ಗದಗ: ‘ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿರುವುದರಿಂದ ರೈತ ಸಮುದಾಯ ಹರ್ಷದಲ್ಲಿದೆ. ಯೂರಿಯಾ ರಸಗೊಬ್ಬರದ ಕೊರತೆ ಉಂಟಾಗದಂತೆ ಕ್ರಮ ವಹಿಸಲಾಗುವುದು’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಸಾರ್ವಜನಿಕ ಸ್ವಾತಂತ್ರ್ಯೋತ್ಸವದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, ‘ಮಳೆ ಚೆನ್ನಾಗಿ ಸುರಿದಿದ್ದರಿಂದ ಎಲ್ಲ ರೈತರೂ ಏಕಕಾಲಕ್ಕೆ ಬಿತ್ತನೆಯಲ್ಲಿ ತೊಡಗಿಸಿಕೊಂಡರು. ಇದೇ ಸಮಯಕ್ಕೆ ಬೆಳೆಗಳಿಗೆ ಹಳದಿ ರೋಗ ಕಾಣಿಸಿಕೊಂಡಿತು. ಹಾಗಾಗಿ, ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಯಿತು. ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸಚಿವರ ಜತೆಗೆ ಮಾತನಾಡಿದ್ದೇನೆ. ಮುಂದೆ ಯೂರಿಯಾ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ರೈತರಿಗೆ ತೊಂದರೆ ಆಗುವ ರೀತಿಯಲ್ಲಿ ನಮ್ಮ ಅಧಿಕಾರಿ ವರ್ಗ, ಆಡಳಿತ ವರ್ಗ ಯಾವತ್ತಿಗೂ ವರ್ತಿಸುವುದಿಲ್ಲ’ ಎಂದು ಹೇಳಿದರು.
‘ಖಾನಾಪುರ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಆದ ತಕ್ಷಣವೇ ನದಿಗೆ ನೀರು ಹರಿಸುವುದನ್ನು ಬಂದ್ ಮಾಡಿದ್ದೇವೆ. ಮುಂದಿನ ಜೂನ್, ಜುಲೈವರೆಗೆ ಆಗುವಷ್ಟು ನೀರು ಈಗ ನವಿಲುತೀರ್ಥ ಡ್ಯಾಂನಲ್ಲಿ ಸಂಗ್ರಹವಾಗಿದೆ. ಹಿಂಗಾರು ಬೆಳೆಗೆ ಮಾತ್ರ ನೀರಿನ ಅವಶ್ಯಕತೆ ಇದ್ದು, ಮುಂಗಾರು ಬೆಳೆಗಳು ಮಳೆಯಾಶ್ರಯದಲ್ಲೇ ಸಮೃದ್ಧವಾಗಿ ಬೆಳೆಯಲಿವೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರದಂತೆ ಮುಂಜಾಗ್ರತೆ ವಹಿಸಲಾಗಿದೆ. ಆಕಸ್ಮಾತ್ ಮಳೆ ಹೆಚ್ಚಾದರೆ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಪಾತ್ರದ ಹಳ್ಳಿಗಳ ಮೇಲೆ ಕಟ್ಟೆಚ್ಚರ ಇಡಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.
‘ಈ ಬಾರಿ ಬೆಳೆಹಾನಿ ಹೆಚ್ಚು ಆಗಿಲ್ಲ. ಬೆಣ್ಣೆಹಳ್ಳ ಒತ್ತುವರಿ ಆಗಿರುವುದು ನಿಜ. ಮನುಷ್ಯನ ಆಸೆಗೆ ಕೊನೆಯಿಲ್ಲ. ಈಗಿನ ಪ್ರಾಕೃತಿಕ ವಿಕೋಪಗಳಿಗೆ ಮನುಷ್ಯನ ಆಸೆಯೇ ಕಾರಣ. ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನದಿ ಪಾತ್ರವನ್ನು ಒತ್ತುವರಿ ಮಾಡುವುದು ಬಿಟ್ಟರೆ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಬದುಕಬಹುದು’ ಎಂದು ಹೇಳಿದರು.
‘ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಂಕಷ್ಟಗಳ ನಡುವೆಯೂ ಅಭಿವೃದ್ಧಿ ಕೆಲಸ ಮಾಡುತ್ತಿದೆ. ನೀರಾವರಿ, ರಸ್ತೆ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ನೂತನ ಮರಳು ನೀತಿ ಜಾರಿಗೆ ಬಂದಿದ್ದು, ಮರಳು ದಿಬ್ಬಗಳನ್ನು ಈಗಾಗಲೇ ಗುರುತಿಸಲಾಗಿದೆ. ಮಳೆಯ ಪ್ರಮಾಣ ಕಡಿಮೆ ಆದ ನಂತರ ಮರಳುಗಾರಿಕೆಗೆ ಅವಕಾಶ ನೀಡಲಾಗುವುದು. ಒಂದು ಟನ್ ಮರಳಿಗೆ ₹700ರಿಂದ ₹750 ದರ ನಿಗದಿ ಮಾಡಲಾಗುವುದು. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಮರಣಶಾಸನವಲ್ಲ. ಅದು ರೈತರಿಗೆ ಕೊಟ್ಟಿರುವ ಒಂದು ವಿಶೇಷ ಅಧಿಕಾರ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.