ADVERTISEMENT

ಲಕ್ಷ್ಮೇಶ್ವರ | ಗಗನಮುಖಿಯಾದ ಬೆಲೆ: ಗ್ರಾಹಕರ ಬಾಯಿ ಸುಡುತ್ತಿದೆ ವೀಳ್ಯದೆಲೆ

ನಾಗರಾಜ ಎಸ್‌.ಹಣಗಿ
Published 28 ಮೇ 2024, 6:08 IST
Last Updated 28 ಮೇ 2024, 6:08 IST
ತೋಟದಲ್ಲಿ ಎಲೆ ಕೊಯ್ಯುತ್ತಿರುವ ಲಕ್ಷ್ಮೇಶ್ವರದ ರೈತ ನಾಗರಾಜ ಚಿಂಚಲಿ
ತೋಟದಲ್ಲಿ ಎಲೆ ಕೊಯ್ಯುತ್ತಿರುವ ಲಕ್ಷ್ಮೇಶ್ವರದ ರೈತ ನಾಗರಾಜ ಚಿಂಚಲಿ   

ಲಕ್ಷ್ಮೇಶ್ವರ: ಪ್ರತಿಯೊಂದು ಶುಭ ಕಾರ್ಯಕ್ಕೆ ಅಗತ್ಯವಾಗಿ ಬೇಕಾಗುವ ವೀಳ್ಯದೆಲೆ ದರ ಇದೀಗ ಗಗನಮುಖಿಯಾಗಿದೆ.

ಉತ್ತರ ಕರ್ನಾಟಕದ ಮಂದಿ ಎಲೆ, ಅಡಿಕೆ ತಿನ್ನುವುದು ಸಾಮಾನ್ಯ. ಆದರೆ ಹೆಚ್ಚಿರುವ ಬೆಲೆ ಅವರ ಬಾಯಿಯನ್ನು ಸುಡುತ್ತಿದೆ. ಗಂಟೆಗೊಂದು ಬಾರಿ ಎಲೆ ಅಡಿಕೆ ತಿನ್ನುವವರು ಇದೀಗ ಮೂರ್ನಾಲ್ಕು ಗಂಟೆಗೊಮ್ಮೆ ತಿನ್ನುತ್ತಿದ್ದಾರೆ. ಇದಕ್ಕೆಲ್ಲ ಕಾರಣ ವರುಣರಾಯನ ಅವಕೃಪೆ.

ಕಳೆದ ವರ್ಷ ಮಳೆ ಆಗದ ಕಾರಣ ಎಲೆ ಬಳ್ಳಿ ತೋಟಗಳು ಒಣಗುವ ಹಂತಕ್ಕೆ ತಲುಪಿವೆ. ಲಭ್ಯ ಇರುವಷ್ಟು ನೀರಿನಿಂದ ರೈತರು ಎಲೆಬಳ್ಳಿ ಕಾಪಾಡಿಕೊಂಡು ಬರುತ್ತಿದ್ದಾರೆ. ಆದರೆ ಕೆಲ ಕಡೆ ಕೊಳವೆ ಬಾವಿಗಳಲ್ಲಿನ ನೀರು ಕಡಿಮೆಯಾಗಿದೆ. ಇಡೀ ತೋಟಕ್ಕೆ ಸಾಕಾಗುಷ್ಟು ನೀರು ಸಿಗುತ್ತಿಲ್ಲ. ಇದರಿಂದಾಗಿ ತೇವಾಂಶದ ಕೊರತೆ ಉಂಟಾಗಿ ಎಲೆಬಳ್ಳಿ ತೋಟಗಳು ಸರಿಯಗಿ ಎಲೆ ಬಿಡುತ್ತಿಲ್ಲ.

ADVERTISEMENT

ಇಳುವರಿಯಲ್ಲಿ ಸಾಕಷ್ಟು ಕುಂಠಿತಗೊಂಡಿದೆ. ಆದರೆ ಬಂದಷ್ಟು ಫಸಲಿಗೆ ಉತ್ತಮ ಬೆಲೆ ಸಿಗುತ್ತಿರುವುದು ಎಲೆ ಬೆಳೆಗಾರರಿಗೆ ಖುಷಿ ತಂದಿದೆ. ಆದರೆ ಗ್ರಾಹಕರು ಎಲೆ ಖರೀದಿಸಲು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಸದ್ಯ 100 ವೀಳ್ಯದೆಲೆಯ ದರ ₹180ರಿಂದ ₹200ಕ್ಕೆ ತಲುಪಿದೆ. ಚಿಲ್ಲರೆ ಅಂಗಡಿಕಾರರು ಇಷ್ಟು ತುಟ್ಟಿಯಾಗಿರುವ ಎಲೆಯನ್ನು ಖರೀದಿಸಿ ಮಾರಾಟ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

‘ಉತ್ತಮ ಮಳೆಯಾದರೆ ಇಪ್ಪತ್ತೈದು ದಿನಕ್ಕೊಮ್ಮೆ ನಾಲ್ಕರಿಂದ ಆರು ಅಂಡಿಗೆ ಎಲೆ ಇಳುವರಿ ಬರುತ್ತಿತ್ತು. ಆದರೆ ಮಳೆ ಆಗದ ಕಾರಣ ಇದೀಗ ಎರಡ್ಮೂರು ಅಂಡಿಗೆ ಇಳಿದಿದೆ’ ಎಂಬುದು ಕಳೆದ 25 ವರ್ಷಗಳಿಂದ ವೀಳ್ಯದೆಲೆ ಬೆಳೆಯುತ್ತಿರುವ ಲಕ್ಷ್ಮೇಶ್ವರದ ರೈತ ನಾಗರಾಜ ಚಿಂಚಲಿ ಅವರ ಅಭಿಪ್ರಾಯ.

‘ಇಷ್ಟು ವರ್ಷದಾಗ ಎಲಿ ರೇಟ್ ಇಷ್ಟು ತುಟ್ಟಿ ಆಗಿರಲಿಲ್ಲ. ಆದರ ಈ ವರ್ಷ ಭಾಳ ದುಬಾರಿ ಆಗೇತ್ರಿ. ಎಲಿನ ಹ್ಯಾಂಗ ಮಾರಬೇಕ ಅನ್ನದ ಗೊತ್ತಾಗವಲ್ದು’ ಎಂದು ಇಪ್ಪತ್ತು ವರ್ಷಗಳಿಂದ ಲಕ್ಷ್ಮೇಶ್ವರದ ಪಾನ್ ಅಂಗಡಿಗಳಿಗೆ ಎಲೆ ಮಾರಾಟ ಮಾಡುತ್ತಿರುವ ಸವಣೂರಿನ ವ್ಯಾಪಾರಸ್ಥ ಜಾಕೀಕ್‌ ಹುಸೇನ್ ಮಲ್ಲೂರಿ ಹೇಳಿದರು.

‘ಎಲಿ ಭಾಳ ದುಬಾರಿ ಆಗ್ಯಾವು. ಐದು ರೂಪಾಯಿಗೆ ಎರಡು ಎಲಿ ಮಾರಿದರೂ ನಮಗ ಲುಕ್ಷಾನ್ ಐತ್ರೀ’ ಎಂದು ಲಕ್ಷ್ಮೇಶ್ವರದ ಪಾನ್ ಅಂಗಡಿಯೊಂದರ ಮಾಲೀಕ ಅಬ್ದುಲ್ ರಿತ್ತಿ ಹೇಳುತ್ತಾರೆ.

ತೋಟಕ್ಕೆ ಸಾಕಾಗುಷ್ಟು ಸಿಗದ ನೀರು; ತೇವಾಂಶ ಕೊರತೆ 100 ವೀಳ್ಯದೆಲೆಗೆ  ₹180ರಿಂದ ₹200 ದರ ಐದು ರೂಪಾಯಿಗೆ ಎರಡು ಎಲಿ ಮಾರಿದರೂ ನಷ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.