ADVERTISEMENT

‘ಹಲ್ಲೆ ಪರ ಹೇಳಿಕೆ ಖಂಡನೀಯ’

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 14:31 IST
Last Updated 5 ನವೆಂಬರ್ 2024, 14:31 IST
ಈರಣ್ಣ ಪೂಜಾರ
ಈರಣ್ಣ ಪೂಜಾರ   

ಲಕ್ಷ್ಮೇಶ್ವರ: ‘ಗೋಸಾವಿ ಸಮಾಜದ ಯುವಕರು, ಮಹಿಳೆಯರ ಮೇಲೆ ಲಕ್ಷ್ಮೇಶ್ವರ ಪಿಎಸ್ಐ ಈರಣ್ಣ ರಿತ್ತಿ ನಡೆಸಿದ ಹಲ್ಲೆಯನ್ನು ಲಘುವಾಗಿ ಪರಿಗಣಿಸಿ ಪಿಎಸ್ಐ ಪರ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳು ಹಲ್ಲೆಯನ್ನು ಸಮರ್ಥಿಸುತ್ತಿವೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಶ್ರೀರಾಮ ಸೇನೆಯ ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಪೂಜಾರ ಆಗ್ರಹಿಸಿದರು.

ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘ಮುಸ್ಲಿಂ ಸಮಾಜದ ಕೆಲವು ಗೂಂಡಾಗಳು ಗೋಸಾವಿ ಸಮಾಜದವರು ಧರಿಸಿದ್ದ ಕೇಸರಿ ಶಾಲು ಹರಿದು, ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳಿದಾಗ ಪಿಎಸ್‍ಐ ದೂರು ನೀಡಲು ಬಂದವರ ಮೇಲೆಯೇ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಈ ಕೃತ್ಯವನ್ನು ಚಿಕ್ಕ ಘಟನೆ ಎಂಬಂತೆ ಕಾಂಗ್ರೆಸ್ ಮುಖಂಡ ಹಾಗೂ ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚನ್ನಪ್ಪ ಜಗಲಿ ಬಿಂಬಿಸುತ್ತಿದ್ದಾರೆ. ಇವರ ಅರ್ಥದಲ್ಲಿ ಚಿಕ್ಕ ಘಟನೆ ಯಾವುದು, ದೊಡ್ಡ ಘಟನೆ ಯಾವುದು ಎಂಬುದನ್ನು ಬಹಿರಂಗಪಡಿಸಬೇಕು. ಎರಡೂ ಸಮಾಜದ ಹಿರಿಯರನ್ನು ಕರೆಸಿ ಬುದ್ಧಿವಾದ ಹೇಳಿ ಘಟನೆ ಸರಿಪಡಿಸಬೇಕು ಎಂಬ ಅವರ ಹೇಳಿಕೆ ಬಾಲಿಷತನದಿಂದ ಕೂಡಿದೆ. ಕೇವಲ ರಾಜಿ ಮಾಡಿಸಿ ಕಳುಹಿಸುವುದೇ ಆಗಿದ್ದಲ್ಲಿ ದೂರು ಸಲ್ಲಿಸಲು ಹೋಗಿದ್ದ ಗೋಸಾವಿ ಸಮಾಜದ ಯುವಕರು, ಮಹಿಳೆಯರ ಮೇಲೆ ಪಿಎಸ್ಐ ಲಾಠಿಯಿಂದ ನಡೆಸಿದ ಹಲ್ಲೆಗೆ ಪರಿಹಾರವೇನು’ ಎಂದು ಅವರು ಪ್ರಶ್ನಿಸಿದರು.

‘ರಾಜಿ ನೆಪದಲ್ಲಿ ಹಿಂದೂ ಸಮಾಜದ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಸುಮ್ಮನಿರುವುದೇ ಸಹಬಾಳ್ವೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

‘ಈ ಸಹಬಾಳ್ವೆಯ ಪಾಠವನ್ನು ದಾಂಧಲೆಗೆ ಕಾರಣರಾದ ಮುಸ್ಲಿಂ ಯುವಕರಿಗೆ ಏಕೆ ಹೇಳುತ್ತಿಲ್ಲ. ಗೋಸಾವಿ ಸಮಾಜದ ಮೇಲೆ ಅಪಾರ ಕಳಕಳಿ ವ್ಯಕ್ತಪಡಿಸುತ್ತಿರುವ ಈ ಧುರೀಣರು ಅವರ ಮೇಲೆ ಪಿಎಸ್ಐ ಈರಣ್ಣ ರಿತ್ತಿ ಲಾಠಿಯಿಂದ ಹೊಡೆದು ಹಲ್ಲೆ ನಡೆಸಿದ ನಂತರ ಸೌಜನ್ಯಕ್ಕಾದರೂ ಹಲ್ಲೆಯನ್ನು ಏಕೆ ಖಂಡಿಸಲಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.