ಲಕ್ಷ್ಮೇಶ್ವರ: ಎಲ್ಲ ಕ್ಷೇತ್ರಗಳಂತೆ ಕೃಷಿ ಕ್ಷೇತ್ರದಲ್ಲೂ ಆಧುನಿಕ ತಂತ್ರಜ್ಞಾನ ಕಾಲಿಟ್ಟಿದ್ದು ರೈತರು ಈಚಿನ ದಿನಗಳಲ್ಲಿ ತಂತ್ರಜ್ಞಾನ ಅರಿತು ಕೃಷಿ ಮಾಡುತ್ತಿದ್ದಾರೆ. ಅಲ್ಪ ಸಮಯದಲ್ಲಿ ಲಭ್ಯ ಇದ್ದಷ್ಟು ನೀರನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯುವ ತಂತ್ರಜ್ಞಾನವನ್ನು ಲಕ್ಷ್ಮೇಶ್ವರ ಸಮೀಪದ ಮಂಜಲಾಪುರದ ಪ್ರಗತಿಪರ ರೈತ ಭಾಷಾಸಾಬ್ ನೀರಲಗಿ ತಮ್ಮ ಹೊಲದಲ್ಲಿ ಅಳವಡಿಸಿದ್ದಾರೆ.
ಸದ್ಯ ಬಾಷಾಸಾಬ್ ಅವರು ತಾಲ್ಲೂಕಿನ ಉಳ್ಳಟ್ಟಿ ಗ್ರಾಮದಲ್ಲಿ ಎಂಟು ಎಕರೆಯಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದು ಬಳ್ಳಿಯಲ್ಲಿ ಕಾಯಿ ಬಿಟ್ಟು ಕಟಾವಿಗೆ ಕಾಯುತ್ತಿದೆ.
ಭೂಮಿ ತಯಾರಿ: ಕಲ್ಲಂಗಡಿ ಸಸಿ ನಾಟಿ ಮಾಡುವ ಪೂರ್ವದಲ್ಲಿ ಇವರು ಭೂಮಿಯನ್ನು ಹರಗಿ ಸ್ವಚ್ಛ ಮಾಡಿ ಏರು ಮಡಿ ನಿರ್ಮಿಸಿಕೊಂಡಿದ್ದರು. ನಂತರ ಪ್ಲಾಸ್ಟಿಕ್ ಹೊದಿಕೆ ಮಾಡಿದ್ದರು. ಇದಕ್ಕೂ ಮೊದಲು ಇಡೀ ಹೊಲದಲ್ಲಿ ಡ್ರಿಪ್ ಪೈಪ್‍ಲೈನ್ ಅಳವಡಿಸಿಕೊಂಡಿದ್ದರು.
ಸಸಿ ನಾಟಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕು ಕಲ್ಲೊಳ್ಳಿ ಗ್ರಾಮದಲ್ಲಿನ ನರ್ಸರಿಯೊಂದರಿಂದ ಪ್ರತಿ ಸಸಿಗೆ ಎರಡೂವರೆ ರೂಪಾಯಿ ಬೆಲೆಯಲ್ಲಿ ಖರೀದಿಸಿ ತಂದು ಸಸಿಯಿಂದ ಸಸಿಗೆ ಎರಡು ಅಡಿ ಅಂತರದಲ್ಲಿ ನಾಟಿ ಮಾಡಿಸಿದ್ದಾರೆ. ನಾಟಿ ಮಾಡುವಾಗ ಅಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಕೊಟ್ಟಿದ್ದರು. ಸೂಕ್ತ ಸಮಯದಲ್ಲಿ ನೀರುಣಿಸಿದ್ದರಿಂದ ಸಸಿಗಳು ಇಪ್ಪತ್ತು ದಿನಗಳಲ್ಲಿ ಸೊಗಸಾಗಿ ಬೆಳೆದು ಬಳ್ಳಿಗಳಲ್ಲಿ ಕಾಯಿ ಬಿಡಲು ಆರಂಭಿಸಿದವು. ಇನ್ನೊಂದು ವಾರದಲ್ಲಿ ಕೊಯ್ಲಿಗೆ ಬರಲಿದೆ.
ಡ್ರಿಪ್ ವ್ಯವಸ್ಥೆ: ಸಿಕ್ಕಷ್ಟು ನೀರನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಂಡು ಬೆಳೆಯಲು ಹನಿ ನೀರಾವರಿ ಪದ್ಧತಿ ಸೂಕ್ತ. ಈ ಕಾರಣಕ್ಕಾಗಿ ಇವರು ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶದ ಮೇರೆಗೆ ಹೊಲದಲ್ಲಿ ಡ್ರಿಪ್ ಅಳವಡಿಸಿ ಆ ಮೂಲಕ ನೀರಿನ ಸದ್ಬಳಕೆ ಮಾಡಿಕೊಡಿದ್ದಾರೆ.
ಖರ್ಚು ವೆಚ್ಚ: ಭೂಮಿ ಹದ ಮಾಡುವುದು, ಪ್ಲಾಸ್ಟಿಕ್ ಹೊದಿಕೆ, ಡ್ರಿಪ್ ಪೈಪ್‍ಲೈನ್, ಸಸಿ ಖರೀದಿ, ನಾಟಿ ಸೇರಿದಂತೆ ಬಾಷಾಸಾಬ್ ಎಕರೆಗೆ ₹ 80 ಸಾವಿರ ರೂಪಾಯಿಗಳಂತೆ ಎಂಟು ಎಕರೆಗೆ ₹ 6.40 ಲಕ್ಷ ಖರ್ಚು ಮಾಡಿದ್ದಾರೆ.
ಇಳುವರಿ: ಕಲ್ಲಂಗಡಿ ಅಲ್ಪಾವಧಿಯ ಬೆಳೆಯಾಗಿದ್ದು ಕೇವಲ 55-60 ದಿನಗಳಲ್ಲಿ ಫಸಲು ರೈತನ ಕೈ ಸೇರುತ್ತದೆ. ಎಕರೆಗೆ 20-25 ಟನ್ ಇಳುವರಿ ಬರುವ ನಿರೀಕ್ಷೆಯನ್ನು ಇವರು ಇಟ್ಟುಕೊಂಡಿದ್ದಾರೆ. ಇವರು ಬೆಳೆದಿರುವ ಮೆಲೊಡಿ ತಳಿಗೆ ಮಾರುಕಟ್ಟೆಯಲ್ಲಿ ಕೆಜಿಗೆ ₹ 16 ದರ ಇದೆ. ಈ ಬೆಲೆ ಸಿಕ್ಕರೂ ರೈತರಿಗೆ ಉತ್ತಮ ಆದಾಯ ದೊರೆಯುತ್ತದೆ.
‘ಈ ಬಾರಿ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ 50 ಹೆಕ್ಟೇರ್‌ನಲ್ಲಿ ರೈತರು ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಕಲ್ಲಂಗಡಿ ಕ್ರೇತ್ರೋತ್ಸವ ಮಾಡಿದ ನಂತರ ರೈತರು ಇದನ್ನು ಬೆಳೆಯಲು ಮುಂದಾಗಿರುವುದು ಖುಷಿ ಕೊಡುವ ವಿಷಯವಾಗಿದೆ. 2015ರಲ್ಲಿ ಇಸ್ರೇಲ್‌ಗೆ ಭೇಟಿ ನಂತರ ಅದೇ ಮಾದರಿಯಲ್ಲಿ ಕಲ್ಲಂಗಡಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತಿದ್ದೇವೆ’ ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.