದು ಸೋಮೇಶ್ವರ ಜಾತ್ರೆ ಹಾಗೂ ಜೂನ್‍ನಲ್ಲಿ ದೂದಪೀರಾಂ ಮಹಾತ್ಮರ ಉರುಸ್ ನಡೆಯಿತು.
ಅ.10ರಿಂದ 19ರವರೆಗೆ ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ದಸರಾ ದರ್ಬಾರ್ ನಡೆಯಿತು. ಅ. 25ರಂದು ಮಂತ್ರಾಲಯ ಪಾದಯಾತ್ರೆ ಸಂಘದ 60ನೇ ವರ್ಷದ ಸಮಾರಂಭ ನಡೆಯಿತು.
ನವೆಂಬರ್‌ನಲ್ಲಿ ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯ ಎಸ್.ಪಿ. ಬಳಿಗಾರ ಅವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಆಯ್ಕೆಯಾದರು.
(ಮಾಹಿತಿ– ಜೋಮನ್ ವರ್ಗೀಸ್, ಬಸವರಾಜ ಪಟ್ಟಣಶೆಟ್ಟಿ, ಚಂದ್ರು ರಾಥೋಡ್, ಬಸವರಾಜ ಹಲಕುರ್ಕಿ, ನಾಗರಾಜ ಹಣಗಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.