ಲಕ್ಷ್ಮೇಶ್ವರ: ಒಂದೂವರೆ ತಿಂಗಳಿಂದ ಸತತ ಸುರಿದ ಮಳೆ ದೀಪಾವಳಿ ನಂತರ ಬಿಡುವು ನೀಡಿದೆ. ಈಗ ಹಿಂಗಾರು ಬಿತ್ತನೆ ಬಿರುಸು ಪಡೆದುಕೊಂಡಿದೆ.
ಮಳೆ ನಿಲ್ಲುವುದನ್ನೇ ಕಾಯುತ್ತಿದ್ದ ರೈತರು ಬಿಳಿಜೋಳ, ಕಡಲೆ, ಕುಸುಬಿ, ಗೋಧಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಸದ್ಯ ಉತ್ತಮ ಮಳೆ ಆಗಿದ್ದು ಹಿಂಗಾರು ಬೆಳೆಗಳು ಚೆನ್ನಾಗಿ ಫಸಲು ನೀಡಬಹುದು ಎಂಬ ನಿರೀಕ್ಷೆ ರೈತರದು.
ವಿಶೇಷ ಎಂದರೆ ಮುಂಗಾರು ಹಂಗಾಮಿನ ಬೆಳೆಗಳನ್ನು ಎರೆ ಭೂಮಿಗಳಲ್ಲಿ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ. ಅದರಲ್ಲೂ ಗೋಧಿ, ಕುಸುಬೆ, ಬಿಳಿಜೋಳ ಮತ್ತು ಕಡಲೆ ತಂಪು ಹವಾಗುಣದಲ್ಲಿ ಬೆಳೆಯುವ ಬೆಳೆಗಳು.
ಪ್ರಸ್ತುತ ಸಾಲಿನಲ್ಲಿ 3,800 ಹೆಕ್ಟೇರ್ ತೃಣ ಧಾನ್ಯ, 7,870 ಹೆಕ್ಟೇರ್ ದ್ವಿದಳ ಧಾನ್ಯ, 3,860 ಹೆಕ್ಟೇರ್‌ಗಳಲ್ಲಿ ಎಣ್ಣೆ ಕಾಳು, 1,300 ಹೆಕ್ಟೇರ್‌ಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಉದ್ದೇಶಿಸಲಾಗಿದೆ. 2,700 ಹೆಕ್ಟೇರ್‌ಗಳಲ್ಲಿ ಬಿಳಿಜೋಳ, 6,700 ಹೆಕ್ಟೇರ್‌ಗಳಲ್ಲಿ ಕಡಲೆ, 1,000 ಹೆಕ್ಟೇರ್‌ಗಳಲ್ಲಿ ಕುಸುಬೆ ಮತ್ತು 500 ಹೆಕ್ಟೇರ್‌ಗಳಲ್ಲಿ ಗೋಧಿ ಬಿತ್ತನೆ ಆಗಬಹುದು ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ.
ಈ ವರ್ಷ ಆರಂಭದಲ್ಲಿಯೇ ಹಿಂಗಾರು ಮಳೆ ಚೆನ್ನಾಗಿ ಸುರಿದಿರುವುದು ಅನ್ನದಾತರಲ್ಲಿ ಆಶಾಭಾವ ಮೂಡಿಸಿದೆ. ಹೆಚ್ಚು ತಂಪು ವಾತಾವರಣ ಬಿಟ್ಟಷ್ಟು ಹಿಂಗಾರು ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ. ಈ ವರ್ಷ ನಿರಂತರ ಮಳೆ ಆಗಿರುವ ಕಾರಣ ಹೆಚ್ಚು ಪ್ರಮಾಣದಲ್ಲಿ ತಂಪು ಬಿಡಬಹುದು ಎಂದು ರೈತರು ಲೆಕ್ಕಾಚಾರ ಹಾಕಿದ್ದಾರೆ.
‘ಈ ವರ್ಷ ಹಿಂಗಾರು ಮಳೆ ಚೆನ್ನಾಗಿ ಆಗಿದ್ದು ಹಿಂಗಾರು ಬೆಳೆ ಉತ್ತಮವಾಗಿ ಬೆಳೆಯುವ ಲಕ್ಷಣಗಳು ಇವೆ’ ಎಂದು ಗೊಜನೂರು ಗ್ರಾಮದ ರೈತ ಚೆನ್ನಪ್ಪ ಷಣ್ಮುಖಿ ಮತ್ತು ರಾಮಗೇರಿ ಗ್ರಾಮದ ದೇವೇಂದ್ರ ಬೆಟಗೇರಿ ಅಭಿಪ್ರಾಯಪಟ್ಟರು.
‘ಉತ್ತಮ ಮಳೆಯಿಂದಾಗಿ ಹಿಂಗಾರು ಬೆಳೆಗೆ ಅನುಕೂಲವಾಗಿದೆ. ವಾತಾವರಣ ಹೀಗೆಯೇ ಅನುಕೂಲಕರವಾಗಿದ್ದರೆ ಬೆಳೆ ಚೆನ್ನಾಗಿ ಬರಬಹುದು’ ಎಂದು ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.