ADVERTISEMENT

ಮುಳಗುಂದ: ಅಭಿವೃದ್ಧಿ ನಿರೀಕ್ಷೆಯಲ್ಲಿ ಎಪಿಎಂಸಿ ಉಪ ಮಾರುಕಟ್ಟೆ

ಕೃಷಿಕರು, ತರಕಾರಿ ವ್ಯಾಪಾರಿಗಳಿಗೆ ತಪ್ಪದ ಕಿರಿಕಿರಿ: ಮೂಲಸೌಕರ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 6:46 IST
Last Updated 22 ಜುಲೈ 2024, 6:46 IST
ಮುಳಗುಂದ ವಾರದ ಸಂತೆ ದಿನ ಮಳೆ ಆದ ಪರಿಣಾಮ ತರಕಾರಿ ವ್ಯಾಪಾರಿಗಳು ತೊಂದರೆ ಆಗಿರುವುದು
ಮುಳಗುಂದ ವಾರದ ಸಂತೆ ದಿನ ಮಳೆ ಆದ ಪರಿಣಾಮ ತರಕಾರಿ ವ್ಯಾಪಾರಿಗಳು ತೊಂದರೆ ಆಗಿರುವುದು   

ಮುಳಗುಂದ: ಇಲ್ಲಿನ ವಾರದ ಸಂತೆ ನಡೆಯುವ ಎಪಿಎಂಸಿ ಆವರಣ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಆಗದಿರುವುದರಿಂದ ಮಳೆಗಾಲದಲ್ಲಿ ಕೃಷಿಕರಿಗೆ, ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ತೊಂದರೆ ಆಗುತ್ತಿದೆ.

ಪಟ್ಟಣ ಬೆಳೆದಂತೆ ಮುಖ್ಯ ರಸ್ತೆಗಳು ಕಿರಿದಾದ ಪರಿಣಾಮ 2012ರಲ್ಲಿ ವಾರದ ಸಂತೆ ಸ್ಥಳವನ್ನು ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡಲಾಗಿದೆ. ಅಂದಿನಿಂದ ಸಂತೆ ಇಲ್ಲಿಯೇ ನಡೆಯುತ್ತಿದೆ. ಸಂತೆ ದಿನ ತರಕಾರಿ ವ್ಯಾಪಾರಸ್ಥರಿಗೆ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮತ್ತು ಸ್ವಚ್ಛತೆ ನಿರ್ವಹಣೆಯನ್ನು ಸ್ಥಳೀಯ ಪಟ್ಟಣ ಪಂಚಾಯ್ತಿ ನಿರ್ವಹಣೆ ಮಾಡುತ್ತಿದೆ. ಗದಗ ಎಪಿಎಂಸಿ ವತಿಯಿಂದ 2020ರಲ್ಲಿ ಶೆಡ್‌ ಮತ್ತು ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ, ಅದು ಅವೈಜ್ಞಾನಿಕವಾಗಿರುವ ಪರಿಣಾಮ ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿಸಿದೆ. ಪರಿಣಾಮ ವ್ಯಾಪಾರಿಗಳು, ಸಂತೆಗೆ ಬರುವ ಗ್ರಾಹಕರಿಗೆ ಕಿರಿ ಕಿರಿ ತಪ್ಪದಾಗಿದೆ.

ಎಪಿಎಂಸಿ ಆವರಣ ಮತ್ತು ಗೇಟ್ ಬಳಿ ಮಳೆ ನೀರು ಹೊರ ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ್ದಕ್ಕೆ ಮಳೆಗಾಲದಲ್ಲಿ ನೀರು ನಿಂತು ದುರ್ನಾತ, ಸೊಳ್ಳೆ ಉತ್ಪತ್ತಿಯಾಗಿ ವ್ಯಾಪಾರಿಗಳು, ಗ್ರಾಹಕರಿಗೆ ತೊಂದರೆ ಎದುರಾಗುತ್ತಿದೆ. ಹೊರಭಾಗದಲ್ಲೂ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.

ADVERTISEMENT

ಎಪಿಎಂಸಿ ಆವರಣವು ವಿಶಾಲವಾಗಿದ್ದು, ಒಂದು ಭಾಗದಲ್ಲಿ ಎರಡು ಶೆಡ್‌ಗಳಿವೆ. ಇನ್ನೊಂದು ಭಾಗದಲ್ಲಿ ಖಾಲಿ ಜಾಗವಿದ್ದು ಅಲ್ಲಿ ಕೂಡ ಶೆಡ್‌ ಹಾಗೂ ಹೊರಭಾಗದಲ್ಲಿ ಚರಂಡಿ ನಿರ್ಮಾಣ ಅಗತ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಲ್ಲಿನ ರೈತ ಸಂಘ ಮನವಿ ಮಾಡಿತ್ತು. ಆದರೆ, ಗದಗ ಎಪಿಎಂಸಿ ಸಮಿತಿ ಮಾತ್ರ ಈವರೆಗೂ ನಿರ್ಲಕ್ಷ್ಯ ವಹಿಸಿದೆ.

‘ಪಟ್ಟಣದಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ನಿರ್ಮಾಣದ ಆರಂಭದಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ಇಲ್ಲೇ ನಡೆಯುತ್ತಿತ್ತು. ದಲಾಲಿ ಅಂಗಡಿಗಳು ಸಹ ಇದ್ದವು. ಇದರಿಂದ ಸುತ್ತಮುತ್ತಲಿನ ಹತ್ತಾರೂ ಗ್ರಾಮಗಳ ರೈತರಿಗೆ ಈ ಮಾರುಕಟ್ಟೆ ಅನುಕೂಲವಾಗಿತ್ತು. ಆದರೆ ಕೆಲವು ವರ್ಷಗಳ ಬಳಿಕ ಬಂದ್‌ ಮಾಡಲಾಯಿತು. ಪರಿಣಾಮ ಈ ಭಾಗದ ರೈತರು ದೂರದ ಗದಗ, ಲಕ್ಷ್ಮೇಶ್ವರ ಮಾರುಕಟ್ಟೆಯನ್ನು ಅವಲಂಬಿಸುವ ಅನಿವಾರ್ಯತೆ ಬಂದೊದಗಿತು. ಮತ್ತೇ ದಲಾಲಿ ಅಂಗಡಿಗಳನ್ನು ಆರಂಭಿಸಿ ರೈತರ ಉತ್ಪನ್ನಗಳ ಖರೀದಿಗೆ ವ್ಯವಸ್ಥೆ ಮಾಡುವಂತೆ ರೈತರು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಈವರೆಗೂ ನಮ್ಮ ಬೇಡಿಕೆ ಈಡೇರಿಲ್ಲ’ ಎನ್ನುತ್ತಾರೆ ರೈತ ಸಂಘದ ಮುಖಂಡ ದೇವರಾಜ ಸಂಗನಪೇಟಿ.

ಅಲ್ಲದೆ, ಇಲ್ಲಿನ ಕಟ್ಟಡಗಳು, ಗೋದಾಮುಗಳು ಶಿಥಿಲಗೊಂಡಿದ್ದು, ಬೀಳುವ ಹಂತ ತಲುಪಿವೆ. ಅವುಗಳ ಪುನರ್‌ನಿರ್ಮಾಣ ಕಾಮಗಾರಿ ನಡೆಯಬೇಕಿದೆ. ಮುಖ್ಯವಾಗಿ ಅತಿಥಿಗೃಹ ಕಟ್ಟಡ ಸಂಪೂರ್ಣ ಶಿಥಿಲಗೊಂಡು, ಸ್ಲ್ಯಾಬ್ ಬಿದ್ದಿದೆ. ಸುತ್ತಲೂ ಜಾಲಿಗಿಡಗಳು ಬೆಳೆದು ನಿಂತಿವೆ. ಚರಂಡಿ ಕಾಮಗಾರಿ ಸಂದರ್ಭದಲ್ಲಿ ತೆಗೆದು ಹಾಕಿದ ಮಣ್ಣಿನ ಗುಡ್ಡೆಯನ್ನು ವಿಲೇವಾರಿ ಮಾಡಿಲ್ಲ. ಇನ್ನೊಂದು ಭಾಗದಲ್ಲಿ ಶೆಡ್‌ಗಳ ಬಾಗಿಲು, ಚಾವಣಿ ತಗಡುಗಳು ಕಿತ್ತು ಹೋಗಿದ್ದು, ಅವ್ಯವಸ್ಥೆಯ ಆಗರವಾಗಿದೆ. ಹರಾಜು ಕಟ್ಟೆ ಇದ್ದರೂ ಪ್ರಯೋಜನಕ್ಕೆ ಬಾರದಾಗಿದೆ.

ಕೃಷಿಕರಿಗೆ, ವ್ಯಾಪಾರಸ್ಥರಿಗೆ ಶೌಚಾಲಯ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳ ಅಭಿವೃದ್ದಿ ಅಗತ್ಯವಿದ್ದು, ಸಂಬಂಧಿಸಿದ ಗದಗ ಎಂಪಿಎಂಸಿ ಸಮಿತಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಯಾರು ಏನಂತಾರೆ?

ಅಭಿವೃದ್ಧಿಗೆ ಆದ್ಯತೆ ನೀಡಿ 50 ವರ್ಷಗಳ ಹಿಂದೆಯೇ ಎಪಿಎಂಸಿ ಉಪ ಮಾರುಕಟ್ಟೆ ಪಟ್ಟಣದಲ್ಲಿ ಆರಂಭವಾಗಿದೆ. ಆದರೆ ಅಭಿವೃದ್ಧಿ ಆಗದ ಹಿನ್ನೆಲೆ ಕೃಷಿಕರು ವ್ಯಾಪಾರಿಗಳಿಗೆ ತೊಂದರೆ ತಪ್ಪದಾಗಿದೆ. ಅಲ್ಪಸ್ವಲ್ಪ ಅಭಿವೃದ್ದಿ ನಡೆದಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಪಡಿಸಬೇಕು ಎಂದು ಒತ್ತಾಯಿಸಿ ಮನವಿ ನೀಡಿದ್ದೇವೆ.

- ಬಸವರಾಜ ಕರಿಗಾರ ರೈತ ಸಂಘದ ಅಧ್ಯಕ್ಷ ಮುಳಗುಂದ

ಸ್ವಚ್ಛತೆಗೆ ಕ್ರಮವಹಿಸಿ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಸಂತೆ ದಿನ ನೀರು ವಿದ್ಯುತ್ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಕಾಮಗಾರಿಗಳನ್ನು ಎಪಿಎಂಸಿ ವತಿಯಿಂದಲೇ ಮಾಡಬೇಕಿದ್ದು ಅವರಿಗೂ ಮನವಿ ಮಾಡಲಾಗಿದೆ.

–ಮಂಜುನಾಥ ಗುಳೇದ ಮುಖ್ಯಾಧಿಕಾರಿ ಪಟ್ಟಣ ಪಂಚಾಯ್ತಿ ಮುಳಗುಂದ

ಮೂಲಸೌಕರ್ಯ ಕಲ್ಪಿಸಿ ಎಪಿಎಂಸಿಯಲ್ಲಿ ನಡೆಯುವ ವಾರದ ಸಂತೆದಿನ ವ್ಯಾಪಾರಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಸೇರುವುದರಿಂದ ಬಯಲು ಜಾಗದಲ್ಲಿ ಅಂಗಡಿ ತೆರೆಯುತ್ತಾರೆ. ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ವ್ಯಾಪಾರಕ್ಕೆ ತೊಂದರೆ ಆಗುತ್ತಿದೆ. ಚರಂಡಿಗಳಲ್ಲಿನೀರು ನಿಂತು ದುರ್ನಾತ ಉಂಟಾಗುತ್ತಿದೆ. ವಿದ್ಯುತ್ ಹಾಗೂ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಮಾಡಬೇಕು.

-ಭೀಮಪ್ಪ ಕೋಳಿ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.