ಲಕ್ಷ್ಮೇಶ್ವರ: ಮಿಶ್ರ ಕೃಷಿ ಮಾಡುತ್ತ ಬರಡು ಭೂಮಿಯಲ್ಲಿ ಬಂಪರ್ ಬೆಳೆ ಪಡೆದು ಮಾದರಿ ಆಗಿದ್ದಾರೆ ಲಕ್ಷ್ಮೇಶ್ವರ ತಾಲ್ಲೂಕು ಗೊಜನೂರು ಗ್ರಾಮದ ಯುವ ರೈತ ವೈ.ಡಿ. ಪಾಟೀಲ.
ಸದ್ಯ ಒಂದು ಎಕರೆಯಲ್ಲಿ ಇಸ್ರೇಲ್ ಕೃಷಿ ಪದ್ಧತಿಯಲ್ಲಿ ಡ್ರ್ಯಾಗನ್ ಫ್ರುಟ್, ಒಂದು ಎಕರೆಯಲ್ಲಿ ಕೋಳಿ ಫಾರ್ಮ್, ಒಂದು ಎಕರೆಯಲ್ಲಿ ಚಿಕ್ಕು, ಮಾವು, ತೆಂಗು, ನೆಲ್ಲಿ, ಕರಿಬೇವು, ಪಪ್ಪಾಯಿ, ಬಾಳೆ ಬೆಳೆಯುತ್ತಿದ್ದಾರೆ. ಇವುಗಳ ಜೊತೆ ಅಂತರ್ ಬೆಳೆಗಳನ್ನಾಗಿ ಶೇಂಗಾ, ಹೆಸರು, ಹತ್ತಿಯನ್ನೂ ಬೆಳೆಯುತ್ತಿದ್ದಾರೆ.
ವೈ.ಡಿ. ಪಾಟೀಲರು ಯಾರಿಗೂ ಬೇಡವಾಗಿದ್ದ ಐದು ಎಕರೆ 12 ಗುಂಟೆ ಬಂಜರು ಭೂಮಿ ಖರೀದಿಸಿ ಮೂರ್ನಾಲ್ಕು ಕೊಳವೆ ಬಾವಿಗಳನ್ನು ಕೊರೆಸಿದರೂ ಒಂದು ಇಂಚು ನೀರು ಮಾತ್ರ ಲಭ್ಯವಾಯಿತು. ಸಿಕ್ಕಷ್ಟು ನೀರನ್ನೇ ಬಳಸಿಕೊಂಡು ಇವರು ಹನಿ ನೀರಾವರಿ ಮೂಲಕ ತೋಟಗಾರಿಕೆ ಶುರು ಮಾಡಿದರು.
ನರೇಗಾ ಯೋಜನೆಯಡಿ ₹1.30 ಲಕ್ಷ ಅನುದಾನದಲ್ಲಿ ಡ್ರ್ಯಾಗನ್ ಫ್ರುಟ್ ಮತ್ತು ತೋಟಗಾರಿಕೆ ಇಲಾಖೆಯಿಂದ ₹70 ಸಾವಿರದಲ್ಲಿ ಒಂದು ಕೆರೆ, ಗ್ರಾಮ ಪಂಚಾಯ್ತಿ ವತಿಯಿಂದ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ಕಟ್ಟಲು ₹57ಸಾವಿರ ಸಹಾಯಧನ ಪಡೆದುಕೊಂಡಿದ್ದಾರೆ. ಐದು ಎಕರೆಯಲ್ಲಿ ಜವಾರಿ ಆಕಳು, 50 ಮೊಲ, 50 ಜವಾರಿ ಕೋಳಿ, ಗಿರಿರಾಣಿ, ಗಿರಿರಾಜ ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಕೇವಲ ಒಂದಿಂಚು ನೀರಲ್ಲಿ ಕೃಷಿ ಮಾಡುತ್ತಿರುವ ಇವರು ಡ್ರ್ಯಾಗನ್ ಫ್ರುಟ್ ಬೆಳೆದು ತಿಂಗಳಿಗೆ ₹1 ಲಕ್ಷ ಆದಾಯ ಗಳಿಸುತ್ತಿರುವುದು ವಿಶೇಷ.
ವೈ.ಡಿ. ಪಾಟೀಲ ಮೂಲತಃ ಗೊಜನೂರು ಸಮೀಪದ ಮಾಗಡಿ ಗ್ರಾಮದವರು. ವೈದ್ಯಕೀಯ ವೃತ್ತಿಯೊಂದಿಗೆ ಕೃಷಿ ಮಾಡುತ್ತಿದ್ದಾರೆ. ಇವರು 2022ರಲ್ಲಿ ಒಂದು ಎಕರೆ ಭೂಮಿಯಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಂಡು, ಕಡಿಮೆ ಭೂಮಿಯಲ್ಲಿ ಹೆಚ್ಚು ಸಂಖ್ಯೆಯ ಡ್ರ್ಯಾಗನ್ ಫ್ರುಟ್ ಸಸಿಗಳನ್ನು ನಾಟಿ ಮಾಡಿದ್ದಾರೆ. ಸಾಮಾನ್ಯ ಪದ್ಧತಿಯಲ್ಲಿ 3,200 ಸಸಿಗಳನ್ನು ಎರಡು ಎಕರೆಯಲ್ಲಿ ನಾಟಿ ಮಾಡಲಾಗುತ್ತದೆ. ಆದರೆ ಇವರು ಒಂದೇ ಎಕರೆಯಲ್ಲಿ 3,200 ಅಗಿಗಳನ್ನು ನಾಟಿ ಮಾಡಿ ಯಶಸ್ಸು ಕಂಡಿದ್ದಾರೆ.
ಬೆಳೆಯುವ ವಿಧಾನ, ವೆಚ್ಚ: ಒಂದು ಎಕರೆಯಲ್ಲಿ 300 ಕಂಬಗಳನ್ನು ಅಳವಡಿಸಿ, ಒಟ್ಟು 3,200 ಸಸಿ ನಾಟಿ ಮಾಡಿದ್ದಾರೆ. ಇವುಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸುತ್ತಿದ್ದು, ಇದಕ್ಕಾಗಿ ₹4.5 ಲಕ್ಷ ಖರ್ಚು ಮಾಡಿದ್ದಾರೆ. ನಾಟಿ ಮಾಡಿದ ವರ್ಷದ ನಂತರ ಇಳುವರಿ ಆರಂಭವಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣ್ಣು ಕಟಾವಿಗೆ ಬರುತ್ತದೆ. ಈ ಬೆಳೆಗೆ ರೋಗ ಕಡಿಮೆ. ಆಕಳು ಮತ್ತು ಕೋಳಿ ಗೊಬ್ಬರ ಹಾಕಿ ಹಣ್ಣು ಬೆಳೆಯುತ್ತಿದ್ದಾರೆ. ಒಂದು ಬಾರಿ ಖರ್ಚು ಮಾಡಿದರೆ 20 ವರ್ಷಗಳವರೆಗೆ ಆದಾಯ ಬರುತ್ತಲೇ ಇರುತ್ತದೆ.
ಪಾಟೀಲರು ಗದಗ, ಲಕ್ಷ್ಮೇಶ್ವರದ ತಮ್ಮ ಪರಿಚಿತ ಹಣ್ಣು ಮಾರಾಟಗಾರರಿಗೆ ₹80ಕ್ಕೆ ಕೆ.ಜಿ. ಯಂತೆ ಮಾರಾಟ ಮಾಡಿ ಕಳೆದ ವರ್ಷ ₹1 ಲಕ್ಷ ಆದಾಯ ಪಡೆದಿದ್ದಾರೆ. ಸದ್ಯ ₹120 ದರ ಇದ್ದು ಈ ವರ್ಷ ₹2 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಕೋಳಿ, ಮೊಲ ಸಾಕಾಣಿಕೆಯಿಂದಲೂ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಅದರೊಂದಿಗೆ ಚಿಕ್ಕು, ಮಾವು ಸೇರಿದಂತೆ ಮತ್ತಿತರ ಹಣ್ಣಿನ ಬೆಳೆಗಳಿಂದ ಮುಂದಿನ ದಿನಗಳಲ್ಲಿ ಉತ್ತಮ ಆದಾಯ ನಿರೀಕ್ಷಿಸಿದ್ದಾರೆ.
‘ಯುವ ಜನತೆ ಉದ್ಯೋಗ ಅರಸಿ ಬೇರೆ ಊರುಗಳಿಗೆ ಹೋಗದೆ ಇರುವ ಭೂಮಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ. ನನ್ನ ಪ್ರಯತ್ನಕ್ಕೆ ತೋಟಗಾರಿಕೆ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ’ ಎಂದು ರೈತ ವೈ.ಡಿ. ಪಾಟೀಲ ನೆನೆಯುತ್ತಾರೆ.
ನರೇಗಾ ಯೋಜನೆಯ ಲಾಭ ಪಡೆದ ರೈತ ವೈ.ಡಿ. ಪಾಟೀಲ ಸಾವಯವ ಪದ್ಧತಿಯಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆದು ಲಾಭ ಮಾಡಿಕೊತ್ತಿದ್ದಾರೆ. ಇದು ಯೋಜನೆಯ ಮಹತ್ವವನ್ನು ಬಿಂಬಿಸುತ್ತಿದೆ–ಕೃಷ್ಣಪ್ಪ ಧರ್ಮರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೇಶ್ವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.