ADVERTISEMENT

‘ಹೋರಾಟದ ಬದುಕು ಕಲ್ಲು, ಮುಳ್ಳಿನದ್ದು’

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 14:20 IST
Last Updated 6 ಅಕ್ಟೋಬರ್ 2024, 14:20 IST
ಗದಗ ಜಿಲ್ಲಾ ಕೆಡಿಪಿ ನೂತನ ಸದಸ್ಯರಾಗಿ ಆಯ್ಕೆಯಾದ ಎಸ್.ಎನ್.ಬಳ್ಳಾರಿ ಅವರನ್ನು ಮುಂಡರಗಿಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಸನ್ಮಾನಿಸಿದರು
ಗದಗ ಜಿಲ್ಲಾ ಕೆಡಿಪಿ ನೂತನ ಸದಸ್ಯರಾಗಿ ಆಯ್ಕೆಯಾದ ಎಸ್.ಎನ್.ಬಳ್ಳಾರಿ ಅವರನ್ನು ಮುಂಡರಗಿಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಸನ್ಮಾನಿಸಿದರು   

ಮುಂಡರಗಿ: 'ನಿಸ್ವಾರ್ಥದಿಂದ ನಿತ್ಯ ಜನಪರವಾಗಿ ಹೋರಾಡುವವರನ್ನು ಸಮಾಜ ಸದಾ ಸ್ಮರಿಸುತ್ತದೆ. ಆದರೆ ಹೋರಾಟದ ಹಾದಿ ಸದಾ ಕಲ್ಲು, ಮುಳ್ಳುಗಳಿಂದ ಕೂಡಿರುತ್ತದೆ. ಹೋರಾಟಗಾರರು ಅವೆಲ್ಲವನ್ನು ಮೆಟ್ಟಿನಿಂತು ಜನ ಸಾಮಾನ್ಯರು ಹಾಗೂ ಸಾರ್ವಜನಿಕರ ನ್ಯಾಯಕ್ಕಾಗಿ ಹೋರಾಟ ಮಾಡಬೇಕು' ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ತಿಳಿಸಿದರು.

ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಸೇರಿದಂತೆ ತಾಲ್ಲೂಕಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೆಡಿಪಿ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಎನ್.ಬಳ್ಳಾರಿ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ನೂತನ ಕೆಡಿಪಿ ಸದಸ್ಯ ಎಸ್.ಎನ್.ಬಳ್ಳಾರಿ ಮಾತನಾಡಿ, ಸಂವಿಧಾನ ನೀಡಿದ ಶಕ್ತಿ ಹಾಗೂ ಸಮಾನತೆಯ ತಳಹದಿಯ ಮೇಲೆ ಕೈಗೊಳ್ಳುವ ಹೋರಾಟಗಳಿಗೆ ಸದಾ ಗೆಲುವು ದೊರೆಯುತ್ತದೆ. ಜಾತ್ಯತೀತ ಸಮಾಜ ಮತ್ತು ಸಂವಿಧಾನಗಳು ಗಟ್ಟಿಯಾಗಿ ನೆಲೆಯೂರಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲ ಸಂವಿಧಾನದ ಆಸೆಯಗಳಿಗೆ ತಕ್ಕಂತೆ ಬದುಕಬೇಕು ಎಂದು ತಿಳಿಸಿದರು.

ADVERTISEMENT

ಪುರಸಭೆ ಸದಸ್ಯ ರಾಜಾಭಕ್ಷಿ ಬೆಟಗೇರಿ ಮಾತನಾಡಿ, ಮುಂಡರಗಿ ತಾಲ್ಲೂಕು ಎಲ್ಲ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದಿದ್ದು, ಅದರ ಅಭಿವೃದ್ಧಿಗೆ ಎಸ್.ಎನ್.ಬಳ್ಳಾರಿಯವರು ಶ್ರಮಿಸಬೇಕು. ತಾಲ್ಲೂಕಿನ ಸಮಸ್ಯೆಗಳಿಗೆ ಕೆಡಿಪಿ ಸಭೆಗಳಲ್ಲಿ ಧ್ವನಿ ಎತ್ತಬೇಕು. ಮೊದಲಿನಂತೆ ಜನಸಾಮಾನ್ಯರ ದ್ವನಿಯಾಗಿ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಮುಖಂಡರಾದ ಮೈಲಾರೆಪ್ಪ ಕಲಕೇರಿ, ಮಂಜುನಾಥ ಮುಂಡವಾಡ, ಸುರೇಶ ಕ್ಯಾದಿಗಿಹಳ್ಳಿ, ಫಕ್ರುಸಾಬ್ ಹಾರೋಗೇರಿ, ಮಾರುತಿ ಗುಡಿಮನಿ, ಮಂಜುನಾಥ ತಳಗೇರಿ, ಸುರೇಶ ಕಲ್ಲಕುಟಿಗರ, ರಾಜು ಡಾವಣಗೇರಿ ಮತ್ತಿತರರು ಮಾತನಾಡಿದರು.

ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸೇರಿದಂತೆ ತಾಲ್ಲೂಕಿನ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಎಸ್.ಎನ್.ಬಳ್ಳಾರಿ ಅವರನ್ನು ಸನ್ಮಾನಿಸಿದರು.

ಡಿಎಸ್ಎಸ್ ತಾಲ್ಲೂಕು ಸಂಚಾಲಕ ಸೋಮಣ್ಣ ಹೈತಾಪೂರ, ಲಕ್ಷ್ಮಣ ತಗಡಿನಮನಿ, ನಬಿಸಾಬ್ ಕೆಲೂರ, ಹುಸೇನಸಾಬ್ ಕಾತರಕಿ, ಎಂ.ಕೆ.ತಳಗಡೆ, ದುದ್ದುಸಾಬ್ ಕಾತರಕಿ, ಡಿ.ಎಂ.ಕಾತರಕಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.