ADVERTISEMENT

ಡಂಬಳ | ಶ್ರಾವಣ ಮಾಸ: ಗ್ರಾಮಗಳಲ್ಲಿ ಭಜನಾ ಪದಗಳ ಕಲರವ

ಲಕ್ಷ್ಮಣ ಎಚ್.ದೊಡ್ಡಮನಿ
Published 1 ಸೆಪ್ಟೆಂಬರ್ 2024, 6:07 IST
Last Updated 1 ಸೆಪ್ಟೆಂಬರ್ 2024, 6:07 IST
ಡಂಬಳ ಗ್ರಾಮದ ಮರಳ ಸಿದ್ದೇಶ್ವರ ದೇವಸ್ಥಾನದ ಭಜನಾ ಸಮಿತಿಯವರು ಶ್ರಾವಣ ಮಾಸದ ಅಂಗವಾಗಿ ಭಜನಾ ಪದಗಳನ್ನು ಹಾಡುತ್ತ ಪ್ರದಕ್ಷಿಣೆ ಹಾಕಿದರು
ಡಂಬಳ ಗ್ರಾಮದ ಮರಳ ಸಿದ್ದೇಶ್ವರ ದೇವಸ್ಥಾನದ ಭಜನಾ ಸಮಿತಿಯವರು ಶ್ರಾವಣ ಮಾಸದ ಅಂಗವಾಗಿ ಭಜನಾ ಪದಗಳನ್ನು ಹಾಡುತ್ತ ಪ್ರದಕ್ಷಿಣೆ ಹಾಕಿದರು   

ಡಂಬಳ: ಆಧುನಿಕ ಕಾಲದಲ್ಲಿ ಕಣ್ಮರೆಯಾಗುತ್ತಿರುವ ಕೆಲವೊಂದು ಸಂಪ್ರದಾಯಗಳು ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿವೆ. ಶ್ರಾವಣ ಮಾಸದಲ್ಲಿ ಹಬ್ಬ, ಪೂಜೆ, ಅಭಿಷೇಕದ ಜತೆಗೆ ಒಂದು ತಿಂಗಳಿನಿಂದ ನಿರಂತರವಾಗಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶ್ರಾವಣ ಮಾಸದ ಭಜನಾ ಕಾರ್ಯಕ್ರಮಗಳು ನಡೆಯುತ್ತಿವೆ.

ಧರ್ಮಪುರ, ಧರ್ಮವೊಳಲದಿಂದ ಡಂಬಳ ಎಂಬ ಹೆಸರು ಬಂದಿರುವ ಕುರಿತು ಇತಿಹಾಸದಲ್ಲಿ ದಾಖಲಾಗಿದೆ. ಕೃಷಿ ಪ್ರಧಾನವಾಗಿರುವ ಡಂಬಳದಲ್ಲಿ ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ಕೃಷಿ ಬಿತ್ತನೆ ಕಾರ್ಯ ಮುಗಿದು ಪೈರುಗಳು ಬೆಳೆದಿರುತ್ತವೆ.

ಹೊಲ, ಗದ್ದೆ ಸೇರಿದಂತೆ ಎಲ್ಲಡೆ ಹಸಿರು ಕಂಗೊಳಿಸುತ್ತಿರುತ್ತದೆ. ಇಂತಹ ಮಾಸದಲ್ಲಿ ಧರ್ಮಪುರ ಮರಳ ಸಿದ್ಧೇಶ್ವರ ದೇವಸ್ಥಾನದ ಭಜನೆ ಸಮಿತಿ ಹಲವು ದಶಕಗಳಿಂದಲೂ ಭಜನೆ ಪದ ಹಾಡುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದೆ.

ADVERTISEMENT

ತೋಂಟದ ಲಿಂ. ಸಿದ್ಧಲಿಂಗ ಸ್ವಾಮೀಜಿ ಕೋಮು ಸೌಹಾರ್ದದ ಪ್ರತೀಕ. ಅವರು ಹಾಕಿಕೊಟ್ಟ ಮಾರ್ಗದರ್ಶನ, ತತ್ವ, ಸಿದ್ಧಾಂತ ಸಮಾನತೆಯ ಪ್ರತಿಪಾದನೆಯನ್ನು ಮರಳ ಸಿದ್ದೇಶ್ವರ ಭಜನಾ ತಂಡ ಸೇರಿದಂತೆ ಗ್ರಾಮಸ್ಥರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

‘ಡಂಬಳ ಗ್ರಾಮದಲ್ಲಿ ಮರಳ ಸಿದ್ಧೇಶ್ವರ ಭಜನಾ ಸಂಘ, ಕೆಂಚಮ್ಮ ದೇವಿ ಭಜನಾ ಸಂಘ,ದುರ್ಗಮ್ಮದೇವಿ ಭಜನಾ ಸಂಘ,  ಕಪ್ಪತ್ತಮಲ್ಲೇಶ್ವರ ಭಜನಾ ಸಂಘ, ಮಾಯಮ್ಮ ದೇವಿ ಭಜನಾ ಸಂಘ, ಕರಿಸಿದ್ಧೇಶ್ವರ ಭಜನಾ ಸಂಘ, ಹಾಲೇಶ್ವರ ಭಜನಾ ಸಂಘ ಸೇರಿದಂತೆ ಹಲವು ಸಂಘಗಳು ಸಕ್ರಿಯವಾಗಿವೆ. ಎಲ್ಲ ತಂಡದವರೂ ವಿವಿಧ ದೇವಸ್ಥಾನಗಳಲ್ಲಿ ನಿತ್ಯ ಭಜನಾ ಕಾರ್ಯಕ್ರಮ ನೀಡುತ್ತಾರೆ. ನಮ್ಮ ಗ್ರಾಮದಲ್ಲಿ ಸರ್ವಧರ್ಮದವರೂ ಸೌಹಾರ್ದದಿಂದ ಬದುಕುತ್ತಿದ್ದೇವೆ. ಭಜನೆ, ಜಾತ್ರೆ ಮುಂತಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುತ್ತಾರೆ’ ಎನ್ನುತ್ತಾರೆ ಮರಳಸಿದ್ದೇಶ್ವರ ದೇವಸ್ಥಾನ ಸಮಿತಿಯ ಗವಿಸಿದ್ದಪ್ಪ ಮಠದ.

ಹದಿನೈದರಿಂದ ಇಪ್ಪತ್ತು ಜನರ ಭಜನಾ ತಂಡ ಗ್ರಾಮಗಳಲ್ಲಿ ಸಂಚರಿಸುತ್ತದೆ. ತಂಡದ ಸದಸ್ಯರ ಕೈಯಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ಮುಂತಾದ ದೇವರ ಭಾವಚಿತ್ರ ಇರುತ್ತವೆ. ಮತ್ತೊಬ್ಬರ ಕೈಯಲ್ಲಿ ಗರುಡಗಂಬ, ಕಲಾವಿದರ ಕೈಗಳಲ್ಲಿ ಹಾರ್ಮೋನಿಯಂ, ತಬಲ, ತಾಳಗಳೊಂದಿಗೆ ದೇವರ ನಾಮಗಳನ್ನು ಹಾಡುವ ಕಲಾವಿದರು ಸೇರಿಸಿಕೊಳ್ಳುತ್ತಾ ಗ್ರಾಮದ ಪ್ರಮುಖ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಮುಖ ಸ್ಥಳದಲ್ಲಿ ಪ್ರದಕ್ಷಿಣೆ ಹಾಕುತ್ತಾರೆ.

ಒಂದೊಂದು ಮನೆಗೂ ಭಜನಾ ತಂಡ ಹೋಗಿ ಅಲ್ಲಿ ಸುಮಾರು ಅರ್ಧಗಂಟೆಯ ತನಕ ದೇವರನ್ನು ಸ್ತುತಿಸುತ್ತಾ ಹಾಡುಗಳನ್ನು ಹಾಡುತ್ತಾರೆ. ಭಕ್ತರು ಭಜನಾ ಪೂಜೆಗಾಗಿ ಪ್ರಸಾದವನ್ನು ಸಿದ್ದಪಡಿಸಿರುತ್ತಾರೆ.

ಡಂಬಳ  ಗ್ರಾಮದ ಮರಳ ಸಿದ್ದೇಶ್ವರ ದೇವಸ್ಥಾನದ ಭಜನಾ ಸಮಿತಿಯವರು ಶ್ರಾವಣ ಮಾಸದ ಅಂಗವಾಗಿ ಭಜನಾ ಪದಗಳನ್ನು ಹಾಡುತ್ತ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ

‘ಆರೋಗ್ಯ ವೃದ್ಧಿಗೆ ಸಹಕಾರಿ’

‘ಆಧುನಿಕ ಕಾಲದಲ್ಲಿ ಕೆಲವೊಂದು ಗ್ರಾಮೀಣ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿವೆ. ಆದರೆ ನಮ್ಮ ಗ್ರಾಮದಲ್ಲಿ ಭಜನಾ ತಂಡಗಳು ಜೀವಂತವಾಗಿವೆ. ಭಜನಾ ಪದ ಹಾಡುವುದರಿಂದ ಆರೋಗ್ಯ ವೃದ್ಧಿ ಜತೆಗೆ ಸಂಸ್ಕಾರ ಬೆಳೆಯುತ್ತದೆ’ ಎನ್ನುತ್ತಾರೆ ಕೆಂಚಮ್ಮದೇವಿ ಭಜನಾ ಸಂಘದ ಹಿರಿಯರಾದ ಮರಿಯಪ್ಪ ಸಿದ್ದಣ್ಣವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.