ಗದಗ: ಅವಳಿ ನಗರದ ಕ್ರೈಸ್ತ ಧರ್ಮೀಯರು ಸೋಮವಾರ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ನಗರದ ಕ್ಯಾಥೋಲಿಕ್ ಚರ್ಚ್, ಸಂತ ಇಗ್ನೇಷಿಯಸ್ ಲೊಯೊಲಾ ಚರ್ಚ್, ಚರ್ಚ್ ಆಫ್ ಬ್ಲೆಸ್ಸಿಂಗ್, ವುರ್ಥ್ ಮೆಮೋರಿಯಲ್, ಸಿಎಸ್‍ಐ ಬಾಸೆಲ್ ಮಿಷನ್ ಚರ್ಚ್, ಎಸ್‍ಪಿಜಿ ಚರ್ಚ್ ಸೇರಿದಂತೆ ನಗರದಲ್ಲಿರುವ ಎಲ್ಲ ಚರ್ಚ್‌ಗಳಲ್ಲಿ ಹಬ್ಬದ ಸಂಭ್ರಮ ಗರಿಗೆದರಿತ್ತು. ಸೋಮವಾರ ಬೆಳಿಗ್ಗೆಯೇ ಚರ್ಚ್‌ಗಳತ್ತ ಬಂದ ಕ್ರೈಸ್ತರು, ವಿಶೇಷ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಚರ್ಚ್‌ನ ಧರ್ಮಗುರುಗಳು ಸಂದೇಶ ಸಾರಿದರು.
ಚರ್ಚ್‌ಗಳಲ್ಲಿ ಯೇಸುವಿನ ಜನ್ಮಸ್ಥಳ, ಬಾಲ ಯೇಸುವಿನ ಪ್ರತಿಕೃತಿಗಳನ್ನು ನಿರ್ಮಿಸಲಾಗಿತ್ತು. ಯೇಸುವಿನ ನಾಮಸ್ಮರಣೆ, ಕ್ಯಾರಲ್ ಸಂಗೀತ ಮೊಳಗಿತು. ಕುಟುಂಬ ಸಮೇತರಾಗಿ ಬಂದ ಜನರು ಮೊಂಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
ಕ್ರಿಸ್ಮಸ್ ಅಂಗವಾಗಿ ಹೊಸ ದಿರಿಸು ಧರಿಸಿದ್ದ ಮಕ್ಕಳು, ಮಹಿಳೆಯರು, ಹಿರಿಯರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮನೆಗೆ ಬಂದ ಅತಿಥಿಗಳಿಗೆ ಕೇಕ್ ಹಾಗೂ ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ನೀಡಿ ಸತ್ಕರಿಸಲಾಯಿತು. ಬಳಿಕ ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ, ಹಬ್ಬದೂಟ ಬಡಿಸಿ ಸೌಹಾರ್ದ ಮೆರೆದರು.
ಕ್ರೈಸ್ತರು ಸೇರಿದಂತೆ ವಿವಿಧ ಸಮುದಾಯದ ಜನರು ಇಡೀ ದಿನ ಚರ್ಚ್‌ಗೆ ಭೇಟಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸೋಮವಾರ ಬೆಳಿಗ್ಗೆ ಬೆಟಗೇರಿಯ ಬಾಸೆಲ್ ಮಿಷನ್ ಆವರಣದಲ್ಲಿರುವ ವುರ್ಥ್ ಮೆಮೋರಿಯಲ್ ಚರ್ಚ್, ಸೆಂಟ್ ಜಾನ್ಸ್ ಚರ್ಚ್‌ಗಳಿಗೆ ಭೇಟಿ ನೀಡಿ, ಶುಭಾಶಯ ಕೋರಿದರು.
ಕೇಕ್ ಕತ್ತರಿಸಿ ಸಂಭ್ರಮ
ಲಕ್ಷ್ಮೇಶ್ವರ: ಪಟ್ಟಣದ ಮುಕ್ತಿನಗರದ ಬಿಜಿಪಿಎಂ ಚರ್ಚ್‍ನಲ್ಲಿ ಸೋಮವಾರ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಚರ್ಚ್‍ನ ಫಾದರ್ ಜಿ.ಎಂ.ನಾಯಕ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಂತ ಯೇಸು ಅವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮತ್ತು ಬಡ ಮಹಿಳೆಯರಿಗೆ ಬಟ್ಟೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಸವರಾಜ ಓದುನವರ ಮಾತನಾಡಿ, ‘ಸಮಾಜದಲ್ಲಿನ ಮೌಢ್ಯತೆಯನ್ನು ತೊಡೆದು ಹಾಕಲು ಯೇಸು ಅವರು ಮಾಡಿದ ಹೋರಾಟ ಎಲ್ಲರಿಗೂ ತಿಳಿದ ವಿಷಯ. ಶಾಂತಿ ಮತ್ತು ಸಮಾಧಾನಕ್ಕೆ ಯೇಸು ಉತ್ತಮ ಉಧಾಹರಣೆ’ ಎಂದ ಅವರು ‘ಸಮಾಜದಲ್ಲಿ ಎಲ್ಲರೂ ಸಹೋದರತೆಯಿಂದ ಬದುಕಬೇಕು. ಏಸು ಅವರು ಹಾಕಿಕೊಟ್ಟ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಈ ಪ್ರೀತಮ್, ಪ್ರವೀಣ ಹಾಗೂ ಮುಕ್ತಿನಗರದ ನಿವಾಸಿಗಳು ಇದ್ದರು.
ವಿಶೇಷ ಪ್ರಾರ್ಥನೆ
ರೋಣ: ನಗರದ ಜಕ್ಕಲಿ ರಸ್ತೆಯಲ್ಲಿರುವ ಚರ್ಚ್‌ನಲ್ಲಿ ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರಿದ ಏಸುಕ್ರಿಸ್ತರ ಜನ್ಮದಿನದ ಪ್ರಯುಕ್ತ ಸಂಭ್ರಮದಿಂದ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು. ಕ್ರಿಸ್ಮಸ್ ಹಬ್ಬದ ಅಂಗವಾಗಿ ಚರ್ಚ್ ಅನ್ನು ದೀಪಾಲಂಕಾದಿಂದ ಶೃಂಗರಿಸಲಾಗಿದ್ದು ರೋಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಏಸು ಕ್ರಿಸ್ತರ ಜನನ ಬಾಲ್ಯ ಮತ್ತು ನಂತರದ ಜೀವನ ಮತ್ತು ಸಂದೇಶ ಕುರಿತು ಗೀತೆಗಳನ್ನು ಹಾಡುವ ಮೂಲಕ ಜನ್ಮವಾರ್ತೆಯನ್ನು ಸಾರಿದರು. ಫಾದರ್ ಸುರೇಶ ಮಾತನಾಡಿ ದೇವರು ಭೂಮಿಯ ಮೇಲಿನ ಎಲ್ಲರನ್ನು ಸಂತೋಷವಾಗಿಡಲಿ. ವಿಶೇಷವಾಗಿ ದೇಶದ ರೈತರು ಸೈನಿಕರು ಕಾರ್ಮಿಕರು ಶಿಕ್ಷಕರು ರಾಜಕೀಯ ನಾಯಕರು ವೈದ್ಯರು ಎಲ್ಲರನ್ನು ಆರೋಗ್ಯ ಐಶ್ವರ್ಯ ನೆಮ್ಮದಿಯ ಜೀವನ ಕೊಟ್ಟು ಕಾಪಾಡಲಿ ಎಂದರು. ಕ್ರಿಸ್ಮಸ್ ಹಬ್ಬದಲ್ಲಿ ಪಾಲ್ಗೊಂಡ ಕ್ರೈಸ್ತ ಧರ್ಮಿಯರು ಸೇರಿದಂತೆ ಇತರ ಧರ್ಮೀಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕ್ರಿಸ್ ಮಸ್: ವಿಶೇಷ ಪೂಜೆ
ಮುಂಡರಗಿ: ಪವಿತ್ರ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸ್ಥಳೀಯ ಕ್ರೈಸ್ತ ಬಾಂಧವರು ಸೋಮವಾರ ಪಟ್ಟಣದ ಅನ್ನದಾನೀಶ್ವರ ನಗರದಲ್ಲಿರುವ ನಿರ್ಮಲ ಮಂದಿರದಲ್ಲಿ ಕ್ರೈಸ್ತನಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಸಮುದಾಯಗಳ ಜನರು ನಿರ್ಮಲ ಮಂದಿರಕ್ಕೆ ಆಗಮಿಸಿ ಕ್ರೈಸ್ತ ಬಾಂಧವರೊಂದಿಗೆ ಕ್ರಿಸ್ ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು. ನಿರ್ಮಲ ನಿಕೇತನ ಕಾನ್ವೆಂಟ್ ಆವರಣದಲ್ಲಿ ಒಣಹುಲ್ಲು ಬಿದಿರು ಕಟ್ಟಿಗೆ ಮೊದಲಾದವುಗಳಿಂದ ಕೃತಕ ಕುರಿ ದೊಡ್ಡಿ ಹಾಗೂ ಬಾಲ ಏಸುವಿನ ಪ್ರತಿಕೃತಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಬಾಲಏಸು ತಾಯಿ ಮೇರಿ ಮೊದಲಾದವರ ಆಕರ್ಷಕ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅವುಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದ ಸಂಜೆಯವರೆಗೂ ಪಟ್ಟಣದ ಜನರು ನಿರ್ಮಲ ಮಂದಿರಕ್ಕೆ ಭೇಟಿ ನೀಡಿ ಕ್ರೈಸ್ತನ ದರ್ಶನ ಪಡೆದುಕೊಂಡರು. ನಿರ್ಮಲ ನಿಕೇತನ ಸಿಬ್ಬಂದಿ ಮಂದಿರಕ್ಕೆ ಆಗಮಿಸಿದವರಿಗೆ ಕೇಕ್ ನೀಡಿದರು. ಸಿಸ್ಟರ್ ಸಿಸಿಲೀಯಾ ಸಿಸ್ಟರ್ ಸಂಧ್ಯಾ ಸಿಸ್ಟರ್ ಜುಬಿದಾ ಸಿಸ್ಟರ್ ಪ್ರಿಯಾ ಹಾಗೂ ಕಾನ್ವೆಂಟ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.