ADVERTISEMENT

ನರೇಗಲ್ | ಚೆಕ್ ಡ್ಯಾಂನಲ್ಲಿ ಹೂಳು: ನಿಲ್ಲದ ನೀರು; ಒತ್ತು ನೀಡದ ಜನಪ್ರತಿನಿಧಿಗಳು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 5:35 IST
Last Updated 23 ಅಕ್ಟೋಬರ್ 2024, 5:35 IST
ನರೇಗಲ್ ಸಮೀಪ ಗಡ್ಡಿಹಳ್ಳಕ್ಕೆ ಅಡಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‌ ಡ್ಯಾಂನಲ್ಲಿ ತುಂಬಿರುವ ಹೂಳು
ನರೇಗಲ್ ಸಮೀಪ ಗಡ್ಡಿಹಳ್ಳಕ್ಕೆ ಅಡಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‌ ಡ್ಯಾಂನಲ್ಲಿ ತುಂಬಿರುವ ಹೂಳು   

ನರೇಗಲ್: ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಒಂದೆಡೆ ಶೇಖರಿಸಿಡುವ ಉದ್ದೇಶದಿಂದ ಹೋಬಳಿಯ ವಿವಿಧೆಡೆ ಹಳ್ಳಗಳಿಗೆ, ಸರುಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‌ಡ್ಯಾಂಗಳಲ್ಲಿ ಅಪಾರ ಪ್ರಮಾಣದ ಹೂಳು ತುಂಬಿರುವ ಕಾರಣ ಎಲ್ಲಿಯೂ ನೀರು ನಿಲ್ಲುತ್ತಿಲ್ಲ. ಇದರಿಂದ ಸಾಕಷ್ಟು ನೀರು ಹರಿದು ಹೋಗುತ್ತಿದ್ದು, ಚೆಕ್‌ ಡ್ಯಾಂ ನಿರ್ಮಾಣದ ಉದ್ದೇಶ ಈಡೇರುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ, ಚೆಕ್‌ಡ್ಯಾಂಗಳಲ್ಲಿನ ಹೂಳು ಎತ್ತಿಸಲು ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಗದಗ-ಗಜೇಂದ್ರಗಡ ಮಾರ್ಗದ ಗಡ್ಡಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‌ ಡ್ಯಾಂನಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದೆ. ಎಲ್ಲೆಂದರಲ್ಲಿ ದೊಡ್ಡ ಪ್ರಮಾಣದ ಮುಳ್ಳಿನ ಕಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ನೀರು ನಿಲ್ಲದೆ ಪೋಲಾಗುತ್ತಿದೆ. ಚೆಕ್ ಡ್ಯಾಂನ ಗೋಡೆ ಬಿರುಕು ಬಿಟ್ಟಿದೆ. ಯಾವಾಗ ಬೇಕಾದರೂ ಬೀಳಬಹುದು ಎಂಬಂತಹ ಸ್ಥಿತಿ ಇದ್ದು, ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಈ ಚೆಕ್‌ ಡ್ಯಾಂ ಅನ್ನು ನಿರ್ಮಿಸಿ ಅನೇಕ ವರ್ಷಗಳಾಗಿವೆ. ಇಲ್ಲೀವರೆಗೂ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಕನಿಷ್ಠ ಮುಳ್ಳಿನ ಕಂಟಿಗಳನ್ನಾದರೂ ಕಡಿದು ಸ್ವಚ್ಛಗೊಳಿಸಿಲ್ಲ. ಈ ಎಲ್ಲ ಅವ್ಯವಸ್ಥೆಗಳಿಂದಾಗಿ ಚೆಕ್‌ ಡ್ಯಾಂನಲ್ಲಿ ನೀರು ನಿಲ್ಲುತ್ತಿಲ್ಲ. ಇದೇ ಕಾರಣಕ್ಕೆ ಸುತ್ತಲೂ ಇರುವ ತೋಟಗಳಲ್ಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಬೇಸಿಗೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೂ ನೀರು ಸಿಗದಂತಾಗಿದೆ ಎಂದು ರೈತ ಮೈಲಾರಪ್ಪ ಗೋಡಿ ಹೇಳಿದರು.

ADVERTISEMENT

ಕೆಲವು ಕಡೆ ಹೊಲಗಳಿಂದ ಹರಿದು ಬರುವ ನೀರು ನೇರವಾಗಿ ಹಳ್ಳಕ್ಕೆ ಹೋಗಲು ಮಾರ್ಗವಿಲ್ಲದೆ ಹೊಲದಿಂದ ಹೊಲಕ್ಕೆ ಹರಿದು ಹೋಗುತ್ತದೆ. ಕೆಲವೊಮ್ಮೆ ಹೊಲಗಳಲ್ಲಿಯೇ ನೀರು ನಿಲ್ಲುತ್ತಿದೆ. ಇದರಿಂದಾಗಿ ಕೃಷಿ ಚಟುವಟಿಕೆ ನಡೆಸಲು ಹಾಗೂ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಹರಸಾಹಸ ಪಡಬೇಕಿದೆ ಎನ್ನುತ್ತಾರೆ ರೈತರಾದ ಹನಮಪ್ಪ ಹರ್ತಿ, ಅಂದಪ್ಪ ಮಾರನಸಬರಿ.

ಹಾಲಕೆರೆ, ನಿಡಗುಂದಿಕೊಪ್ಪ ಸೇರಿದಂತೆ ಯಲಬುರ್ಗಾ ತಾಲ್ಲೂಕಿನ ಗ್ರಾಮಗಳಿಂದ ಚಿಕ್ಕ ಪ್ರಮಾಣದ ಕಾಲುವೆ, ಸರು, ಹಳ್ಳಗಳಿಂದ ನೀರು ಸರಾಗವಾಗಿ ಇಲ್ಲಿನ ಹಳ್ಳಕ್ಕೆ ಹರಿದು ಬಂದು ಚೆಕ್‌ ಡ್ಯಾಂಗೆ ಸೇರುತ್ತಿತ್ತು. ಆದರೆ ಮರಳು ಮಾಫಿಯಾದಿಂದ ಅಲ್ಲಲ್ಲಿ ನಿರ್ಮಾಣವಾಗಿರುವ ತೆಗ್ಗುಗಳಿಂದ ಜಲಮಾರ್ಗದ ದಿಕ್ಕೂ ತಪ್ಪಿದೆ. ಮುಂದೆಯೂ ಇದೇ ರೀತಿ ಆದರೆ ಸಮಸ್ಯೆ ದೊಡ್ಡದಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಚೆಕ್‌ ಡ್ಯಾಂನಲ್ಲಿ ಹೂಳು ತುಂಬಿದೆ. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಜಲ ಮೂಲಗಳ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ ಎಂದು ಸುತ್ತಮುತ್ತಲಿನ ಗ್ರಾಮಗಳ ರೈತರು ಆರೋಪ ಮಾಡಿದ್ದಾರೆ.

ಚೆಕ್‌ ಡ್ಯಾಂಗಳಲ್ಲಿ ತುಂಬಿರುವ ಹೂಳು ತೆಗೆದು ಅಭಿವೃದ್ದಿಪಡಿಸಿದರೆ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಲಿದೆ
–ಶರಣಪ್ಪ ಧರ್ಮಾಯತ, ರೈತ ಸಂಘಟನೆ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.