ADVERTISEMENT

ನರಗುಂದ |ಅಲ್ಪಾವಧಿ, ದೀರ್ಘಾವಧಿ ಬೆಳೆಗಳ ವೈವಿಧ್ಯ: ಕೃಷಿಯಲ್ಲಿ ರೈತನ ಪ್ರಯೋಗಶೀಲತೆ

ಬಸವರಾಜ ಹಲಕುರ್ಕಿ
Published 8 ನವೆಂಬರ್ 2024, 6:29 IST
Last Updated 8 ನವೆಂಬರ್ 2024, 6:29 IST
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಬೆಳೆದ ಕ್ಯಾಬೇಜ
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಬೆಳೆದ ಕ್ಯಾಬೇಜ   

ನರಗುಂದ: ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಶಂಕರಗೌಡ ಪಾಟೀಲ ತಮ್ಮ 80 ಎಕರೆ ಹೊಲದಲ್ಲಿ ವೈವಿಧ್ಯಮಯ ಬೆಳೆಗಳನ್ನು, ವಿವಿಧ ಹೊಸ ತಳಿಗಳನ್ನೂ ಬೆಳೆಸುತ್ತ ಪ್ರಯೋಗಶೀಲ ರೈತರೆನಿಸಿದ್ದಾರೆ.

ಪಿಯು ಶಿಕ್ಷಣ ಪಡೆದಿರುವ ಇವರು ಕಳೆದ 25 ವರ್ಷಗಳಿಂದ ಕೃಷಿಯನ್ನೇ ನಂಬಿ ಅದರಲ್ಲಿ ಸಫಲತೆ, ವಿಫಲತೆಯ ಜೊತೆ ಆರ್ಥಿಕ ಸಬಲತೆ ಸಾಧಿಸಿದ್ದಾರೆ. ಸಾಂಪ್ರದಾಯಿಕ ಪದ್ಧತಿಯೊಂದಿಗೆ ಸಮಗ್ರ ಕೃಷಿಯನ್ನೂ ರೂಢಿಸಿಕೊಂಡು ಮಾದರಿ ಎನಿಸಿದ್ದಾರೆ.

ಅಲ್ಪಾವಧಿ, ದೀರ್ಘಾವಧಿ ಬೆಳೆಗಳನ್ನು ಬೆಳೆದು ವಿವಿಧ ಬೆಳೆಗಳ ಹೊಸ ತಳಿಗಳ ಬೀಜಗಳನ್ನು ರಾಜ್ಯದ ವಿವಿಧ ಪ್ರದೇಶಗಳಿಂದ ತರಿಸಿಕೊಂಡು ಹೊಲದಲ್ಲಿ ಪ್ರಯೋಗ ನಡೆಸಿ ಅದರಿಂದ ಲಾಭ ಹೊಂದಿದ್ದಾರೆ. ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ, ಆಹಾರ ಬೆಳೆ, ತರಕಾರಿ, ಹಣ್ಣುಗಳನ್ನು ಬೆಳೆಯುವ ಮೂಲಕ ಪ್ರಗತಿಪರ ರೈತ ಎನಿಸಿದ್ದಾರೆ. ನೀರಾವರಿ ಹಾಗೂ ಖುಷ್ಕಿ ಭೂಮಿಯನ್ನು ಹೊಂದಿರುವ ಇವರಿಗೆ ಬೆಣ್ಣೆಹಳ್ಳದ ಪಂಪ್ ಸೆಟ್ ಹಾಗೂ ಕೃಷಿ ಭಾಗ್ಯದ ಮೂಲಕ ನಿರ್ಮಿಸಿಕೊಂಡ ಏಳು ಬೃಹತ್ ಕೃಷಿ ಹೊಂಡಗಳೇ ವರದಾನವಾಗಿವೆ. ಮಳೆ ಇರದೇ ಇರುವಾಗ ಕೃಷಿ ಹೊಂಡಗಳು ನೀರಿನ ಕೊರತೆ ನೀಗಿಸಿ ಉತ್ತಮ ಫಸಲು ಬರಲು ಕಾರಣವಾಗಿವೆ.

ADVERTISEMENT

ಅಪರೂಪದ ಪೇರಲ ತಳಿ: ಕೃಷಿ ವಿಶ್ವವಿದ್ಯಾಲಯದ ಸಂಪರ್ಕದಲ್ಲಿರುವ ಇವರು ರಾಯಲ್ ಗ್ರೀನ್ ತಳಿಯ 250 ಪೇರಲ ಗಿಡ ಬೆಳೆದಿದ್ದಾರೆ. ಇದು ಹೊರ ರಾಜ್ಯಕ್ಕೂ ರಫ್ತು ಮಾಡಲು ಸಾಧ್ಯವಾಗುವಂತಹದ್ದು. ಈ ತಳಿಯ ಪೇರಲಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಲಾಭ ತರುತ್ತಿದೆ. ಹಸಿರೆಲೆ, ಸಗಣಿ ಗೊಬ್ಬರ ಹಾಕಿ, ಕುರಿಗಳನ್ನು ನಿಲ್ಲಿಸುವ ಮೂಲಕ ಸಾವಯವ ರೀತಿಯಲ್ಲಿ ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಕಾಳಜಿ ವಹಿಸುತ್ತಾರೆ. ಎರೆಹುಳು ಗೊಬ್ಬರ, ಜೀವಾಮೃತವನ್ನೂ ತಯಾರಿಸುತ್ತಾರೆ.

ಬಹು ಹಂತದ ಕೃಷಿ: 100 ಮಹಾಗನಿ, 100 ತೆಂಗು, ಶ್ರೀಗಂಧ ಗಿಡಗಳ ಜೊತೆಗೆ ಪಪ್ಪಾಯಿ, ನಿಂಬೆ, ಚಿಕ್ಕು ಸೇರಿದಂತೆ ಎಲ್ಲ ರೀತಿಯ ದೀರ್ಘಾವಧಿ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ. ತರಕಾರಿಯಲ್ಲಿ ಎಲೆಕೋಸು, ಹೂ ಕೋಸು, ಬೆಳ್ಳುಳ್ಳಿ ಸಮೇತ ಎಲ್ಲ ರೀತಿಯ ತರಕಾರಿಗಳನ್ನು ಬೆಳೆಯುತ್ತಾರೆ.

ಹೆಸರು ಕಾಳು, ಗೋವಿನಜೋಳ, ಗೋದಿ, ಕಡಲೆ, ಸೂರ್ಯಕಾಂತಿ, ಶುಂಠಿ, ಮೆಣಸಿನಕಾಯಿ, ಸೀತಾಫಲ, ತರಹೇವಾರಿ ಹೂಗಿಡ ಸೇರಿದಂತೆ ಎಲ್ಲ ರೀತಿಯ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ವರ್ಷಕ್ಕೆ ಎಲ್ಲ ಬೆಳೆಗಳಿಂದ ಸರಾಸರಿ ₹ 20 ಲಕ್ಷದವರೆಗೂ ಆದಾಯ ಗಳಿಸುತ್ತಾರೆ.

ಈಚೆಗಷ್ಟೇ 30 ಎಕರೆಯಲ್ಲಿ 150 ಕ್ವಿಂಟಲ್ ಹೆಸರು ಬೆಳೆದಿರುವುದು ಇವರ ಕೃಷಿ ಪರಿಶ್ರಮಕ್ಕೆ ಸಾಕ್ಷಿ. ಇದರ ಜೊತೆಗೆ ಈರುಳ್ಳಿ, ಕಡಲೆ, ಹೆಸರಿನ ಬೀಜೋತ್ಪಾದನೆ ಮಾಡಿ ಕೃಷಿ ವಿವಿಗೆ ಬೀಜ ಕಳುಹಿಸುತ್ತಾರೆ. ಒಟ್ಟಾರೆ ಮಲ್ಲಿಕಾರ್ಜುನ ಗೌಡರ ಕೃಷಿ ಎಲ್ಲ ರೈತರಿಗೂ ಮಾದರಿ ಎನಿಸಿದೆ.

‘ಕೃಷಿಯು ಹವಾಮಾನಕ್ಕೆ ಅನುಸಾರವಾಗಿ ಲಾಭ, ನಷ್ಟ ತರುತ್ತದೆ. ಒಮ್ಮೊಮ್ಮೆ ನಷ್ಟಕ್ಕೂ ದೂಡುತ್ತದೆ. ಅದರಿಂದ ಪಾರಾಗಲು ಸಮಗ್ರ ಕೃಷಿಯ ಜೊತೆ ಆಯಾ ಹಂಗಾಮಿನ ಬೆಳೆಗಳನ್ನು ಬೆಳೆಯುವ ಪದ್ಧತಿ ರೂಢಿಸಿಕೊಂಡರೆ ಕೃಷಿಯಿಂದ ಲಾಭ ನಿಶ್ಚಿತ’ ಎನ್ನುತ್ತಾರೆ ಪಾಟೀಲ.

‘ಆಧುನಿಕ ಕೃಷಿಯತ್ತ ಗಮನ ಹರಿಸಿ’

ಹೊಲವಿದ್ದರೆ ಸಾಲದು. ರೈತ ನಿತ್ಯ ಹೊಲದಲ್ಲಿ ಇರಬೇಕು. ಪ್ರತಿ ವರ್ಷ ಆರಂಭದಿಂದ ಅಂತ್ಯದವರೆಗೂ ಕೃಷಿಯ ಲೆಕ್ಕ ನಿರ್ವಹಿಸಬೇಕು. ಆಗ ಲಾಭದತ್ತ ಸಾಗಲು ಸಾಧ್ಯ. ಕಾರ್ಮಿಕರ ಸಮಸ್ಯೆ ಇದೆ. ಆದರೆ ಶ್ರಮ ಪಟ್ಟು ದುಡಿದು ಸಮಸ್ಯೆ ಬಗೆಹರಿಸಿದರೆ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು. ಸರ್ಕಾರದ ಯೋಜನೆಗಳನ್ನು ಬಳಕೆ ಮಾಡಿಕೊಳ್ಳಬೇಕು. ಆಧುನಿಕ ಕೃಷಿಯತ್ತ ಗಮನ ಹರಿಸಬೇಕು. ಮಲ್ಲಿಕಾರ್ಜುನಗೌಡ ಶಂಕರಗೌಡ ಪಾಟೀಲ ಗಂಗಾಪುರ

ಮಲ್ಲಿಕಾರ್ಜುನಗೌಡ ಪಾಟೀಲ ಅವರು ಸಮಗ್ರ ಕೃಷಿಯೊಂದಿಗೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಅವರ ಶ್ರಮದ ಕೃಷಿ ಎಲ್ಲರಿಗೂ ಮಾದರಿ.
–ಮಂಜುನಾಥ ಜನಮಟ್ಟಿ, ಕೃಷಿ ಸಹಾಯಕ ನಿರ್ದೇಶಕ ನರಗುಂದ
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಮೆಣಸಿನಕಾಯಿ ಬೆಳೆಯೊಂದಿಗೆ
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಬೆಳೆದಿರುವ ಗೋಧಿ
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಬೆಳೆದ ಈರುಳ್ಳಿ
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಬೆಳೆದ ಸೂರ್ಯಕಾಂತಿ
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಬೆಳೆದ ತೆಂಗು
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಬೆಳೆದ ಪೇರಲ
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಬೆಳೆದ ಈರುಳ್ಳಿ ಬೀಜ‌
ನರಗುಂದ ತಾಲ್ಲೂಕಿನ ಗಂಗಾಪುರದ ಮಲ್ಲಿಕಾರ್ಜುನಗೌಡ ಪಾಟೀಲ ಬೆಳೆದ ಶುಂಠಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.