ಗದಗ: ‘ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ರಾಜ್ಯ ಸರ್ಕಾರ ವಕ್ಫ್ ಕಾಯ್ದೆ ಮೂಲಕ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಸರ್ಕಾರ ನೋಡಿಲ್ಲ. ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿಯ ಪರವಾಗಿ ಯಾವುದೇ ಚರ್ಚೆಯಾಗಿಲ್ಲ’ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಗದಗ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ನಡೆದ ‘ನಮ್ಮ ಭೂಮಿ ನಮ್ಮ ಹಕ್ಕು’ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ-ಪದೇ ನಾನು ಅಹಿಂದ ನಾಯಕ ಎಂದು ಹೇಳುತ್ತಾರೆ. ಆದರೆ, ಅದೇ ಸಮುದಾಯಕ್ಕೆ ಸೇರುವ ವಾಲ್ಮೀಕಿ ಜನಾಂಗದ ಹಣವನ್ನು ಲೂಟಿ ಮಾಡಿ ತೆಲಂಗಾಣ ಚುನಾವಣೆಗೆ ಬಳಿಸಿ ವಾಲ್ಮೀಕಿ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ’ ಎಂದು ಹರಿಹಾಯ್ದರು.
‘ರಾಜ್ಯ ಸರ್ಕಾರದ ಸಚಿವರು ಒಂದಿಲ್ಲೊಂದು ಹಗರಣದಲ್ಲಿ ಭಾಗಿಯಾಗಿದ್ದು, ತಾತ್ಕಾಲಿಕವಾಗಿ ವಿಧಾನಸಭೆ ವಿಸರ್ಜನೆಯಾದರೆ ಕಾಂಗ್ರೆಸ್ ಪಕ್ಷ 50 ಸ್ಥಾನಗಳನ್ನೂ ಗೆಲ್ಲುವುದಿಲ್ಲ’ ಎಂದು ಲೇವಡಿ ಮಾಡಿದರು.
‘ಚುನಾವಣಾ ಚತುರರ ಮಾತು ಕೇಳಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಪಂಚ ಗ್ಯಾರಂಟಿ ಘೋಷಿಸಿತು. ಆದರೆ, ರಾಜ್ಯದ ಆದಾಯ, ವೆಚ್ಚದ ಬಗ್ಗೆ ಯಾವುದೇ ವಿಚಾರ ಮಾಡಲಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರ ಇಂದು ದಿವಾಳಿ ಅಂಚಿನಲ್ಲಿದೆ’ ಎಂದು ಟೀಕಿಸಿದರು.
‘ಮಹಿಳಾ ಮತದಾರರು ₹ 2 ಸಾವಿರ ಹಣದ ಆಸೆಗೆ ಬಿದ್ದು, ಕಾಂಗ್ರೆಸ್‌ಗೆ ಮತ ಹಾಕಿದರು. ಈಗ ಅವರ ಆಸ್ತಿಯಲ್ಲಿ ವಕ್ಫ್ ಹೆಸರು ನಮೂದಾಗುತ್ತಿದೆ. ನರಗುಂದ ತಾಲ್ಲೂಕಿನಲ್ಲಿ 770 ಎಕರೆ ವಕ್ಫ್ ಆಸ್ತಿಯಾಗಿದೆ. ಲಕ್ಕುಂಡಿಯ ಹಿಂದೂ ರುದ್ರಭೂಮಿ, ಅನ್ನದಾನೇಶ್ವರ ಮಠದ ಆಸ್ತಿ ವಕ್ಫ್ ಆಸ್ತಿಯಾಗಿ ಬದಲಾಗಿದೆ’ ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೀತಿಯಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರಿಗೆ ನೋಟಿಸ್ ನೀಡದೇ ಆಸ್ತಿಯನ್ನು ವಕ್ಫ್‌ಗೆ ಸೇರಿಸಲಾಗಿದೆ’ ಎಂದು ದೂರಿದರು.
‘ಬಿಜೆಪಿಯಿಂದ ಹೋರಾಟದ ಮುನ್ಸೂಚನೆ ಸಿಗುತ್ತಿದ್ದಂತೆ ನೋಟಿಸ್ ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಹೇಳುತ್ತಾರೆ. ಆದರೆ, ಸಿಎಂ ಹೇಳಿದಂತೆ ನೋಟಿಸ್ ವಾಪಸ್ ಪಡೆಯಲು ಆಗುವುದಿಲ್ಲ. ಬದಲಾಗಿ ಕಾನೂನಿನಲ್ಲಿ ಬದಲಾವಣೆ ಆಗಬೇಕು. ಲಕ್ಷ್ಮೇಶ್ವರ, ಶಿರಹಟ್ಟಿ ಪಟ್ಟಣದ ಪುರಸಭೆ ಆಸ್ತಿಗಳನ್ನು ವಕ್ಫ್ ಎಂದು ನಮೂದಿಸಲಾಗಿದೆ’ ಎಂದು ಹರಿಹಾಯ್ದರು.
ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಕಾಂತಿಲಾಲ್ ಬನ್ಸಾಲಿ, ಉಮೇಶಗೌಡ ಪಾಟೀಲ, ಶ್ರೀಪತಿ ಉಡುಪಿ, ಶಿವಕುಮಾರ ನೀಲಗುಂದ, ಸುರೇಶ್ ಗೂಳಮ್ಮನವರ, ಸಿದ್ದಣ್ಣ ಪಲ್ಲೇದ್, ಅಶೋಕ ಹೆಬ್ಬಣ್ಣನವರ, ಶಾಂತಣ್ಣ ಕಲಕೇರಿ, ಪ್ರೇಮನಾಥ ಬಣ್ಣದ, ನಿರ್ಮಲಾ ಕೊಳ್ಳಿ, ಅಶ್ವಿನಿ ಜಗಾಪುರ, ವಿಜಯಲಕ್ಷ್ಮೀ ದಿಂಡೂರ, ವಿದ್ಯಾವತಿ ಗಡಗಿ, ಜಯಲಕ್ಷ್ಮೀ ಉಗಲಾಟದ, ವಿಜಯಲಕ್ಷ್ಮೀ ಮಾನ್ವಿ, ಪ್ರಭಾವತಿ ಬೆಳವಟ, ಲಕ್ಷ್ಮೀ ಖಾಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.