ADVERTISEMENT

ಅನುಕೂಲಕ್ಕೆ ತಕ್ಕಂತೆ ‘ಸರ್ಕಾರಿ ಸ್ಕೀಂ’ ಬಳಕೆ: ಬೊಮ್ಮಾಯಿ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:56 IST
Last Updated 7 ಜುಲೈ 2024, 15:56 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಗದಗ: ‘ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಯಾವುದೇ ತಪ್ಪುಗಳು ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಪ್ಪು ಮಾಡಿಲ್ಲ ಎಂದಾದರೆ ಈ ಪ್ರಕರಣವನ್ನು ಸಿಬಿಐ ಅಥವಾ ಒಬ್ಬರು ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಆಗ ಸತ್ಯ ಹೊರಬರಲಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರದಲ್ಲಿ ಸಾಕಷ್ಟು ಸ್ಕೀಂಗಳು (ಯೋಜನೆ) ಇರುತ್ತವೆ. ಜಮೀನು ಪಡೆದುಕೊಳ್ಳಲು ಬೇರೆ ಬೇರೆ ಸರ್ಕಾರದಲ್ಲಿ ಬೇರೆ ಬೇರೆ ಸ್ಕೀಂಗಳು ಇರುತ್ತವೆ. ಅದನ್ನು ನ್ಯಾಯಸಮ್ಮತವಾಗಿ ಪಡೆದುಕೊಳ್ಳಲು ನಮ್ಮ ತಕರಾರಿಲ್ಲ. ಆದರೆ, ಈ ಪ್ರಕರಣದಲ್ಲಿ ಈ ಯೋಜನೆ ದುರುಪಯೋಗ ಮಾಡಿಕೊಂಡಿರುವ ಅಂಶ ಇದೆ. ಅದನ್ನು ತಮಗೆ ಹೇಗೆ ಬೇಕೋ ಆ ರೀತಿ ಬದಲಾವಣೆ ಮಾಡಿಕೊಳ್ಳಲಾಗಿದೆಯೋ ಇಲ್ಲವೋ ಎಂಬುದು ತನಿಖೆಯಿಂದ ಹೊರಬರಬೇಕಿದೆ’ ಎಂದರು.

ಡೆಂಗಿ ನಿಯಂತ್ರಣದಲ್ಲಿ ವಿಫಲ:

ADVERTISEMENT

‘ರಾಜ್ಯ ಸರ್ಕಾರ ಡೆಂಗಿ ಜ್ವರ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಡೆಂಗಿ ಜ್ವರ ಕಾಣಿಸಿಕೊಂಡು ಸುಮಾರು ಒಂದು ತಿಂಗಳು ಆಗಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.ಡೆಂಗಿ ಪ್ರಕರಣಗಳ ಸಂಖ್ಯೆಯನ್ನು ಸರ್ಕಾರ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 7 ಸಾವಿರ ಪ್ರಕರಣಗಳು ಸಕ್ರಿಯವಾಗಿವೆ. ನಿಜ ಹೇಳಬೇಕೆಂದರೆ ಅದಕ್ಕಿಂತಲೂ ಎರಡುಪಟ್ಟು ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳು ಸೌಲಭ್ಯಗಳಿಲ್ಲದೇ ಸೋತಿವೆ’ ಎಂದು ಕಿಡಿಕಾರಿದರು.

‘ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಎಲ್ಲ ಜಿಲ್ಲೆಗಳಲ್ಲಿ ವಿಶೇಷ ತಂಡಗಳನ್ನು ರಚಿಸಿ, ಡೆಂಗಿ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಡೆಂಗಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಬೇಕು. ಚುಚ್ಚುಮದ್ದು ಪೂರೈಕೆ ಮಾಡಬೇಕು. ಬಡವರಿಗೆ ಉಚಿತವಾಗಿ ರಕ್ತ ಪರೀಕ್ಷೆ ಮಾಡಿಸುವ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.