ADVERTISEMENT

ಲಕ್ಷ್ಮೇಶ್ವರ: ಇಂದಿರಾ ಕ್ಯಾಂಟಿನ್‌ ಎದುರು ಅವ್ಯವಸ್ಥೆ

ಶಿಗ್ಲಿ ನಾಕಾದಿಂದ ಇಟ್ಟಿಗೇರಿ ಕೆರೆವರೆಗೆ ಚರಂಡಿ ರಹಿತ ಮಾರ್ಗ

ನಾಗರಾಜ ಹಣಗಿ
Published 19 ಅಕ್ಟೋಬರ್ 2024, 5:57 IST
Last Updated 19 ಅಕ್ಟೋಬರ್ 2024, 5:57 IST
<div class="paragraphs"><p>ಲಕ್ಷ್ಮೇಶ್ವರದ ಶಿಗ್ಲಿ ನಾಕಾದ ಸಮೀಪ ಇಂದಿರಾ ಕ್ಯಾಂಟೀನ್ ಎದುರಿನ ಅವ್ಯವಸ್ಥೆಯ ನೋಟ</p></div>

ಲಕ್ಷ್ಮೇಶ್ವರದ ಶಿಗ್ಲಿ ನಾಕಾದ ಸಮೀಪ ಇಂದಿರಾ ಕ್ಯಾಂಟೀನ್ ಎದುರಿನ ಅವ್ಯವಸ್ಥೆಯ ನೋಟ

   

ಲಕ್ಷ್ಮೇಶ್ವರ: ಮಳೆ ಸುರಿದಾಗ ಪಟ್ಟಣದ ಇಂದಿರಾ ಕ್ಯಾಂಟೀನ್ ಎದುರಿನ ಮಾರ್ಗ ಅವ್ಯವಸ್ಥೆ ಆಗರವಾಗುತ್ತದೆ. ಕ್ಯಾಂಟಿನ್‌ ಎದುರಿನ ಮಾರ್ಗದಲ್ಲಿ ಮಳೆನೀರು ಹರಿದು ಹೋಗುವುದಕ್ಕೆ ಚರಂಡಿ ಇಲ್ಲ. ಹೀಗಾಗಿ ಗಲೀಜು ವಾತಾವರಣ ಸೃಷ್ಟಿಯಾಗುತ್ತಿದೆ.

ಪಟ್ಟಣದ ಶಿಗ್ಲಿ ನಾಕಾದಿಂದ ಇಟ್ಟಿಗೇರಿ ಕೆರೆವರೆಗೆ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಆಗಿದೆ. ಇದೇ ರಸ್ತೆಗೆ ಹೊಂದಿಕೊಂಡಂತೆ ಪುರಸಭೆ ವತಿಯಿಂದ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆಗಳನ್ನು ಕಟ್ಟಲಾಗಿದೆ. ಇಂದಿರಾ ಕ್ಯಾಂಟಿನ್‌ ಕೂಡಾ ಈ ಮಾರ್ಗದಲ್ಲಿದೆ.

ADVERTISEMENT

ವಾಣಿಜ್ಯ ಸಂಕೀರ್ಣದ ಎದುರು ರಾಡಿ ನೀರು ನಿಲ್ಲುವುದರಿಂದ ಮಳಿಗೆಗಳನ್ನು ಬಾಡಿಗೆ ಪಡೆದವರಿಗೆ ತೊಂದರೆ ಉಂಟಾಗುತ್ತಿದೆ. ಗ್ರಾಹಕರು ಕೊಳಚೆ ತುಳಿದುಕೊಂಡು ಮಳಿಗೆಯತ್ತ ಬರುವ ಅನಿವಾರ್ಯತೆ ಇದೆ. ಪಕ್ಕದಲ್ಲಿಯೇ ಇಂದಿರಾ ಕ್ಯಾಂಟೀನ್‌ ಇದ್ದು, ಕೊಳಚೆ ದಾಟಿಕೊಂಡು ಕ್ಯಾಂಟಿನ್‌ ತಲುಪುವುದು ಜನರಿಗೆ ಸಾಹಸವಾಗಿ ಮಾರ್ಪಟ್ಟಿದೆ.

ಈ ಪ್ರದೇಶದಲ್ಲಿ ಸದಾಕಾಲ ನೀರು ಸಂಗ್ರಹ ಆಗುತ್ತಿರುವ ಕಾರಣ ಸೊಳ್ಳೆಗಳ ಕಾಟವೂ ಹೆಚ್ಚಾಗುವ ಆತಂಕವಿದೆ. ಮಳಿಗೆ ಮತ್ತು ಕ್ಯಾಂಟೀನ್ ಕಟ್ಟುವ ಮೊದಲು ಚರಂಡಿ ನಿರ್ಮಿಸಬೇಕಾಗಿತ್ತು. ಆದರೆ ಈ ವಿಷಯದಲ್ಲಿ ಪುರಸಭೆ ನಿರ್ಲಕ್ಷ್ಯ ತೋರಿದೆ. ಇದರ ದುಷ್ಪರಿಣಾಮವನ್ನು ಸಾರ್ವಜನಿಕರು ಅನುಭವಿಬೇಕಾಗಿದೆ ಎನ್ನುವುದು ಜನರ ಆರೋಪ.

‘ಇಂದಿರಾ ಕ್ಯಾಂಟೀನ್ ಎದುರು ಮಳೆ ನೀರು ಸಂಗ್ರಹವಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಭಯ ಇದೆ. ಪುರಸಭೆಯವರು ಕೂಡಲೇ ಚರಂಡಿ ನಿರ್ಮಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಕಲಘಟಗಿ ಆಗ್ರಹಿಸಿದರು.

‘ಮುಂಬರುವ ದಿನಗಳಲ್ಲಿ ಪುರಸಭೆ ವತಿಯಿಂದ ಶಿಗ್ಲಿ ಕ್ರಾಸ್‍ನಿಂದ ಇಟ್ಟಿಗೇರಿ ಕೆರೆವರೆಗೆ ಚರಂಡಿ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು’ ಎಂದ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.