ಶಿರಹಟ್ಟಿ: ತಾಲ್ಲೂಕಿನ ಸುಹನಹಳ್ಳಿಯ ಬಸವರಾಜ ನಾವಿ ಇವರ ಹೊಲದಲ್ಲಿ ಇತ್ತೀಚೆಗೆ 2024-25 ನೇ ಸಾಲಿನ ತಡ ಮುಂಗಾರು ಹಂಗಾಮಿನ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿಯಲ್ಲಿ ಬೆಂಡೆಕಾಯಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಿತು.
ಕೃಷಿ ವಿಜ್ಞಾನ ಕೇಂದ್ರದ ಕೃಷಿ ಎಂಜಿನಿಯರಿಂಗ್ ವಿಜ್ಞಾನಿ ವಿನಾಯಕ ನಿರಂಜನ್ ಮಾತನಾಡಿ, ಬೆಂಡೆಕಾಯಿ ಬೆಳೆಯಲ್ಲಿ ಅಧಿಕ ಹಾಗೂ ಗುಣಮಟ್ಟದ ಬೆಂಡೆಕಾಯಿ ಉತ್ಪಾದಕತೆಗಾಗಿ ಅರ್ಕಾ ನಿಖಿತಾ ಎಂಬ ಹೊಸ ಸಂಕರಣ ತಳಿಯನ್ನು ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ. ಸಮಗ್ರ ಬೆಳೆ ನಿರ್ವಹಣೆಯೊಂದಿಗೆ ಅಳವಡಿಸಲಾದ ಪ್ರಸ್ತುತ ತಳಿಯು ಅತ್ಯಂತ ಕಡಿಮೆ ಅವಧಿಯಲ್ಲಿ ಇಳುವರಿ ಬಿಡುತ್ತದೆ. ಇದರ ಸಮಗ್ರ ಮಾಹಿತಿ ಹಾಗೂ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೆವಿಕೆ ತೋಟಗಾರಿಕೆ ತಜ್ಞೆ ಹೇಮಾವತಿ ಹಿರೇಗೌಡರ ಮಾತನಾಡಿ, ಅರ್ಕಾ, ನಿಖಿತಾ ಒಂದು ಜೈವಿಕ ಬಲವರ್ಧಿತ ಸಂಕರಣ ತಳಿಯಾಗಿದ್ದು, ಬೇಗನೆ ಹೂವು ಬಿಟ್ಟು ಕಾಯಿಗಳನ್ನು ಕಟ್ಟುತ್ತದೆ. ಸುಮಾರು 125 ರಿಂದ 130 ದಿನಗಳ ಅವಧಿಯ ಬೇಸಾಯವಾಗಿದೆ. ಪ್ರತಿ ಎಕರೆಗೆ 8-9 ಟನ್ ಇಳುವರಿಯನ್ನು ಕೊಡುವ ಸಾಮರ್ಥ್ಯ ಹೊಂದಿದ್ದು ಈ ತಳಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರಿನಿಂದ ಬಿಡುಗಡೆಯಾಗಿದೆ ಎಂದರು.
ಬೆಂಡೆಕಾಯಿ ಬೆಳೆಯ ವೈಜ್ಞಾನಿಕ ಉತ್ಪಾದನಾ ತಂತ್ರಜ್ಞಾನಗಳ ಕುರಿತು ವಿವರಿಸಿದರು.
ಬಸವರಾಜ ನಾವಿ ಇವರು ತಮ್ಮ ಹೊಲದಲ್ಲಿ ಕೈಗೊಂಡ ಪ್ರಾತ್ಯಕ್ಷಿಕೆಯಲ್ಲಿ ಅಳವಡಿಸಿದ ವಿವಿಧ ಸಾವಯವ ಪರಿಕರಗಳ ಕುರಿತು ವಿವರಿಸಿದರು. ಅರ್ಕಾ, ನಿಖಿತ ಉತ್ತಮ ಇಳುವರಿ ಕೊಡುವುದರ ಜೊತೆಗೆ ರೋಗಗಳ ಬಾಧೆ ಕಡಿಮೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಕ್ಷೇತ್ರೋತ್ಸವದಲ್ಲಿ ವಿವಿಧ ಗ್ರಾಮದ ಯುವಕರು ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.