ADVERTISEMENT

ಲಕ್ಷ್ಮೇಶ್ವರ: ಮಕ್ಕಳ ಕೈ ಸೇರದ ಪುಸ್ತಕಗಳು

ಪೂರೈಕೆ ಆಗಬೇಕಿದೆ 1,50,284 ಪುಸ್ತಕಗಳು

ನಾಗರಾಜ ಎಸ್‌.ಹಣಗಿ
Published 12 ಜೂನ್ 2024, 5:44 IST
Last Updated 12 ಜೂನ್ 2024, 5:44 IST
ಉಚಿತ ವಿತರಣೆಗಾಗಿ ಲಕ್ಷ್ಮೇಶ್ವರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಂದಿರುವ ಪುಸ್ತಕಗಳು
ಉಚಿತ ವಿತರಣೆಗಾಗಿ ಲಕ್ಷ್ಮೇಶ್ವರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಂದಿರುವ ಪುಸ್ತಕಗಳು   

ಲಕ್ಷ್ಮೇಶ್ವರ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ವಾರಗಳಾಗುತ್ತ ಬಂದರೂ ಈವರೆಗೆ ಸರ್ಕಾರದಿಂದ ಉಚಿತವಾಗಿ ನೀಡಬೇಕಿದ್ದ ಪುಸ್ತಕಗಳು ಎಲ್ಲ ಶಾಲೆಗಳಿಗೆ ಎಲ್ಲ ತರಗತಿಗಳ ಪೂರೈಕೆ ಆಗಿಲ್ಲ. ಆದರೆ ಸರ್ಕಾರ ಮಾತ್ರ ಈಗಾಗಲೇ ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ ಎಂದು ಹೇಳಿದೆ.

ತಾಲ್ಲೂಕಿನ ಕೆಲವು ಶಾಲೆಗಳಲ್ಲಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಒಂದು ಪುಸ್ತಕ ಬಂದಿದ್ದರೆ ಮತ್ತೊಂದು ಬಂದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ 76 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, ಪುರಸಭೆಯ ಒಂದು ಶಾಲೆ, 12 ಅನುದಾನಿತ, 33 ಖಾಸಗಿ ಶಾಲೆಗಳು, ಸಾಮಾಜಿಕ ಇಲಾಖೆಗೆ ಸೇರಿದ ಮೂರು ಶಾಲೆಗಳು ಮತ್ತು ಒಂದು ಮೌಲಾನಾ ಆಜಾದ್ ಶಾಲೆಗಳು ಇವೆ.

ADVERTISEMENT

ಉಚಿತ ವಿತರಣೆಗಾಗಿ 3,89,628 ಹಾಗೂ ಮಾರಾಟಕ್ಕಾಗಿ 1,00,465 ಸೇರಿ ಒಟ್ಟು 4,90,093 ಪಠ್ಯ ಪುಸ್ತಕಗಳಿಗೆ ಬೇಡಿಕೆ ಇದೆ. ಆದರೆ ಈವರೆಗೆ ಉಚಿತ ವಿತರಣೆಗಾಗಿ 2,59,766 ಮತ್ತು ಮಾರಾಟಕ್ಕಾಗಿ 80,043 ಪುಸ್ತಕಗಳು ಮಾತ್ರ ಪೂರೈಕೆ ಆಗಿದ್ದು, ಇನ್ನೂ 1,50,284 ಪುಸ್ತಕಗಳು ಪೂರೈಕೆ ಆಗಬೇಕಾಗಿದೆ.

ಒಂದನೇ ತರಗತಿಯ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪರಿಸರ ಅಧ್ಯಯನ, ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯದ ಪುಸ್ತಕಗಳು ಬಂದಿವೆ. 2ನೇ ತರಗತಿಗೆ ಕನ್ನಡ ಮಾಧ್ಯಮದ ಕನ್ನಡ, ಇಂಗ್ಲಿಷ್, ಪರಿಸರ ಅಧ್ಯಯನ, ಗಣಿತ ವಿಷಯಗಳ ಎಲ್ಲ ಪುಸ್ತಕಗಳು ಬಂದಿವೆ. ಆದರೆ ಆಂಗ್ಲ ಮಾಧ್ಯಮದ ಪರಿಸರ ಅಧ್ಯಯನದ ಪುಸ್ತಕ ಹೊರತುಪಡಿಸಿ ಉಳಿದ ಎಲ್ಲ ಪುಸ್ತಕಗಳು ಬಂದಿವೆ. 3ನೇ ತರಗತಿಗೆ ಇಂಗ್ಲಿಷ್ ಹೊರತು ಪಡಿಸಿ ಉಳಿದ ಕನ್ನಡ, ಗಣಿತ, ವಿಜ್ಞಾನ, ದೈಹಿಕ ಶಿಕ್ಷಣದ ಪುಸ್ತಕಗಳು 4 ಮತ್ತು ಐದನೇ ತರಗತಿಯ ಎಲ್ಲ ಪುಸ್ತಕಗಳು ಬಂದಿದ್ದು ಕೆಲ ಶಾಲೆಗಳಿಗೆ ಇನ್ನೂ ಹಂಚಿಕೆ ಮಾಡುವುದು ಬಾಕಿ ಉಳಿದಿದೆ.

ಆರನೇ ತರಗತಿಯ ಗಣಿತ ಭಾಗ 2 ಹೊರತುಪಡಿಸಿ ಕನ್ನಡ, ಇಂಗ್ಲಿಷ್, ಏಳನೇ ತರಗತಿಯ ಕನ್ನಡ, ಇಂಗ್ಲಿಷ್, ಸಮಾಜ, ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಗಣಿತ ಭಾಗ 1 ಬಂದಿದ್ದು ಗಣಿತ ಭಾಗ 2 ಮಾತ್ರ ಬರಬೇಕಿದೆ. 8ನೇ ತರಗತಿಯ ಇಂಗ್ಲಿಷ್, ಗಣಿತ, ವಿಜ್ಞಾನ, ಹಿಂದಿ ವಿಷಯಗಳ ಪುಸ್ತಕಗಳು ಬಂದಿದ್ದು, ಸಮಾಜ ವಿಷಯದ ಒಂದನೇ ಭಾಗ ಬರಬೇಕಾಗಿದೆ. 9ನೇ ತರಗತಿಗೆ ಕನ್ನಡ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣದ ಪುಸ್ತಕಗಳು ಬಂದಿದ್ದು ಇಂಗ್ಲಿಷ್ ಪುಸ್ತಕ ಬರುವುದು ಬಾಕಿ ಇದೆ. ಹತ್ತನೇ ತರಗತಿಯ ಎಲ್ಲ ಪುಸ್ತಕಗಳು ಬಂದಿವೆ.

‘ಈ ವರ್ಷ ಎಲ್ಲ ತರಗತಿಯ ಪುಸ್ತಕಗಳು ಬೇಗನೇ ಬರುತ್ತಿವೆ. ಭಾಗ 1 ಮತ್ತು 2 ಎರಡು ಮಾಡಿದ್ದರಿಂದ ಪುಸ್ತಕಗಳು ಬರುವುದು ಸ್ವಲ್ಪ ತಡವಾಗಿದೆ. ಈಗಾಗಲೇ ಶೇ 80ರಷ್ಟು ಪಠ್ಯಪುಸ್ತಕಗಳು ಬಂದಿದ್ದು ವಿತರಣೆ ಮಾಡಲಾಗುತ್ತಿದೆ’ ಎಂದು ಶಿಕ್ಷಣ ಸಂಯೋಜಕ ಹರೀಶ ತಿಳಿಸಿದರು.

ಬಹುತೇಕ ಎಲ್ಲ ತರಗತಿಗಳ ಪುಸ್ತಕಗಳು ಬಂದಿವೆ. ಸೇತುಬಂಧ ಕಾರ್ಯಕ್ರಮ ಮುಗಿಯುವುದರೊಳಗೆ ಎಲ್ಲ ತರಗತಿಗಳಿಗೆ ಪುಸ್ತಕಗಳನ್ನು ವಿತರಿಸಲಾಗುವುದು.
ಎಚ್.ಎನ್. ನಾಯಕ, ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.