ADVERTISEMENT

ಯೂಟ್ಯೂಬ್‌ ವಿಡಿಯೊ ನೋಡಿ ಡ್ರ್ಯಾಗನ್‌ ಫ್ರುಟ್‌ ಬೆಳೆದ ಯುವ ರೈತ ಸುರೇಶ ಚವ್ಹಾಣ

ಶ್ರೀಶೈಲ ಎಂ.ಕುಂಬಾರ
Published 6 ಅಕ್ಟೋಬರ್ 2023, 6:49 IST
Last Updated 6 ಅಕ್ಟೋಬರ್ 2023, 6:49 IST
<div class="paragraphs"><p>ಗಜೇಂದ್ರಗಡ ಸಮೀಪದ ಗೌಡಗೇರಿ ಗ್ರಾಮದ ಯುವ ರೈತ ಸುರೇಶ ಚವ್ಹಾಣ ಡ್ರ್ಯಾಗನ್‌ ಪ್ರೂಟ್‌ ಹಣ್ಣುಗಳೊಂದಿಗೆ</p></div>

ಗಜೇಂದ್ರಗಡ ಸಮೀಪದ ಗೌಡಗೇರಿ ಗ್ರಾಮದ ಯುವ ರೈತ ಸುರೇಶ ಚವ್ಹಾಣ ಡ್ರ್ಯಾಗನ್‌ ಪ್ರೂಟ್‌ ಹಣ್ಣುಗಳೊಂದಿಗೆ

   

ಗಜೇಂದ್ರಗಡ: ಯೂಟ್ಯೂಬ್‌ನಲ್ಲಿ ಡ್ರ್ಯಾಗನ್‌ ಫ್ರುಟ್‌ ಬೆಳೆ ಬೆಳೆಯುವ ಕುರಿತ ವಿಡಿಯೊ ನೋಡಿ ನರೇಗಾ ಯೋಜನೆ ಯೋಜನೆ ಅಡಿ ಡ್ರ್ಯಾಗನ್‌ ಫ್ರುಟ್‌ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುವ ಯುವ ರೈತ ಸುರೇಶ ಚವ್ಹಾಣ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸಮೀಪದ ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌಡಗೇರಿ ಗ್ರಾಮದ ಯುವ ರೈತ ಸುರೇಶ ಶೇಖಪ್ಪ ಚವ್ಹಾಣ್ ಕೃಷಿಕರ ಕುಟುಂಬದವರಾಗಿದ್ದು, ತಮ್ಮ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಅದರಿಂದ ಲಾಭ ಸಿಗುತ್ತಿರಲಿಲ್ಲ.

ADVERTISEMENT

ತಮ್ಮ ಜಮೀನಿನಲ್ಲಿ ಒಣ ಬೇಸಾಯ ಮಾಡಿ ಮಳೆ ಕೈಕೊಟ್ಟಾಗ ನಷ್ಟ ಅನುಭವಿಸಿದ್ದರು. ಕೊಳವೆ ಬಾವಿ ನೀರೂ ಸಹ ಕಡಿಮೆ ಆಗಿದ್ದರಿಂದ ಸುರೇಶ ಕೃಷಿ ಬಿಟ್ಟು ಕುರಿ ಕಾಯುವ ಕೆಲಸ ಆರಂಭಿಸಿದರು. ಕುರಿ ಕಾಯುವಾಗ ಯೂಟ್ಯೂಬ್‌ನಲ್ಲಿ ಕಡಿಮೆ ನೀರಿನಲ್ಲಿ ಹಾಗೂ ಶುಷ್ಕ ವಾತಾವರಣದಲ್ಲಿ ಬೆಳೆಯುವ ಡ್ರ್ಯಾಗನ್‌ ಪ್ರೂಟ್‌ ಬೆಳೆ ಕುರಿತು ವಿಡಿಯೊ ನೋಡಿ ನಮ್ಮ ಹೊಲದಲ್ಲಿಯೂ ಬೆಳೆಯೋಣ ಎಂದು ನಿರ್ಧರಿಸಿದರು.

ಸುರೇಶ ತಮ್ಮ 1 ಎಕರೆ ಜಮೀನಿನಲ್ಲಿ ಸುಮಾರು ₹3 ಲಕ್ಷ ಬಂಡವಾಳ ಹಾಕಿ 1200 ಡ್ರ‍್ಯಾಗನ್ ಫ್ರುಟ್ ಸಸಿಗಳನ್ನು ನಾಟಿ ಮಾಡಿದರು. ಗಿಡಗಳಿಗೆ ಕಲ್ಲಿನ ಕಂಬ ಹಾಕಿ, ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಅಲ್ಲದೆ ತೋಟಗಾರಿಕೆ ಇಲಾಖೆಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ₹85 ಸಾವಿರ ಸಹಾಯಧನ ಪಡೆದಿದ್ದಾರೆ. ಮೊದಲ ವರ್ಷದಲ್ಲಿಯೇ ₹1 ಲಕ್ಷ ಆದಾಯ ಗಳಿಸಿದ್ದಾರೆ.

ಉಷ್ಣ ವಲಯದಲ್ಲಿ ಬೆಳೆಯುವ ಡ್ರ್ಯಾಗನ್‌ ಪ್ರೂಟ್‌ ಕಡಿಮೆ ಕ್ಯಾಲೊರಿ ಹಾಗೂ ವಿಟಮಿನ್‌ ಸಿ, ಬಿ1, ಬಿ2, ಬಿ3, ಐರನ್‌, ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ಹೇರಳವಾಗಿ ಹೊಂದಿರುತ್ತದೆ.

‘ನಮ್ಮ 2 ಎಕರೆ ಜಮೀನಿನಲ್ಲಿ ಜೋಳ, ಸಜ್ಜೆ, ಮೆಕ್ಕೆಜೋಳದಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದೆವು. ಮಳೆ ಕೈಕೊಟ್ಟಾಗ ಫಸಲು ಕೈಸೇರುತ್ತಿರಲಿಲ್ಲ. ನೀರಾವರಿ ಮಾಡಲು 5- 6 ಕೊಳವೆ ಬಾವಿ ಕೊರೆಸಿದರೂ ಸಮರ್ಪಕ ನೀರು ಸಿಗಲಿಲ್ಲ. ಒಂದು ಕೊಳವೆ ಬಾವಿಯಲ್ಲಿ ಸಿಕ್ಕ ಒಂದಿಂಚು ನೀರಿನಲ್ಲಿ ನೀರಾವರಿ ಮಾಡಲು ಸಾಧ್ಯವಿಲ್ಲವೆಂಬುದು ಅರಿವಾಯಿತು. ಹೀಗಾಗಿ ಕಡಿಮೆ ನೀರಿನಲ್ಲಿ ಬೆಳೆಯುವ ಡ್ರ್ಯಾಗನ್‌ ಫ್ರುಟ್‌ ಬೆಳೆದಿದ್ದೇನೆ. ಸದ್ಯ ಅದರಿಂದ ಉತ್ತಮ ಆದಾಯವೂ ಬರುತ್ತಿದೆ’ ಎಂದು ಸುರೇಶ ಚವ್ಹಾಣ ಹರ್ಷ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲೆಯ ಹಿರೇವಂಕಲಕುಂಟ, ಹೊಸಳ್ಳಿ ಗ್ರಾಮಗಳಲ್ಲಿನ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಡ್ರ್ಯಾಗನ್‌ ಫ್ರುಟ್‌ ಬೆಳೆಯಲು ನಿರ್ಧರಿಸಿದೆ ಎನ್ನುತ್ತಾರೆ ಅವರು.

ಯುವ ರೈತ ಸುರೇಶ ಚವ್ಹಾಣ ಡ್ರ್ಯಾಗನ್‌ ಪ್ರೂಟ್‌ ಹಣ್ಣು ತೋರಿಸುತ್ತಿರುವುದು
ಗಜೇಂದ್ರಗಡ ತಾಲ್ಲೂಕು ಪಂಚಾಯ್ತಿ ಇಒ ಡಾ.ಡಿ.ಮೋಹನ್

ಒಂದು ಎಕರೆಯಲ್ಲಿ ಡ್ರ್ಯಾಗನ್‌ ಫ್ರುಟ್‌ ಸಸಿ ನಾಟಿ ಮಾಡಿದೆ. ಈಗ ಫಸಲು ಬರುತ್ತಿದ್ದು ಜನ ತೋಟಕ್ಕೆ ಬಂದು ಹಣ್ಣು ಖರಿದಿಸುತ್ತಿದ್ದಾರೆ

–ಸುರೇಶ ಚವ್ಹಾಣ್ ಡ್ರ‍್ಯಾಗನ್‌ ಪ್ರೂಟ್‌ ಬೆಳೆದ ರೈತ

ಸುರೇಶ ಚವ್ಹಾಣ್ ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯಡಿ ಸಹಾಯಧನ ಪಡೆದು ಡ್ರ‍್ಯಾಗನ್ ಫ್ರೂಟ್ ಬೆಳೆದು ಯುವ ರೈತರಿಗೆ ಮಾದರಿಯಾಗಿದ್ದಾರೆ

–ಡಾ.ಡಿ. ಮೋಹನ ಇಒ ತಾಲ್ಲೂಕು ಪಂಚಾಯ್ತಿ ಗಜೇಂದ್ರಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.