ADVERTISEMENT

ಜಾನುವಾರು ಆರೋಗ್ಯದ ಕಾಳಜಿ ವಹಿಸಿ

ಪಶು ಆರೋಗ್ಯ ಉಚಿತ ತಪಾಸಣಾ ಶಿಬಿರ: ಡಾ. ಸುರೇಶ ಛಲವಾದಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 14:23 IST
Last Updated 18 ಜನವರಿ 2024, 14:23 IST
ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ ನಡೆಯಿತು
ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ ನಡೆಯಿತು   

ಶಿರಹಟ್ಟಿ: ‘ಜಾನುವಾರುಗಳಿಗೆ ತಗುಲಬಹುದಾದ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಪಶು ವೈದ್ಯ ಸುರೇಶ ಛಲವಾದಿ ಸಲಹೆ ನೀಡಿದರು.

ತಾಲ್ಲೂಕಿನ ಮಜ್ಜೂರು ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆ ಹಾಗೂ ಔಟ್ ರೀಚ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಪಶು ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

‘ಕಾಲುಬೇನೆ, ಬಾಯಿಬೇನೆ, ಗಂಟುರೋಗ ಸೇರಿದಂತೆ ಜಾನುವಾರುಗಳಿಗೆ ಹರಡುವ ಅನೇಕ ರೋಗಗಳು ಹಾಗೂ ಔಷಧೋಪಚಾರದ ಬಗ್ಗೆ ರೈತರಿಗೆ ಅರಿವಿರಬೇಕು’ ಎಂದು ಹೇಳಿದರು.

ADVERTISEMENT

‘ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗಾಗಿ ಏರ್ಪಡಿಸುವ ಪಶು ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಪಶು ಚಿಕಿತ್ಸಕ ಮಂಜುನಾಥ ಅಮರಾಪುರ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ಸಿಗುತ್ತಿದೆ. ಹಾಲು ಉತ್ಪಾದನೆ, ಬರಡು ರಾಸುವಿಗೆ ಚಿಕಿತ್ಸೆ ಸೇರಿದಂತೆ ಜಾನುರುಗಳ ಆರೈಕೆ ಬಗ್ಗೆ ರೈತರು ನಿರ್ಲಕ್ಷ್ಯ ತೋರಬಾರದು. ಹತ್ತಿರದ ಪಶು ಆಸ್ಪತ್ರೆಯಲ್ಲಿ ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು’ ಎಂದು ಹೇಳಿದರು. ಪಶು ಚಿಕಿತ್ಸಾ ವಿಧಾನಗಳು, ಇಲಾಖೆಯ ಯೋಜನೆಗಳ ಕುರಿತು ತಿಳಿಸಿದರು.

ಔಟ್ ರೀಚ್ ಸಂಸ್ಥೆಯ ಕಾರ್ತಿಕ ದೇಸಾಯಿಪಟ್ಟಿ, ಗ್ರಾಮ ಪಂಚಾಯ್ತಿ ಮಟ್ಟದ ಪಶುಸಖಿ ಹಾಗೂ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.