ADVERTISEMENT

ಕೆಲಸ ಕೊಡಿಸುವುದಾಗಿ ₹ 3.30 ಕೋಟಿ ವಂಚನೆ: 6 ಮಂದಿ ವಿರುದ್ಧ ದೂರು

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ₹3.30 ಕೋಟಿ ಸಂಗ್ರಹಿಸಿ ವಂಚನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:42 IST
Last Updated 24 ಜುಲೈ 2024, 16:42 IST

ಗದಗ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 39 ಜನರಿಂದ ₹3.30 ಕೋಟಿ ಸಂಗ್ರಹಿಸಿ, ವಂಚಿಸಿದ ಆರೋಪದ ಮೇಲೆ ಆರು ಜನರ ವಿರುದ್ಧ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆನಂದೇಶ್ವರ ಹಿರೇಮಠ (36), ನಿಧಿ ಆನಂದೇಶ್ವರ ಹಿರೇಮಠ (32), ಜೇಸನ್‌ ಜಾನ್‌ ಡಿಸೋಜಾ (36), ಲೆವಿನಾ ಜಾನ್‌ ಡಿಸೋಜಾ (36), ಮಹೇಂದ್ರ (35) ಹಾಗೂ ರಾಕೇಶ್‌ (36) ವಿರುದ್ಧ ನಾಗಭೂಷಣ ಸ್ವಾಮಿ ಹಿರೇಮಠ ಎಂಬುವರು ನೀಡಿದ್ದಾರೆ. ಪ್ರಕರಣದ ಎ1 ಆರೋಪಿ ಆನಂದೇಶ್ವರ ಹಿರೇಮಠ ಎಂಬಾತ ದೂರುದಾರ ನಾಗಭೂಷಣ ಸ್ವಾಮಿ ಹಿರೇಮಠ ಅವರ ಚಿಕ್ಕಪ್ಪನ ಮಗ. ಈ ಆರು ಮಂದಿ ಆರೋಪಿಗಳು ಗದಗ, ಧಾರವಾಡ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗೆ ಸೇರಿದ 39 ಜನರನ್ನು ವಂಚಿಸಿದ್ದಾರೆ. ಅವರಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನವರೇ ಹೆಚ್ಚಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೋವಿಡ್‌ ಕಾರಣ ಸರ್ಕಾರ ಯಾವುದೇ ಸರ್ಕಾರಿ ಹುದ್ದೆ ತುಂಬುತ್ತಿಲ್ಲ. ಆದರೆ, ಕೆಲವರ ಪರಿಚಯವಿದ್ದು ಅವರ ಮೂಲಕ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 2020ರ ಡಿಸೆಂಬರ್ 20ರಿಂದ 2021ರ ಡಿ.15ರ ಅವಧಿಯ ನಡುವೆ 39 ಮಂದಿಯಿಂದ ಹಂತ ಹಂತವಾಗಿ ಒಟ್ಟು ₹3.30 ಕೋಟಿ ನಗದು ತೆಗೆದುಕೊಂಡಿದ್ದಾರೆ. ಆದರೆ, ಯಾರಿಗೂ ಸರ್ಕಾರಿ ಕೆಲಸ ಕೊಡಿಸಿಲ್ಲ. ಹಣವನ್ನೂ ಮರಳಿಸಿಲ್ಲ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಈ ನಡುವೆ ಹಣ ಕೊಟ್ಟವರಲ್ಲಿ ಕೆಲವರು ಹಣ ವಾಪಸ್‌ ನೀಡುವಂತೆ ಒತ್ತಡ ಹೇರಿದಾಗ ನಿಧಿ ಆನಂದೇಶ್ವರ ಹಿರೇಮಠ ಹೊರತುಪಡಿಸಿ ಉಳಿದ ಆರೋಪಿಗಳು ತಮ್ಮ ಬ್ಯಾಂಕ್‌ ಖಾತೆಗಳ ಚೆಕ್‌ಗಳನ್ನು ಕೊಟ್ಟು ಆರ್‌ಟಿಜಿಎಸ್‌ ಮೂಲಕ ₹70 ಲಕ್ಷ ಹಣ ಹಿಂತಿರುಗಿಸಿದ್ದಾರೆ. ಉಳಿದ ₹2.59 ಕೋಟಿ ಹಣ ನೀಡದೇ ವಂಚಿಸಿದ್ದಾರೆ. ಆರೋಪಿಗಳ ಪತ್ತೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.