ADVERTISEMENT

ಹಾಲೆರೆಯದೇ ಹಾಲು ಕುಡಿಸುವ ಹಬ್ಬವನ್ನಾಗಿ ಆಚರಿಸಿ: ತೋಂಟದ ಶ್ರೀ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 15:51 IST
Last Updated 21 ಆಗಸ್ಟ್ 2023, 15:51 IST
ನಾಗರ ಪಂಚಮಿ ಅಂಗವಾಗಿ ಗದಗ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಹಾಲು, ಬಿಸ್ಕತ್ತು ವಿತರಿಸಿದರು
ನಾಗರ ಪಂಚಮಿ ಅಂಗವಾಗಿ ಗದಗ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಹಾಲು, ಬಿಸ್ಕತ್ತು ವಿತರಿಸಿದರು   

ಗದಗ: ‘ಕಲ್ಲುನಾಗರಕ್ಕೆ ಹಾಲೆರೆಯುವುದು ಅಂಧಶ್ರದ್ಧೆಯಾಗಿದೆ. ಅದರ ಬದಲಾಗಿ ಬಡಮಕ್ಕಳು, ರೋಗಿಗಳು ಹಾಗೂ ಹಸಿದವರಿಗೆ ಹಾಲನ್ನು ಕುಡಿಸಬೇಕು. ಹಾಲೆರೆಯುವ ಹಬ್ಬವನ್ನು ಹಾಲು ಕುಡಿಸುವ ಹಬ್ಬವನ್ನಾಗಿ ಆಚರಿಸಬೇಕು’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ನಾಗರ ಪಂಚಮಿ ಅಂಗವಾಗಿ ಗದಗ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಾವುಗಳು ಹಾಲು ಕುಡಿಯುವುದಿಲ್ಲ. ಹಾವುಗಳು ಮನುಷ್ಯನಿಗೆ ಉಪಕಾರಿಯಾಗಿದ್ದು ಇಲಿ, ಹೆಗ್ಗಣ ಮತ್ತಿತರ ಪ್ರಾಣಿಗಳನ್ನು ತಿಂದು ರೈತರ ಬೆಳೆ, ದವಸಧಾನ್ಯಗಳನ್ನು ಸಂರಕ್ಷಿಸುತ್ತವೆ. ಹಾವುಗಳನ್ನು ಯಾರೂ ಕೊಲ್ಲಬಾರದು, ಸಂರಕ್ಷಿಸಬೇಕು. 12ನೇ ಶತಮಾನದಲ್ಲಿ ಬಸವಾದಿ ಶರಣರು ‘ಕಲ್ಲ ನಾಗರಕ್ಕೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ’ ಎಂಬ ವಚನದಲ್ಲಿ ಮೌಢ್ಯತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆದಾಗ್ಯೂ ಆಧುನಿಕ ಕಾಲಮಾನದಲ್ಲಿ ಜನರಲ್ಲಿ ಮೂಢನಂಬಿಕೆಗಳು ಹೆಚ್ಚುತ್ತಿರುವುದು ವಿಷಾದನೀಯ’ ಎಂದು ತಿಳಿಸಿದರು.

ADVERTISEMENT

ಗದಗ ಜಿಲ್ಲಾ ಆಸ್ಪತ್ರೆಯಲ್ಲಿರುವ ವಿವಿಧ ವಿಭಾಗಗಳನ್ನು ವೀಕ್ಷಿಸಿದ ಶ್ರೀಗಳು, ವೈದ್ಯರ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬಡ ಗ್ರಾಮೀಣ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಗಳು ಲಭಿಸುತ್ತಿರುವುದು ಸಂತೋಷ ತರಿಸಿದೆ ಎಂದು ಶ್ರೀಗಳು ತಿಳಿಸಿದರು.

ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಸ್ವಾಗತಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕರಿಗೌಡರ, ಡಾ. ಹಳೇಮನಿ, ಡಾ. ರೇಖಾ ಸೋನಾವಣೆ, ಶೇಖಣ್ಣ ಕವಳಿಕಾಯಿ, ಬಾಲಚಂದ್ರ ಭರಮಗೌಡ, ಪ್ರಕಾಶ ಅಸುಂಡಿ, ಶೇಖಣ್ಣ ಕಳಸಾಪೂರ, ದಾನಯ್ಯ ಗಣಾಚಾರಿ, ವಿ.ಕೆ.ಕರಿಗೌಡರ, ಅರಳಿ ಶೇಖಣ್ಣ, ಸುರೇಶ ನಿಲೂಗಲ್, ಗೌರಕ್ಕ ಬಡಿಗಣ್ಣವರ, ರೇಣುಕಾ ಕರಿಗೌಡರ, ಶಿವಣ್ಣ ಮುಗದ ಬಸವದಳ, ಬಸವಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.