ಗದಗ: ಜಿಲ್ಲೆಯ ಮುಖ್ಯ ಪಟ್ಟಣಗಳ ಸಿಗ್ನಲ್‌ಗಳು, ಪ್ರಮುಖ ದೇವಸ್ಥಾನಗಳು, ದರ್ಗಾ, ಚರ್ಚ್ ಹಾಗೂ ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಭಿಕ್ಷುಕರು ಕಾಣಸಿಗುತ್ತಾರೆ. ಗುರುವಾರದಂದು ಸಾಯಿ ಬಾಬಾ ದೇವಸ್ಥಾನದ ಮುಂದೆ, ಶನಿವಾರ ಆಂಜನೇಯನ ಗುಡಿ ಮುಂದೆ ಭಿಕ್ಷೆ ಬೇಡುವ ‘ಸೀಸನಲ್’ ಭಿಕ್ಷುಕರು ಕೂಡ ಜಿಲ್ಲೆಯಲ್ಲಿ ಇದ್ದಾರೆ.
ಜಿಲ್ಲೆಯಲ್ಲಿ ಒಂದೇ ಒಂದು ಭಿಕ್ಷುಕರ ಪುನರ್ವಸತಿ ಕೇಂದ್ರ ಇಲ್ಲ. ಗದಗ ನಗರದಲ್ಲಿ ಪುನರ್ವಸತಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹಾಗಾಗಿ, ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಿ ಗೌರವಯುತ ಜೀವನ ಕಲ್ಪಿಸುವಲ್ಲಿ ಸ್ಥಳೀಯ ಸಂಸ್ಥೆ ವಿಫಲಗೊಂಡಿದೆ. ಅಲ್ಲದೇ, ಇಲ್ಲಿರುವ ಭಿಕ್ಷುಕರು ಕೂಡ ಭಿಕ್ಷೆ ಬೇಡುವುದನ್ನು ಬಿಟ್ಟು ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಸಂಕಲ್ಪ ಹೊಂದುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಇಂದಿಗೂ ಭಿಕ್ಷುಕರು ಕಂಡು ಬರುತ್ತಿದ್ದಾರೆ.
ತಟ್ಟೆಯಲ್ಲಿರುವ ಚಿಲ್ಲರೆಯನ್ನು ಕುಣಿಸಿ, ಕೆಲವೊಮ್ಮೆ ಮೈ ಮುಟ್ಟಿ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವ ಭಿಕ್ಷುಕರನ್ನು ಕಂಡು ವಾಹನ ಸವಾರರು ಮುಖ ಸಿಂಡರಿಸುತ್ತಾರೆ. ಅವರ ವರ್ತನೆಯಿಂದ ಕಿರಿಕಿರಿ ಅನುಭವಿಸುವ ಅನೇಕರು, ‘ಗಟ್ಟಿಮುಟ್ಟಾಗಿದ್ದೀಯಾ? ದುಡಿದು ತಿನ್ನಲು ಏನು ದಾಡಿ?’ ಎಂದು ಬೈಯ್ದು ಕಳುಹಿಸುತ್ತಾರೆ. ಗದುಗಿನ ಸಾಯಿಬಾಬಾ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತ ಕುಳಿತಿದ್ದ ಐದಾರು ಮಂದಿ ವೃದ್ಧೆಯರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ: ‘ರಾಜೀವ್ ಗಾಂಧಿ ನಗರದ ಜೋಪಡಿಗಳಲ್ಲಿ ವಾಸವಿದ್ದೇವೆ. ಹೆಣ್ಣುಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳಿಸಿದ್ದೇವೆ. ಗಂಡು ಮಕ್ಕಳು ಬೆಂಗಳೂರಿಗೆ ಹೋಗಿದ್ದು, ಅಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಹೊರೆಯುತ್ತಾರೆ. ವೃದ್ಧರಾದ ನಾವು ಇಲ್ಲೇ ವಾಸವಿದ್ದೇವೆ. ಸರ್ಕಾರ ರೇಷನ್ ಕಾರ್ಡ್ ಕೊಟ್ಟಿದೆ. ಆದರೆ, ಗ್ಯಾಸ್ ಸಂಪರ್ಕಕ್ಕಾಗಿ ಅಲೆದು ಸುಸ್ತಾಯಿತು. ಇನ್ನೂ ಸವಲತ್ತು ಸಿಕ್ಕಿಲ್ಲ. ಎಲೆ ಅಡಿಕೆ, ಕಾಫಿ, ಟೀಯಂತಹ ಸಣ್ಣ ಹವ್ಯಾಸಗಳಿಗೆ ದುಡ್ಡು ಹೊಂದಿಸುವುದಕ್ಕಾಗಿ ಪ್ರತಿ ಗುರುವಾರ ಇಲ್ಲಿಗೆ ಬಂದು ಭಿಕ್ಷೆ ಬೇಡುತ್ತೇವೆ.’
‘ಭಿಕ್ಷುಕರ ಪುನರ್ವಸತಿ ಕೇಂದ್ರದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬಳಿಕ, ಭಿಕ್ಷಾಟನೆಯಲ್ಲಿ ತೊಡಗಿರುವ ಭಿಕ್ಷುಕರನ್ನು ಕರೆತಂದು ಅವರಿಗೆ ಹೊಲಿಗೆ ಸೇರಿದಂತೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲಕರವಾಗುವ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್ ತಿಳಿಸಿದರು.
ಮಕ್ಕಳೊಂದಿಗೆ ಬಲವಂತದ ಭಿಕ್ಷಾಟನೆ
ನರೇಗಲ್ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವು ಮಹಿಳೆಯರು ಪುಟ್ಟ ಮಕ್ಕಳನ್ನು ತಮ್ಮ ಸೊಂಟದಲ್ಲಿ ಬಿಗಿದುಕೊಂಡು ಪ್ರಯಾಣಿಕರು, ಜನರ ಬಳಿ ತೆರಳಿ ಭಿಕ್ಷಾಟನೆ ಮಾಡುತ್ತಿರುತ್ತಾರೆ. ಅಷ್ಟೆ ಅಲ್ಲದೆ ಶಾಲೆಗೆ ಹೋಗುವ ಮಕ್ಕಳನ್ನು ಸಹ ಅವರು ಭಿಕ್ಷಾಟನೆ ಮಾಡುವಂತೆ ಪ್ರೋತ್ಸಾಹ ನೀಡುತ್ತಾರೆ. ಇದರಿಂದ ಹಲವು ಮಕ್ಕಳು ಅಕ್ಷರ ಪಾತ್ರೆ ಬಿಟ್ಟು ಭಿಕ್ಷೆ ಪಾತ್ರೆ ಹಿಡಿದಿದ್ದಾರೆ.
ಆಗಾಗ ಪಟ್ಟಣದ ಶಿಕ್ಷಕರು, ಹಿರಿಯರು ಅವರಿಗೆ ತಿಳಿವಳಿಕೆ ನೀಡಿ ಶಾಲೆಗೆ ಸೇರಿಸಿರುವ ಘಟನೆಗಳು ಸಹ ನಡೆದಿವೆ.ಹಾಲು ಕುಡಿಯುವ ಎಳೆ ಮಕ್ಕಳನ್ನು ಸೊಂಟದಲ್ಲಿ ಬಿಗಿದುಕೊಂಡು ಕೈಯೊಡ್ಡುವುದು, ವ್ಯಕ್ತಿಗಳನ್ನು ಹಿಂಬಾಲಿಸುವುದು ಹಾಗೂ ಕೊಡದೆ ಇದ್ದರೆ ರಾಜಾ ರೋಷವಾಗಿಯೇ ಕೆಟ್ಟ ಪದಗಳನ್ನು ಬಳಕೆ ಮಾಡಿ ಬೈಯುವುದು ಮತ್ತು ಇನ್ನಿತರ ಕುಚೇಷ್ಟೆಯಿಂದ ಜನರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.
‘ಕರ್ನಾಟಕ ಭಿಕ್ಷಾಟನೆ ನಿರ್ಮೂಲನಾ ಕಾಯ್ದೆ 1975 ಪ್ರಕಾರ ಭಿಕ್ಷಾಟನೆ ಮಾಡುವುದು ಹಾಗೂ ಭಿಕ್ಷೆ ಕೊಡುವುದು ಎರಡೂ ಅಪರಾಧ. ಆದರೆ, ಈ ಕಾಯ್ದೆಯನ್ನು ಯಾರೂ ಪಾಲನೆ ಮಾಡುತ್ತಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ರೋಣ ತಾಲ್ಲೂಕು ಅಧಿಕಾರಿ ಬಾಲಚಂದ್ರ ಸಂಗನಾಳ ಹೇಳಿದರು.
‘ಭಿಕ್ಷುಕರಿಂದ ನಮಗೆ ತೊಂದರೆ ಇಲ್ಲದಿದ್ದರೂ ಅವರಿಗೆ ಕಡಿವಾಣ ಹಾಕುವುದು ಅಗತ್ಯವಿದೆ’ ಎನ್ನುತ್ತಾರೆ ನರಗುಂದ ಪಟ್ಪಣದ ಚನ್ನು ನಂದಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
‘ಭಿಕ್ಷಾಟನೆ ನಿಯಂತ್ರಿಸಲು ಕೇಂದ್ರ ಪರಿಹಾರ ಹಾಗೂ ಪುನರ್ವಸತಿ ಇಲಾಖೆ ಕ್ರಮ ಕೈಗೊಳ್ಳಬೇಕು. ನಮ್ಮಲ್ಲಿ ವಸೂಲಿಯಾದ ತೆರಿಗೆಯಲ್ಲಿ ಶೇ 3ರಷ್ಟನ್ನು ಆ ಇಲಾಖೆಗೆ ಭರಿಸಲಾಗುತ್ತದೆ. ನಾವು ಭಿಕ್ಷಾಟನೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ನರಗುಂದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ.
ಪುನರ್ವಸತಿ ಕೇಂದ್ರಗಳು ಇಲ್ಲ
ಭಿಕ್ಷುಕರ ಕಲ್ಯಾಣಕ್ಕಾಗಿ ಪ್ರತಿವರ್ಷ ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿದೆ. ಆದರೆ, ಇಲ್ಲಿನ ಭಿಕ್ಷುಕರಿಗೆ ಯಾವುದೇ ಸೌಲಭ್ಯ ಇನ್ನೂ ಸಿಕ್ಕಿಲ್ಲ.
2018-19ರಲ್ಲಿ ₹2.09 ಲಕ್ಷ ಮತ್ತು 2019-20ನೇ ಸಾಲಿನಲ್ಲಿ ₹12.24 ಲಕ್ಷ ವಸೂಲಿ ಮಾಡಲಾಗಿದೆ. ಆದರೆ ಹೀಗೆ ವಸೂಲಿ ಮಾಡಿದ ಹಣವನ್ನು ಪುರಸಭೆ ಬೆಂಗಳೂರಿನ ಅರ್ಬನ್ ಸೆಂಟ್ರಲ್ ಬೆಗ್ಗರ್ಸ್ ರಿಲೀಫ್ ಕಮಿಟಿಗೆ ಕಳುಹಿಸಿಕೊಟ್ಟಿರುವ ಬಗ್ಗೆ ದಾಖಲೆಗಳು ಇವೆ.
ಪ್ರತಿವರ್ಷ ಪಟ್ಟಣ ದಲ್ಲಿ ವಿಶೇಷವಾಗಿ ಆಂಧ್ರ ಮೂಲದ ಭಿಕ್ಷುಕರು ಹೆಚ್ಚುತ್ತಿದ್ದಾರೆ. ಮಕ್ಕಳ ಭಿಕ್ಷುಕರ ಸಂಖ್ಯೆಯೂ ಏರುತ್ತಲೇ ಇದೆ. ಅವರಿಗಾಗಿ ತಾಲ್ಲೂಕಿನಲ್ಲಿ ಎಲ್ಲೂ ಪುನರ್ವಸತಿ ಕೇಂದ್ರಗಳಿಲ್ಲ.
ಗ್ರಾಮಗಳಲ್ಲಿ ಭಿಕ್ಷುಕರ ಸಂಖ್ಯೆ ಕಡಿಮೆ
ಡಂಬಳ: ನಗರ ಪ್ರದೇಶಗಳಿಗೆ ಹೋಲಿಕೆ ಮಾಡಿ ನೋಡಿದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಭಿಕ್ಷುಕರ ಸಂಖ್ಯೆ ಕಡಿಮೆ ಇದೆ. ಗ್ರಾಮೀಣ ಭಾಗದಲ್ಲಿ ಕಂಡುಬರುವ ಅಲ್ಪ ಸ್ವಲ್ಪ ಭಿಕ್ಷುಕರು ಬಸ್ ನಿಲ್ದಾಣ, ಸಮುದಾಯ ಭವನ ಮತ್ತು ವಿವಿಧ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದಾರೆ. ಅವರು ಮನೆ ಮನೆಗೆ ತೆರಳಿ ಕೈಚಾಚಿ ಆಹಾರಕ್ಕಾಗಿ ಅಲೆದಾಡುವುದಿಲ್ಲ. ಸ್ಥಳೀಯ ಹೋಟೆಲ್ ಮಾಲೀಕರು ಇವರಿಗೆ ಮಾನವೀಯತೆ ನೆಲೆಯಲ್ಲಿ ರೊಟ್ಟಿ, ಅನ್ನ, ಸಾಂಬಾರ್, ಪಲ್ಯ ಇತರೆ ಆಹಾರವನ್ನು ನೀಡುತ್ತಿದ್ದಾರೆ.
ಕೌಟುಂಬಿಕ ಸಮಸ್ಯೆ, ಆಸ್ತಿ ಕಲಹ ಮುಂತಾದ ಕಾರಣಗಳಿಂದ ಮಾನಸಿಕವಾಗಿ ನೊಂದು ದಿಕ್ಕು ಕಾಣದೆ ಊರೂರು ಅಲೆಯುವ ಮೂಲಕ ವಯೋವೃದ್ಧರು ತಮ್ಮ ಸಂಧ್ಯಾಕಾಲವನ್ನು ಭಿಕ್ಷಾಟನೆಯೊಂದಿಗೆ ಕಳೆಯುತ್ತಿರುವ ಚಿತ್ರಣ ಸಾಮಾನ್ಯವಾಗಿ ಕಂಡು ಬರುತ್ತದೆ.
ಭಿಕ್ಷುಕರ ಕಿರುಕುಳದಿಂದ ಮುಕ್ತ
ಮುಂಡರಗಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಯಾವ ಭಾಗದಲ್ಲಿಯೂ ಭಿಕ್ಷುಕರ ಪುನರ್ವಸತಿ ಕೇಂದ್ರಗಳಿಲ್ಲ. ಪಟ್ಟಣದಲ್ಲಿ ಹಲವು ಮಠಗಳು ಹಾಗೂ ದೇವಸ್ಥಾನಗಳಿವೆಯಾದರೂ ಅಲ್ಲಿ ಭಿಕ್ಷುಕರ ಕಾಟವಿಲ್ಲ.
ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಕೆಲವು ಭಾಗಗಳಲ್ಲಿ ವಲಸೆ ಭಿಕ್ಷುಕರು ಕಂಡು ಬರುತ್ತಿದ್ದು, ಮಹಿಳೆಯರು ಕುಂಕಳಲ್ಲಿ ಮಕ್ಕಳನ್ನು ಇಟ್ಟುಕೊಂಡು ಭಿಕ್ಷೆ ಬೇಡುತ್ತಿರುತ್ತಾರೆ. ಕೆಲವು ವೃದ್ಧರು, ಜೋಗಪ್ಪನವರು ಮಂಗಳವಾರ ಹಾಗೂ ಶುಕ್ರವಾರ ಸಾಂದರ್ಭಿಕವಾಗಿ ಭಿಕ್ಷಾಟನೆ ಮಾಡುತ್ತಾರೆ. ಆದರೆ ಅವರಾರೂ ಜನರಿಗೆ ಕಿರುಕುಳ ನೀಡುವುದಿಲ್ಲ.
ಅಪರೂಪಕ್ಕೊಮ್ಮೆ ಕಂಡು ಬರುವ ಮಾನಸಿಕ ಅಸ್ವಸ್ಥರನ್ನು ಪಟ್ಟಣದ ಕೆಲವು ಯುವಕರು ಗುರುತಿಸಿ ಅವರಿಗೆ ಬಟ್ಟೆ, ಊಟ, ಉಪಾಹಾರ ನೀಡುತ್ತಾರೆ.
ಪಟ್ಟಣದ ಕಲ್ಪವೃಕ್ಷ ವಿವಿಧೋದ್ದೇಶ ಸಂಸ್ಥೆಯ ಮುಖಂಡ ಹಾಗೂ ಕ್ಷೌರಿಕ ವೃತ್ತಿಯಲ್ಲಿರುವ ದೇವರಾಜ ಹಡಪದ ಪಟ್ಟಣದಲ್ಲಿ ಯಾರಾದರೂ ಮಾನಸಿಕ ಅಸ್ವಸ್ಥರು ಕಂಡು ಬಂದರೆ ಅವರಿಗೆ ಉಚಿತವಾಗಿ ಕ್ಷೌರ ಮಾಡಿ, ಸ್ನಾನ ಮಾಡಿಸಿ ಅವರಿಗೆ ಬಟ್ಟೆಬರೆ ನೀಡುತ್ತಾರೆ.
ಮಾನಸಿಕ ಅನಾರೋಗ್ಯದಿಂದ ಬಳಲುವ ಭಿಕ್ಷುಕರನ್ನು ಹಾಗೂ ಎಲ್ಲಿಂದಲೋ ಬಂದು ಇಲ್ಲಿ ನೆಲೆಸಿರುವ ಮಾನಸಿಕ ಅಸ್ವಸ್ಥರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ. ಪಟ್ಟಣದ ದಾನಿಗಳನ್ನು ಸಂಪರ್ಕಿಸಿ ಅವರನ್ನು ತಮ್ಮ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.
ಹೆಚ್ಚುತ್ತಿದೆ ಭಿಕ್ಷುಕರು, ಅಸ್ವಸ್ಥರ ಸಂಖ್ಯೆ
ರೋಣ: ಇಲ್ಲಿನ ಬಸ್‌ನಿಲ್ದಾಣ, ಸರ್ಕಲ್, ಮಾರ್ಕೆಟ್, ದೇಗುಲ ಸೇರಿದಂತೆ ನಗರದ ಜನದಟ್ಟಣೆಯ ಪ್ರದೇಶಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಭಿಕ್ಷಾಟನೆ ಮಾಡುವವರ ಸಂಖ್ಯೆ ತುಸು ಹೆಚ್ಚೇ ಇದೆ. ರೋಣ ನಿಲ್ದಾಣದಲ್ಲಿ ಇವರ ಕಾಟ ಹೇಳತೀರದು.
ಬಸ್ ಬಸ್‌ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಬೆನ್ನತ್ತುವ ಭಿಕ್ಷುಕರು, ಹಣ ಕೊಡುವವರಿಗೂ ಬಿಡುವುದಿಲ್ಲ. ಕಾಡಿ ಬೇಡಿ, ಅತ್ತು ಕರೆದು ಹಣ ಪಡೆಯುತ್ತಾರೆ. ಅವರನ್ನು ನೋಡಿದರೆ, ವ್ಯಸನಕ್ಕೆ ದಾಸರಾಗಿರುವಂತೆ ಕಾಣುತ್ತದೆ. ಕೆಲವೊಮ್ಮೆ ಹಣ ಕೊಡದಿದ್ದರೆ ಜನರಿಗೆ ಅವಾಚ್ಯ ಶಬ್ದಗಳಿಂದಲೂ ನಿಂದಿಸುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.