ADVERTISEMENT

ನರೇಗಲ್ | 5 ವರ್ಷದ ಹಿಂದೆಯೇ ಹಾರಿದ ಶಾಲೆಯ ಚಾವಣಿ

ಮಕ್ಕಳು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿರುವ ಪಾಲಕರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 5:46 IST
Last Updated 18 ಜೂನ್ 2024, 5:46 IST
ನರೇಗಲ್‌ ಹೋಬಳಿಯ ನಿಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಿಡಗುಂದಿಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯ ಚಾವಣಿ ಹಾರಿ ಹೋಗಿದೆ
ನರೇಗಲ್‌ ಹೋಬಳಿಯ ನಿಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಿಡಗುಂದಿಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯ ಚಾವಣಿ ಹಾರಿ ಹೋಗಿದೆ   

ನರೇಗಲ್: ಹೋಬಳಿಯ ನಿಡಗುಂದಿ ಗ್ರಾಮ ಪಂಚಾಯಿತಿಗೆ ಒಳಪಡುವ ನಿಡಗುಂದಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಶಿಕ್ಷಕರು ಆತಂಕದಲ್ಲೇ ಪಾಠ ಕಲಿಯುವ, ಕಲಿಸುವ ಸ್ಥಿತಿಯಲ್ಲಿದ್ದಾರೆ.

ಶಾಲೆಯ ಕೊಠಡಿಯೊಂದರ ಚಾವಣಿ ಭಾರಿ ಗಾಳಿ, ಮಳೆಗೆ ಹಾರಿ ಹೋಗಿ 5 ವರ್ಷಗಳಾದರೂ ಈವರೆಗೂ ದುರಸ್ತಿ ಕಂಡಿಲ್ಲ. ಶಾಲೆಯ ಗೋಡೆಗಳೂ ಹಾನಿಯಾಗಿವೆ. ಶಾಲೆಯ ಪ್ರವೇಶ ದ್ವಾರದ ಎದುರಲ್ಲಿ ಪ್ರತ್ಯೇಕವಾಗಿರುವ ಕೊಠಡಿಯ ಕಂಬಗಳ ಸಿಮೆಂಟ್‌ ಬಿಳುತ್ತಿದ್ದು, ಕುಸಿಯುವ ಆತಂಕ ಸೃಷ್ಟಿಸಿದೆ. ಯಾವಾಗಲಾದರೂ ಬೀಳುವ ಸ್ಥಿತಿಯಲ್ಲಿವೆ.

‘ತೊಂದರೆಯಾಗುವ ಮೊದಲೇ ಕೊಠಡಿಯನ್ನು ಸಂಪೂರ್ಣವಾಗಿ ಬಿಳಿಸುವಂತೆ ಗ್ರಾಮ ಪಂಚಾಯಿತಿಯವರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸ್ಥಳೀಯರು ದೂರಿದರು.

ADVERTISEMENT

ಈ ಮೊದಲು ಶಾಲೆಯ ತುಂಬ ಮಕ್ಕಳು ಇರುತ್ತಿದ್ದರು. ಸ್ಥಳೀಯರು ಇದೇ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದರು. ಆದರೆ ಕೊಠಡಿ ದುಸ್ಥಿತಿಯಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ 1ರಿಂದ 8ನೇ ತರಗತಿಯವರೆಗೆ ಒಟ್ಟು 82 ಮಕ್ಕಳಿದ್ದು, 5 ಕೊಠಡಿಗಳಲ್ಲಿ ಕಲಿಯುತ್ತಿದ್ದಾರೆ. ಇವರಿಗೆ ಮೂವರು ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. 2 ಕೊಠಡಿಯಲ್ಲಿ ನಲಿಕಲಿ, ಇನ್ನೊಂದು ಕೊಠಡಿಯಲ್ಲಿ 4 ಮತ್ತು 5ನೇ ತರಗತಿಯವರಿಗೆ ಒಟ್ಟಿಗೆ ಪಾಠ ಮಾಡಲಾಗುತ್ತಿದೆ.

‘₹10 ಲಕ್ಷ ಅನುದಾನ ಬಂದಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು 8 ತಿಂಗಳ ಹಿಂದೆಯೇ ಹೇಳಿದ್ದರು. ತಾಲ್ಲೂಕು ಪಂಚಾಯಿತಿಯಿಂದ ಸಮೀಕ್ಷೆಯನ್ನು ನಡೆಸಲಾಗಿತ್ತು. ಟೆಂಡರ್‌ ಹಾಕಿ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿ ಹೋದವರು ಮರಳಿ ಬಂದಿಲ್ಲ’ ಎಂದು ಮುಖ್ಯ ಶಿಕ್ಷಕ ಆರ್.‌ ಬಿ. ಪಾಟೀಲ ತಿಳಿಸಿದರು.

‘ಈ ಶಾಲೆಯಲ್ಲಿ ಗ್ರಾಮದ ರೈತರ, ಕೃಷಿ ಕಾರ್ಮಿಕರ, ಕಟ್ಟಡ ಮತ್ತು ಕೂಲಿಕಾರ್ಮಿಕರ, ಹಿಂದುಳಿದವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಆದರೆ ಭಯದ ವಾತಾವರಣ ಸೃಷ್ಟಿಯಾಗಿದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಸಮೀಪದ ಪಟ್ಟಣಗಳ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥ ಶರಣಯ್ಯ.

ನರೇಗಲ್‌ ಹೋಬಳಿಯ ನಿಡಗುಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ನಿಡಗುಂದಿಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯೊಂದರ ದುಸ್ಥಿತಿಯಲ್ಲಿರುವ ಚಾವಣಿ
ಕೊಠಡಿಯೊಂದರ ಕಂಬ ದುಸ್ಥಿತಿಯಲ್ಲಿರುವುದು

ನಿಡಗುಂದಿಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ₹4 ಲಕ್ಷ ಅನುದಾನ ಮಂಜೂರಾಗಿದೆ. ಅಭಿವೃದ್ದಿ ಕಾರ್ಯಗಳು ಆರಂಭವಾಗುತ್ತವೆ

-ಆರ್.‌ಎನ್.‌ಹುರಳಿ ಬಿಇಒ ರೋಣ

ಶಾಲೆ ಉಳಿಸುವ ಕಾರ್ಯಕ್ರಮ... ಇಲ್ಲಿನ ಸರ್ಕಾರಿ ಶಾಲೆಯನ್ನು ಉಳಿಸುವ ಹಾಗೂ ಬೆಳೆಸುವ ಉದ್ದೇಶದಿಂದ ಹಳೇ ವಿದ್ಯಾರ್ಥಿಗಳು ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಸರ್ಕಾರಿ ಶಾಲೆ ಉಳಿಸುವ ಪ್ರೇರಣಾ ಕಾರ್ಯಕ್ರಮವನ್ನು 2023ರಲ್ಲಿ ಆರಂಭಿಸಿದ್ದಾರೆ. ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಶಾಲೆಯ ಆವರಣದಲ್ಲಿ ಕೈಗೊಂಡು ಕೈಲಾದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಹಾಗೂ ಇಲ್ಲಿನ ಸ್ಥಿತಿಗತಿಗಳನ್ನು ಅಧಿಕಾರಿಗಳ ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.