ಗದಗ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ, ಹೋರಾಟ ಆರಂಭಿಸಲಾಗಿದೆ. ಆದರೆ, ಹೋರಾಟಕ್ಕೆ ಜಯ ಸಿಗದ ಹಿನ್ನಲೆಯಲ್ಲಿ ಪಂಚಮಸಾಲಿ ಸಮಾಜದ ವಕೀಲರ ಮಂದಾಳತ್ವದಲ್ಲಿ ಡಿ.10ರಂದು ನಡೆಯುವ ಬೆಳಗಾವಿ ಅಧಿವೇಶನಕ್ಕೆ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಬಸವೇಶ್ವರ ಕಾಲೇಜಿನಲ್ಲಿ ಭಾನುವಾರ ನಡೆದ ಮುತ್ತಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ಪಂಚಮಸಾಲಿಗಳು ಸರ್ಕಾರಕ್ಕೆ ಯಾವುದೇ ಅಧಿಕಾರ, ಅಂತಸ್ತು, ಭೂಮಿಯನ್ನು ಕೇಳಿಲ್ಲ. ಬದಲಾಗಿ ಸಮಾಜದ ಏಳಿಗೆಗಾಗಿ 2ಎ ಮೀಸಲಾತಿ ಕೊಡಿ ಎಂದು ಕೇಳಿದ್ದೇವೆ. ಮೀಸಲಾತಿ ಎನ್ನುವ ಒಂದು ರೊಟ್ಟಿಯಲ್ಲಿ ತುಣುಕು ರೊಟ್ಟಿಯನ್ನು ನಮಗೂ ನೀಡಿ ಎಂದು ಕೇಳುತ್ತಿದ್ದೇವೆ. ಸಮಾಜದ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಆಗ್ರಹಿಸುತ್ತಿದ್ದೇವೆ. ಆದರೆ ನಮ್ಮ ಮನವಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ಅಂದು ಕಿತ್ತೂರು ರಾಣಿ ಚನ್ನಮ್ಮ, ಜಗಜ್ಯೋತಿ ಬಸವೇಶ್ವರರಿಗೆ ಮೋಸ ಮಾಡಿದಂತೆ ಇಂದು ಪಂಚಮಸಾಲಿ ಸಮುದಾಯಕ್ಕೆ ಕೆಲವು ಕಾಣದ ಕೈಗಳು ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡುತ್ತಿವೆ. ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದ್ದು, ನಾವೆಲ್ಲರೂ ಒಂದಾಗಿ ಉಗ್ರ ಹೋರಾಟ ಮಾಡಿದಾಗ ಮಾತ್ರ ನಮಗೆ ಜಯ ಸಿಗುತ್ತದೆ. ಇಲ್ಲದಿದ್ದರೇ ನಮ್ಮ-ನಮ್ಮಲ್ಲೇ ಜಗಳವಾಡುತ್ತಾ ಸಮಾಜದ ಮುಂದಿನ ಪೀಳಿಗೆಯನ್ನು ಸಂಕಷ್ಟದ ಪರಿಸ್ಥಿತಿಗೆ ದೂಡಿದಂತಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಮುಖಂಡ ವಿಜಯಕುಮಾರ ಗಡ್ಡಿ ಮಾತನಾಡಿ, ‘20 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ದೆಹಲಿಗೆ ತೆರಳಿ ಮನವರಿಕೆ ಮಾಡಲಾಗಿತ್ತು. ಆದರೆ, ಇದುವರೆಗೂ ಹೋರಾಟಕ್ಕೆ ಫಲ ಸಿಕ್ಕಿಲ್ಲ. ಮೀಸಲಾತಿ ತಪ್ಪಿಸಲೆಂದು ವ್ಯವಸ್ಥಿತವಾಗಿ ಕೆಲವರು ಕುತಂತ್ರ ಮಾಡುತ್ತಿದ್ದಾರೆ’ ಎಂದರು.
ಜಿಲ್ಲಾ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ಮಾತನಾಡಿದರು.
ಸಮಾಜದ ಹಿರಿಯರಾದ ಶಾಂತಣ್ಣ ಮುಳವಾಡ, ಎಸ್.ಎಸ್.ಹುರಕಡ್ಲಿ, ನಗರಸಭೆ ಸದಸ್ಯ ಮಾಂತೇಶ ನಲವಡಿ, ಮಹೇಶ ಶಿರಹಟ್ಟಿ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಬಸವರಾಜ ಗಡ್ಡೆಪ್ಪನವರ, ವಿಜಯಾ ಅಂಗಡಿ, ಪಂಚಮಸಾಲಿ ಮಹಿಳಾ ಅಧ್ಯಕ್ಷೆ ಸ್ವಾತಿ ಅಕ್ಕಿ ಇದ್ದರು.
ರಾಜ್ಯದಾದ್ಯಂತ 10 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ವಕೀಲರಿದ್ದಾರೆ. ಬೆಳಗಾವಿಯಲ್ಲಿ ನಡೆದ ವಕೀಲರ ಸಭೆಯಲ್ಲಿ 5 ಸಾವಿರಕ್ಕೂ ಹೆಚ್ಚು ವಕೀಲರು ಭಾಗವಹಿಸಿದ್ದರು. ಕಾನೂನಿನ ಚೌಕಟ್ಟಿನಲ್ಲಿ ಹೋರಾಟದ ರೂಪುರೇಷೆ ಬಗ್ಗೆ ಈಗಾಗಲೇ ಚರ್ಚಿಸಲಾಗಿದ್ದು 2ಎ ಮೀಸಲಾತಿ ಹೋರಾಟಕ್ಕೆ ಸಮಾಜದ ವಕೀಲರ ಸಹಕಾರ ಮುಂದುವರಿಯಲಿದೆ.–ಮಾಂತೇಶಗೌಡ ಹಿರೇಮನಿಪಾಟೀಲ ಅಧ್ಯಕ್ಷರು ಜಿಲ್ಲಾ ವಕೀಲರ ಸಂಘ ನಿಂತಲ್ಲೇ ನಿಂತ 2ಡಿ ಮೀಸಲಾತಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮ ಪೀಠಾಧಿಪತಿ ಮುಂದಾಳತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ ಅಂದಿನ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಸರ್ಕಾರ 2ಎ ಬದಲಾಗಿ 2ಡಿ ಮೀಸಲಾತಿ ಘೋಷಿಸಿತು. ಇದರ ವಿರುದ್ಧ ಹಲವರು ಕೋರ್ಟ್ ಮೊರೆ ಹೋಗಿದ್ದಾರೆ. ಹಾಗಾಗಿ 2ಡಿ ಮೀಸಲಾತಿ ಅಲ್ಲಿಗೆ ನಿಂತಿದೆ. –ಅನಿಲ ಪಾಟೀಲ ಅಧ್ಯಕ್ಷರು ಜಿಲ್ಲಾ ಪಂಚಮಸಾಲಿ ಸಮಾಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.