ADVERTISEMENT

ಲಕ್ಕುಂಡಿ ಯುನೆಸ್ಕೋ ಪಟ್ಟಿ ಸೇರ್ಪಡೆ ಕಾಲ ಸನ್ನಿಹಿತ: ಸಚಿವ ಎಚ್.ಕೆ.ಪಾಟೀಲ

ಪ್ರಾಚ್ಯಾವಶೇಷಗಳ ಅನ್ವೇಷಣಾ ಅಭಿಯಾನಕ್ಕೆ ಸಚಿವ ಎಚ್‌.ಕೆ.ಪಾಟೀಲ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 16:25 IST
Last Updated 24 ನವೆಂಬರ್ 2024, 16:25 IST
ಗದಗ ತಾಲ್ಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಭಾನುವಾರ ಚಾಲನೆ ನೀಡಿ ಮಾತನಾಡಿದರು
ಗದಗ ತಾಲ್ಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಭಾನುವಾರ ಚಾಲನೆ ನೀಡಿ ಮಾತನಾಡಿದರು    

ಗದಗ: ‘ಲಕ್ಕುಂಡಿಯ ಇತಿಹಾಸ, ಪರಂಪರೆ, ಸಂಸ್ಕೃತಿ ಶ್ರೀಮಂತಿಕೆ, ಶಿಲ್ಪಕಲೆಗಳ ಸೊಬಗನ್ನು ಜಗತ್ತಿಗೆ ತೋರಿಸಿ ಈ ಜಾಗವನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಮಹತ್ವದ ಹೆಜ್ಜೆಯಾಗಿದೆ’ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ತಾಲ್ಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

‘ಇಲ್ಲಿವರೆಗೆ ಲಕ್ಕುಂಡಿಯ ಇತಿಹಾಸ, ಶಿಲ್ಪಕಲೆ, ಶಾಸನಗಳನ್ನು ನಿರ್ಲಕ್ಷ್ಯ ಮಾಡಿದ್ದೆವು. ಇಂದು ಜಾಗೃತರಾಗಿ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿ ಲಕ್ಕುಂಡಿಯು ಜಾಗತಿಕ, ಪಾರಂಪರಿಕ ಪಟ್ಟಿಯಲ್ಲಿ ಸೇರಿಸುವ ಕಾಲ ಸನ್ನಿಹಿತವಾಗಿದೆ. ನಾವು ಬದ್ಧತೆಯಿಂದ ಕೆಲಸ ಮಾಡಿದರೆ ಯುನೆಸ್ಕೋ ಆ ಸ್ಥಾನಮಾನ ಕೊಡುವುದಕ್ಕೆ ಬಹಳ ದಿನಗಳು ಬೇಕಾಗಿಲ್ಲ’ ಎಂದರು.

ADVERTISEMENT

‘ಲಕ್ಕುಂಡಿಯಲ್ಲಿರುವ ಶಾಸನಗಳು ಹಾಗೂ ಶಿಲ್ಪಕಲೆಗಳನ್ನು ಕೆಲವರು ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ. ಕೆಲವರು ಕುರಿ, ಆಕಳು ಕಟ್ಟಿದ್ದಾರೆ. ಅವುಗಳ‌ ಮಹತ್ವ ತಿಳಿಸಿ ಅವುಗಳನ್ನು ಒಂದೆಡೆ ಸಂಗ್ರಹಿಸಿ, ಸಂರಕ್ಷಿಸಲಾಗುವುದು. ಲಕ್ಕುಂಡಿಯಲ್ಲಿ ಕೈಗೊಂಡಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ರಾಜ್ಯಕ್ಕೆ ದಿಕ್ಸೂಚಿ ಆಗಬೇಕು. ಇದರ ಪ್ರೇರಣೆ ಕರ್ನಾಟಕದ ತುಂಬೆಲ್ಲ ಹರಡಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನರಗುಂದ ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ‘ನರಗುಂದ ವಿಧಾನಸಭಾ ಕ್ಷೇತ್ರದ ದಾನ ಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿ ಲಕ್ಕುಂಡಿ ಗ್ರಾಮದಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಆರಂಭಗೊಂಡಿರುವುದು ಸಂತೋಷ ತರಿಸಿದೆ’ ಎಂದರು.

‘ವಿಶೇಷವಾಗಿ ಯುವಕರು ಆಸಕ್ತಿವಹಿಸಿ ಸಂಗ್ರಹಮಾಡಿರುವ ವಿಗ್ರಹ, ಶಿಲಾಕೃತಿ ಹಾಗೂ ಶಾಸನಗಳನ್ನು ಅಧ್ಯಯನ ಮಾಡಿ ಅದರ ಹಿಂದಿರುವ ಲಕ್ಕುಂಡಿಯ ವೈಭವವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು’ ಎಂದು ಹೇಳಿದರು.

ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಲಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಎಸ್.ಪೂಜಾರ, ಲಕ್ಕುಂಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಾ ಎಸ್.ಪಾಟೀಲ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಚಿ, ವಾಸಣ್ಣ ಕುರಡಗಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಮ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ. ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು ಎ., ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ಗ್ರಾಮೀಣಾಭಿವೃದ್ಧಿ ವಿವಿ ಕುಲಪತಿ ಪ್ರೊ.ಸುರೇಶ ನಾಡಗೌಡರ, ಜಾನಪದ ವಿವಿ ಕುಲಪತಿ ಟಿ.ಎಂ.ಭಾಸ್ಕರ್, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯರಾದ ಸಿದ್ಧಲಿಂಗೇಶ್ವರ ಎಚ್. ಪಾಟೀಲ, ಅ.ದ.ಕಟ್ಟಿಮನಿ, ಉಮೇಶಗೌಡ ಪಾಟೀಲ, ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಿ.ವಿ.ಪರಮಶಿವ ಮೂರ್ತಿ, ದೇವರಕೊಂಡ ರೆಡ್ಡಿ, ಲಕ್ಕುಂಡಿ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.