ಗದಗ: ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಕೆಲವು ಕುಟುಂಬಗಳ ಒತ್ತಡ ಪರಿಸ್ಥಿತಿ ಹಾಗೂ ಆರ್ಥಿಕ ಸಮಸ್ಯೆಗಳಿಂದ ಮಕ್ಕಳು ಈಗಲೂ ಬಾಲಕಾರ್ಮಿಕ ಪದ್ಧತಿಗೆ ಬಲಿಯಾಗುತ್ತಿದ್ದಾರೆ. ಕಟ್ಟುನಿಟ್ಟಾದ ನಿಯಮಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ಮಕ್ಕಳನ್ನು ವಿವಿಧ ಉದ್ಯೋಗದಲ್ಲಿ ತೊಡಗಿಸುವುದು ನಿಂತಿಲ್ಲ. ಗದಗ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ನಿಯಂತ್ರಣಕ್ಕೆ ಇನ್ನಷ್ಟು ಬಿಗಿಕ್ರಮಗಳನ್ನು ಅನುಸರಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಗ್ಯಾರೇಜ್‌ಗಳು, ಟೀ ಅಂಗಡಿಗಳು, ಬೀದಿಬದಿ ತಿನಿಸುಗಳನ್ನು ಮಾರಾಟ ಮಾಡುವ ಗೋಬಿ, ಪಾನಿಪೂರಿ, ಸಣ್ಣಪುಟ್ಟ ಹೋಟೆಲ್‌ಗಳು, ಇಡ್ಲಿ ಸೆಂಟರ್, ಎಗ್ ರೈಸ್ ಕಾರ್ನರ್‌ಗಳು ಇಲ್ಲೆಲ್ಲಾ 14 ವರ್ಷದೊಳಗಿನ ಮಕ್ಕಳು ದುಡಿಯುತ್ತಿದ್ದಾರೆ. ಇದರಲ್ಲಿ ತೊಡಗಿರುವ ಮಕ್ಕಳು ಶಾಲಾ ಶಿಕ್ಷಣವು ಸೇರಿದಂತೆ ವಯೋಸಹಜ ಬಾಲ್ಯದ ಅನುಭವಗಳಿಂದ ವಂಚಿತರಾಗುತ್ತಿದ್ದಾರೆ. ಕೆಲಸದ ಸಂದರ್ಭದಲ್ಲಿ ವಿವಿಧ ರೀತಿಯ ನಿಂದನೆಗೆ ಒಳಗಾಗಿ ದೈಹಿಕ ಮತ್ತು ಮಾನಸಿಕವಾಗಿ ಗಾಯಗೊಳ್ಳುತ್ತಿದ್ದಾರೆ.
ಬಾಲಕಾರ್ಮಿಕರನ್ನು ನೇಮಿಸಿಕೊಳ್ಳದಂತೆ ಅಂಗಡಿ, ಹೋಟೆಲ್, ಬಾರ್ ಆ್ಯಂಡ್ ರೆಸ್ಟೊರೆಂಟ್, ಗ್ಯಾರೇಜ್‌ಗಳಿಗೆ ಕಾರ್ಮಿಕ ಇಲಾಖೆ ಸಿಬ್ಬಂದಿ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ಗೋಡೆ ಬರಹಗಳು, ಬೀದಿನಾಟಕ, ಆಟೋ ಪ್ರಚಾರ, ಕಾನೂನು ಅರಿವು ಕಾರ್ಯಕ್ರಮ, ಕರಪತ್ರಗಳ ಹಂಚಿಕೆ ಮೂಲಕ ತಿಳಿವಳಿಕೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರವು ವಿವಿಧ ಇಲಾಖೆ ಸಹಯೋಗದಲ್ಲಿ ನಿರಂತರ ಕಾರ್ಯಾಚರಣೆ, ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ಬಾಲಕಾರ್ಮಿಕ ಪದ್ಧತಿ ಇಂದಿಗೂ ಜೀವಂತವಾಗಿದೆ.
‘ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರುವುದಕ್ಕೆ ಬಹಳಷ್ಟು ಕಾರಣಗಳಿವೆ. ಒಂದೊಂದು ಮಗುವಿಗೂ ಒಂದೊಂದು ಹಿನ್ನಲೆ ಇರುತ್ತದೆ. ಅಂತೆಯೇ ಕಾರಣಗಳೂ ಬೇರೆ ಬೇರೆ ಇರುತ್ತವೆ. ಕೋವಿಡ್ ಸಂದರ್ಭದಲ್ಲಿ ಬಾಲಕಾರ್ಮಿಕರ ಪ್ರಮಾಣ ಹೆಚ್ಚಾಗಿತ್ತು. ಅದರ ನಿಯಂತ್ರಣಕ್ಕೆ ಸರ್ಕಾರ ಬದಲಿ ವ್ಯವಸ್ಥೆ ಮಾಡಿತು. ತಂದೆ ತಾಯಿ ಇಲ್ಲದಿದ್ದಾಗ ಅಥವಾ ಸಂಬಂಧಿಕರ ಜತೆಗೆ ಇದ್ದಾಗ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಮತ್ತೆ ಮತ್ತೇ ಮರುಕಳಿಸುತ್ತಲೇ ಇರುತ್ತವೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಜಿ.ಸಿ.ರೇಶ್ಮಿ.
‘ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಕಾರ್ಮಿಕ ಇಲಾಖೆ ವತಿಯಿಂದ ನಿರಂತರ ಅಭಿಯಾನ ನಡೆಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ಬಾಲಕಾರ್ಮಿಕರನ್ನು ರಕ್ಷಿಸಲಾಗುತ್ತಿದೆ. ಬಾಲಕಾರ್ಮಿಕರು ಹೆಚ್ಚಾಗಿ ಸಣ್ಣಪುಟ್ಟ ಅಂಗಡಿಗಳು, ಗೂಡಂಗಡಿಗಳು, ಬೀದಿಬದಿ ತಿನಿಸು ಗಾಡಿಗಳು ಇಲ್ಲಿ ಕಾಣಸಿಗುತ್ತಾರೆ. ಅಂತಹ ಕಡೆಗಳಲ್ಲಿ ನಾವು ದಾಳಿ ನಡೆಸಿ, ಮಕ್ಕಳನ್ನು ರಕ್ಷಿಸುತ್ತೇವೆ. ಬಳಿಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರು ಪಡಿಸುತ್ತೇವೆ. ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ಪ್ರಕರಣಗಳನ್ನೂ ದಾಖಲಿಸುತ್ತಿದ್ದೇವೆ’ ಎನ್ನುತ್ತಾರೆ ಕಾರ್ಮಿಕ ಇಲಾಖೆ ಅಧಿಕಾರಿ ಭೀಮರಾವ್ ಜಾಧವ.
ರಕ್ಷಣೆಗೊಂಡ ಮಕ್ಕಳ ಶಿಕ್ಷಣಕ್ಕೆ ಬೇಕಿದೆ ಒತ್ತು
ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಮಕ್ಕಳು ಜಮೀನುಗಳಲ್ಲಿ ಕೂಲಿ ಕೆಲಸಕ್ಕೆ ತೆರಳುವುದು ಅಲ್ಲಲ್ಲಿ ಕಂಡು ಬರುತ್ತದೆ. ಬಾಲಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಿ ಅವರಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ಸಿಗುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕ್ರಮವಹಿಸುತ್ತಿದೆ. ಜಿಲ್ಲೆಯಲ್ಲಿ ರಕ್ಷಣೆ ಮಾಡಿದ ಅನೇಕ ಮಕ್ಕಳು ಇಂದು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
‘ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿ ನೋಡಿದಲ್ಲಿ ಗದಗ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ದೊಡ್ಡ ಪ್ರಮಾಣದಲ್ಲಿ ಇಲ್ಲ. ಕಾರ್ಮಿಕ ಇಲಾಖೆಯವರು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದೆ ಮುಂಡರಗಿ ಭಾಗದಲ್ಲಿ ಇಟ್ಟಂಗಿ ಭಟ್ಟಿಗಳಲ್ಲಿ ಹೆಚ್ಚಿನ ಮಕ್ಕಳು ದುಡಿಯುತ್ತಿದ್ದರು. ಅದು ಕೂಡ ಈಗ ಕಡಿಮೆಯಾಗಿದೆ. ಗ್ಯಾರೇಜ್‌ಗಳಲ್ಲಿ ದುಡಿಯುವ ಮಕ್ಕಳು ಅಲ್ಲಲ್ಲಿ ಕಾಣಸಿಗುತ್ತಾರೆ. ಸ್ವಂತದ ಅಂಗಡಿ ಇದ್ದಾಗ ಪೋಷಕರು ಮಕ್ಕಳನ್ನು ಅಂಗಡಿಯಲ್ಲಿ ಬಿಡುತ್ತಾರೆ. ಆದು ಸಮಸ್ಯೆ ಅಲ್ಲ. ಶಾಲೆ ಬಿಡಿಸಿ ಅಂಗಡಿ ನೋಡಿಕೊಳ್ಳಲು ಹಾಕಿದರೆ ಆಗ ಸಮಸ್ಯೆಯಾಗುತ್ತದೆ. ಅಂತಹ ಕಡೆಗಳಲ್ಲಿ ಕಾರ್ಮಿಕ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಯವರು ಹೆಚ್ಚಿನ ನಿಗಾವಹಿಸಬೇಕಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನಿಕಟಪೂರ್ವ ಅಧ್ಯಕ್ಷ ಜಿ.ಸಿ.ರೇಶ್ಮಿ.
‘ಕಾರ್ಮಿಕ ಇಲಾಖೆಯವರು ರಕ್ಷಣೆ ಮಾಡಿದ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮೊದಲಿಗೆ ಹಾಜರು ಪಡಿಸುತ್ತಾರೆ. ಸಂತ್ರಸ್ತ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರೆ ಅವರು ಶಿಕ್ಷಣ ಮುಂದುವರಿಸಲು ಬೇಕಿರುವ ಅಗತ್ಯ ಕ್ರಮಗಳನ್ನು ಸಮಿತಿ ವಹಿಸಲಿದೆ. ಶಾಲೆಗೆ ಹೋಗದೇ ಇರುವ ಮಕ್ಕಳು ಸಿಗುವುದು ಅಪರೂಪ. ಅಲೆಮಾರಿಗಳ ಮಕ್ಕಳನ್ನು ಹೊರತುಪಡಿಸಿದರೆ ಸ್ಥಳೀಯರ ಮಕ್ಕಳು ಶಾಲೆಯ ಮೆಟ್ಟಿಲು ಹತ್ತದೇ ಇರುವುದು ತುಂಬ ಅಪರೂಪ. ವಯಸ್ಸಿನ ಪ್ರಕಾರ ಶಾಲೆಗೆ ಸೇರಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಅಧಿಕಾರಗಳು ಮಾಡುತ್ತಾರೆ’ ಎನ್ನುತ್ತಾರೆ ಅವರು.
‘ಬಾಲಕಾರ್ಮಿಕ ಮಕ್ಕಳಿಗೆ ಪಾಲನೆ ಪೋಷಣೆಯ ಅಗತ್ಯವಿದೆ ಎಂದಾದಲ್ಲಿ ಸರ್ಕಾರಿ ಬಾಲ ಮಂದಿರದಲ್ಲಿ ಇರಿಸಿಕೊಳ್ಳುತ್ತಾರೆ. ಅವರು ಶಿಕ್ಷಣ ಪೂರೈಸಲು ಅಗತ್ಯವಿರುವ ಎಲ್ಲ ಸೌಲಭ್ಯವನ್ನು ಸರ್ಕಾರ ಒದಗಿಸಲಿದೆ. ಇಲಾಖೆ ಕಣ್ತಪ್ಪಿಸಿ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿಸಿದ್ದರೆ ಆ ಮಾಹಿತಿಯನ್ನು ಸಾರ್ವಜನಿಕರು ನೀಡಬೇಕು. ಆಗ ಕಾರ್ಮಿಕ ಇಲಾಖೆ ಕ್ರಮ ವಹಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.
ಕದ್ದು ಮುಚ್ಚಿ ಕೆಲಸಕ್ಕೆ ಬಳಕೆ
ಮುಂಡರಗಿ: ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕಾಯಿದೆ ಕಾನೂನುಗಳನ್ನು ಜಾರಿಗೆ ತಂದಿದ್ದರೂ ಕೆಲವರು ಕದ್ದು ಮುಚ್ಚಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳ ಕೃಷಿ ಕೂಲಿ ಕಾರ್ಮಿಕರ ವೇತನ ಹೆಚ್ಚಳವಾಗಿದ್ದು ಹಣದಾಸೆಗಾಗಿ ಕೆಲವು ಬಡ ಪಾಲಕರು ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ತಮ್ಮೊಂದಿಗೆ ಮಕ್ಕಳು ಕೆಲಸ ಮಾಡಿದರೆ ಹೆಚ್ಚು ಹಣ ದೊರೆಯುತ್ತದೆ ಎನ್ನುವ ಕಾರಣದಿಂದ ಪಾಲಕರು ಪರೋಕ್ಷವಾಗಿ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳನ್ನು ಹೋಟೆಲ್ ಇಟ್ಟಂಗಿ ಭಟ್ಟಿ ಮಂಡಕ್ಕಿ ಭಟ್ಟಿ ಐಸ್ ಫ್ಯಾಕ್ಟರಿ ಮೊದಲಾದವುಗಳಲ್ಲಿ ಬಳಸಿಕೊಳ್ಳಬಾರದು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ತಾಲ್ಲೂಕಿನ ಡಂಬಳ ಹಾಗೂ ಮತ್ತಿತರ ಗ್ರಾಮಗಳ ಇಟ್ಟಂಗಿ ಭಟ್ಟಿಗಳ ಮೇಲೆ ದಾಳಿ ಮಾಡಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಿದ್ದಾರೆ. ಕೆಲವು ಭಾಗಗಳಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ತಂದೆ ತಾಯಿಗಳೇ ತಮ್ಮ ಮಕ್ಕಳನ್ನು ತಮ್ಮ ಸ್ವಂತ ಹೊಲ ಮನೆಗಳ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಇಂತಹ ಪ್ರಕರಣಗಳಲ್ಲಿ ಯಾವ ಇಲಾಖೆಯ ಅಧಿಕಾರಿಯೂ ಕಟ್ಟುನಿಟ್ಟಾಗಿ ಯಾವ ಕ್ರಮವನ್ನೂ ಕೈಗೊಳ್ಳಲು ಬರುವುದಿಲ್ಲ. ಸದಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವ ಕುರಿಗಾರರು ಬುಗುಟಿಗಾರರು ಹೆಳವರು ಕಬ್ಬು ಕಟಾವು ಮಾಡುವ ಕಾರ್ಮಿಕರು ಮೊದಲಾದ ಅಲೆಮಾರಿ ಕುಟುಂಬಗಳ ಮಕ್ಕಳು ಸದಾ ತಮ್ಮ ಪಾಲಕರೊಂದಿಗೆ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರು ಅನ್ಯದಾರಿ ಕಾಣದೆ ಪಾಲಕರ ಕೆಲಸಕ್ಕೆ ನೆರವಾಗುತ್ತಾರೆ. ಇಂತಹ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತವೆ. ಆದರೆ ಮಕ್ಕಳು ಪಾಲಕರ ಬಳಿಯೇ ಇರುವುದರಿಂದ ಮತ್ತು ಸ್ವಇಚ್ಛೆಯಿಂದ ಪಾಲಕರ ಕೆಲಸಕ್ಕೆ ನೆರವು ನೀಡುವುದರಿಂದ ಇಂತಹ ಮಕ್ಕಳು ಹಾಗೂ ಪಾಲಕರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳಲಾಗುವುದಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಅಲೆಮಾರಿ ಮಕ್ಕಳಿಗೆ ಸ್ಥಳದಲ್ಲಿಯೇ ಟೆಂಟ್ ಶಾಲೆಗಳನ್ನು ತೆರೆದು ಅವರು ಅಲ್ಲಿರುವವರೆಗೂ ಅವರಿಗೆ ಶಿಕ್ಷಣ ನೀಡಬೇಕೆನ್ನುವ ಯೋಜನೆ ಶಿಕ್ಷಣ ಇಲಾಖೆಯಲ್ಲಿದೆ. ಈ ಕುರಿತು ಅಲೆಮಾರಿಗಳು ಅಥವಾ ಯಾವುದಾದರೂ ಸಂಘ ಸಂಸ್ಥೆಯವರು ಶಿಕ್ಷಣ ಇಲಾಖೆಯ ಗಮನ ಸೆಳೆಯಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.