ಗಜೇಂದ್ರಗಡ: ಸಮೀಪದ ಜಿಗೇರಿ ಗ್ರಾಮದ ರೈತ ಸಂಜೀವಪ್ಪ ಲೆಕ್ಕಿಹಾಳ ಅವರು ತೋಟಗಾರಿಕೆ ಬೆಳೆಯಲ್ಲಿ ತೊಡಗಿಸಿಕೊಂಡಿದ್ದು, ಪಪ್ಪಾಯ ಬೆಳೆದು ಯಶಸ್ಸು ಕಂಡಿದ್ದಾರೆ. ಕೈ ತುಂಬ ಆದಾಯ ಗಳಿಸುವ ಮೂಲಕ ಯುವ ರೈತರಿಗೆ ಮಾದರಿಯಾಗಿದ್ದಾರೆ.
ಎಂ.ಎ, ಬಿ.ಇಡಿ ಪದವೀಧರರಾಗಿದ್ದು, ಗ್ರಾಮದಲ್ಲಿ ತಮ್ಮ 14.09 ಎಕರೆ ಜಮೀನಿನಲ್ಲಿ 2 ಕೊಳವೆ ಬಾವಿಗಳಿಂದ ಸಿಗುವ 3.5 ಇಂಚು ನೀರಿನಲ್ಲಿ ನೀರಾವರಿ ಬೇಸಾಯ ಮಾಡುತ್ತಿದ್ದಾರೆ. ಜಮೀನಿನಲ್ಲಿ ಗೋವಿನಜೋಳ, ಶೇಂಗಾ ಸೇರಿದಂತೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಒಂದು ವರ್ಷದ ಹಿಂದೆ 5 ಎಕರೆ ಜಮೀನಿನಲ್ಲಿ4,500 ಪಪ್ಪಾಯಿ ಸಸಿಗಳನ್ನು ಮೀರಜ್‌ನಿಂದ ತಂದು ನೆಟ್ಟಿದ್ದಾರೆ. ಒಂದು ಸಸಿಗೆ ₹12 ದರ. ಸಸಿ ನಾಟಿ ಮಾಡುವುದಕ್ಕೆ ತೋಟಗಾರಿಕೆ ಇಲಾಖೆಯಿಂದ ಉದ್ಯೋಗ ಖಾತರಿ ಯೋಜನೆಯಡಿ ಸಹಾಯಧನ ಪಡೆದುಕೊಂಡಿದ್ದಾರೆ. ಪಪ್ಪಾಯಿಗೆ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ.
ಸದ್ಯಕ್ಕೆ ತೋಟದಲ್ಲಿ ಹಣ್ಣುಗಳು ಸಮೃದ್ದವಾಗಿ ಬೆಳೆದಿದ್ದು, 15 ದಿನಗಳಿಗೊಮ್ಮೆ ಕಟಾವು ಮಾಡುತ್ತಿದ್ದಾರೆ. ಬೆಂಗಳೂರಿನಿಂದ ವ್ಯಾಪಾರಿಗಳು ತೋಟಕ್ಕೆ ಬಂದು ದರ ನಿಗದಿ ಮಾಡಿ ಅವರೇ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಎಂಟು ಬಾರಿ ಹಣ್ಣುಗಳನ್ನು ಕಟಾವು ಮಾಡಿದ್ದು, ಪ್ರತಿ ಕಟಾವಿಗೆ 4 ರಿಂದ 5 ಟನ್ ಹಣ್ಣು ಸಿಗುತ್ತಿದೆ.
ಹಣ್ಣನ್ನು ಗರಿಷ್ಠ ₹25ರಿಂದ ಕನಿಷ್ಠ ₹6 ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಉತ್ತಮ ಬೆಲೆ ಸಿಗುತ್ತಿದ್ದು, ಪ್ರತಿ ಕಟಾವಿಗೆ ₹1 ಲಕ್ಷದವರೆಗೂ ಆದಾಯ ಪಡೆಯುತ್ತಿದ್ದಾರೆ.
‘ಪಪ್ಪಾಯ ಕೃಷಿ ಮಾಡಲು ಶ್ರಮ ಮತ್ತು ತಾಳ್ಮೆ ಬೇಕು. ಆರಂಭದಲ್ಲಿ ಖರ್ಚು ಜಾಸ್ತಿ ಬರುತ್ತದೆ. ಅಲ್ಲದೆ ಬೆಳೆಗೆ ಮುಟುರು ರೋಗ ಹಾಗೂ ವೈರಸ್ ಕಾಟದಿಂದ ಬಹಳಷ್ಟು ಗಿಡಗಳು ಹಾಳಾಗುತ್ತವೆ. ಬೆಳೆ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಅನುಭವಿ ರೈತರಿಂದ ಮಾಹಿತಿ ಪಡೆದು ನಿರ್ವಹಣೆ ಮಾಡುತ್ತಿದ್ದೇವೆ. ನಮ್ಮ ಅಣ್ಣನ ಮಗ ಕುಮಾರ ಅಡಿವೇಪ್ಪ ಲೆಕ್ಕಿಹಾಳ ತೋಟವನ್ನು ಬಹುತೇಕ ಆತನೇ ನಿರ್ವಹಣೆ ಮಾಡುತ್ತಿದ್ದಾನೆʼ ಎಂದು ಯುವ ರೈತ ಸಂಜೀವಪ್ಪ ತಿಳಿಸಿದರು.
ಪಪ್ಪಾಯ ಕೃಷಿ ಲಾಟರಿ ಇದ್ದಂತೆ. ಶ್ರಮ ಮತ್ತು ತಾಳ್ಮೆಯಿಂದ ತೋಟ ನಿರ್ವಹಣೆ ಮಾಡುವುದರ ಜೊತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಎಕರೆಗೆ ಖರ್ಚು ಕಳೆದು ₹2 ಲಕ್ಷಕ್ಕೂ ಅಧಿಕ ಲಾಭ ಗಳಿಸಬಹುದು.–ಸಂಜೀವಪ್ಪ ಲೆಕ್ಕಿಹಾಳ, ಜಿಗೇರಿ ಗ್ರಾಮದ ರೈತ
ಲೆಕ್ಕಿಹಾಳ ಅವರು ಇಲಾಖೆಯಿಂದ ಸೌಲಭ್ಯ ಪಡೆಯುವುದರ ಜೊತೆಗೆ ಅತ್ಯಂತ ಶ್ರದ್ಧೆಯಿಂದ ತೋಟ ನಿರ್ವಹಣೆ ಮಾಡಿದ್ದು ಸಮೃದ್ಧ ಪಸಲು ತೆಗೆಯುತ್ತಿದ್ದಾರೆ. ಯುವ ರೈತರಿಗೆ ಮಾದರಿಯಾಗಿದ್ದಾರೆ.–ಮಹಾಂತೇಶ ಅಂಟಿನ, ಸಹಾಯಕ ಅಧಿಕಾರಿ ತೋಟಗಾರಿಕೆ ಇಲಾಖೆ ರೋಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.