ADVERTISEMENT

ಬಿಸಿಯೂಟಕ್ಕೆ ಕನ್ನ: ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:20 IST
Last Updated 24 ಆಗಸ್ಟ್ 2024, 15:20 IST
ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯ ಬಿಸಿಯೂಟದ ಸಾಮಗ್ರಿಗಳನ್ನು ತಳ್ಳುವ ಗಾಡಿಯಲ್ಲಿ ಸಾಗಿಸುತ್ತಿರುವಾಗ ಗ್ರಾಮಸ್ಥರು ವಶಪಡಿಸಿಕೊಂಡಿದ್ದಾರೆ
ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯ ಬಿಸಿಯೂಟದ ಸಾಮಗ್ರಿಗಳನ್ನು ತಳ್ಳುವ ಗಾಡಿಯಲ್ಲಿ ಸಾಗಿಸುತ್ತಿರುವಾಗ ಗ್ರಾಮಸ್ಥರು ವಶಪಡಿಸಿಕೊಂಡಿದ್ದಾರೆ   

ಲಕ್ಷ್ಮೇಶ್ವರ: ಮಕ್ಕಳ ಹೊಟ್ಟೆ ಸೇರಬೇಕಾಗಿದ್ದ ಬಿಸಿಯೂಟದ ಸಾಮಗ್ರಿಗಳನ್ನು ಮುಖ್ಯ ಅಡುಗೆ ಸಹಾಯಕಿ ಶಾಲಾ ಮುಖ್ಯಶಿಕ್ಷಕರ ಸಹಾಯದಿಂದ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ಶನಿವಾರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಸಂಭವಿಸಿದೆ.

ಗ್ರಾಮದ ಹಿರಿಯ ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಸಹಾಯದಿಂದ ಪ್ರತಿದಿನ ಮಕ್ಕಳ ಬಿಸಿಯೂಟಕ್ಕೆ ಬಳಸುವ ಅಕ್ಕಿ, ಹಾಲಿನ ಪೌಡರ್, ಹಾಗೂ ತರಕಾರಿಗಳನ್ನು ಕಳ್ಳತನ ಮಾಡಲಾಗುತ್ತಿತ್ತು. ಮುಖ್ಯ ಅಡುಗೆ ಸಹಾಯಕಿ ಹಾಗೂ ಮುಖ್ಯಶಿಕ್ಷಕ ಕಳ್ಳತನ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಜಯ ಕರ್ನಾಟಕ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಖಚಿತ ಮಾಹಿತಿ ಮೇರೆಗೆ ಅಕ್ಕಿ, ಹಾಲಿನ ಪೌಡರ್, ಪ್ಯಾಕೆಟ್ ಹಾಗೂ ತರಕಾರಿಯನ್ನು ತಳ್ಳುವ ಗಾಡಿಯಲ್ಲಿ ಸಾಗಿಸುತ್ತಿರುವಾಗ ಹಿಡಿದಿದ್ದಾರೆ.

ADVERTISEMENT

’ನಮ್ಮೂರಿನ ಶಾಲೆಯಲ್ಲಿ ಸರಿಯಾಗಿ ಬಿಸಿಯೂಟ ಕೊಡುತ್ತಿಲ್ಲ ಎಂದು ಮಕ್ಕಳು ನನ್ನ ಮುಂದೆ ಹೇಳಿದ್ದರು. ಖಚಿತ ಮಾಹಿತಿಯ ಮೇರೆಗೆ ಸಾಮಗ್ರಿ ಸಾಗಿಸುತಿರುವಾಗ ನಾವು ಕಳ್ಳರನ್ನು ಹಿಡಿದಿದ್ದೇವೆ. ಇದರಲ್ಲಿ ಶಾಲೆಯ ಮುಖ್ಯಶಿಕ್ಷಕ ಹಾಗೂ ಇಬ್ಬರು ಅಡುಗೆ ಸಹಾಯಕಿಯರ ಕೈವಾಡ ಇದೆ. ಇವರನ್ನು ಶಾಲೆಯಿಂದ ಕೂಡಲೇ ಅಮಾನತ್ತು ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಹಂಗನಕಟ್ಟಿ ಎಚ್ಚರಿಸಿದರು.

ಆದರೆ ಈ ಕುರಿತು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿದಾಗ ಸೂರಣಗಿ ಸಿಆರ್‌ಸಿ ಅವರು ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.