ADVERTISEMENT

ಭ್ರಷ್ಟಾಚಾರ ಮರೆಮಾಚಲು ಸಿಎಂ ಬದಲಾವಣೆ ನಾಟಕ: ಶಾಸಕ ಸಿ. ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 15:21 IST
Last Updated 1 ಜುಲೈ 2024, 15:21 IST
ಶಾಸಕ ಸಿ.ಸಿ.ಪಾಟೀಲ
ಶಾಸಕ ಸಿ.ಸಿ.ಪಾಟೀಲ   

ನರಗುಂದ: ಕಾಂಗ್ರೆಸ್ ಪಕ್ಷವು ವಾಲ್ಮೀಕಿ ನಿಗಮ ಮಂಡಳಿಯಲ್ಲಿ ನಡೆಸಿದ ಕೋಟ್ಯಂತರ ರೂಪಾಯಿ ವರ್ಗಾವಣೆ ಅವ್ಯವಹಾರ ಮರೆಮಾಚಲು ಸರ್ಕಾರದಲ್ಲಿ ಸಿಎಂ ಹಾಗೂ ಡಿಸಿಎಂ ಬದಲಾವಣೆಯ ನಾಟಕ ಮಾಡುತ್ತಿದೆ ಎಂದು ಶಾಸಕ ಸಿ ಸಿ ಪಾಟೀಲ ಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರ ತಮ್ಮ ಗೃಹ ಕಛೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

‘ಕರ್ನಾಟಕ ರಾಜ್ಯದ ಜನತೆ ನೀವು ಮಾಡಿರುವ ಬೃಹತ್ ಭ್ರಷ್ಟಾಚಾರವನ್ನು ಮರೆಯಲು ಸಾಧ್ಯವಿಲ್ಲ. ಇಂತಹ ನಾಟಕನ್ನು ಬಂದ್ ಮಾಡಿ ವಾಲ್ಮೀಕಿ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಳಪಡಿಸಬೇಕು‘ ಎಂದು ಒತ್ತಾಯಿಸಿದರು.

ADVERTISEMENT

ತೆಲಂಗಾಣ ರಾಜ್ಯದ ಚುನಾವಣಾ ಸಂದರ್ಭದಲ್ಲಿ ವಾಲ್ಮೀಕಿ ನಿಗಮದ ನೂರಾರು ಕೋಟಿ ಹಣವನ್ನು ವರ್ಗಾವಣೆ ಮಾಡಿಕೊಂಡು ಚುನಾವಣೆಗೆ ಬಳಸಿಕೊಂಡಿದೆ. ಹತ್ತಾರು ಬಾರಿ ರಾಜ್ಯದ ಹಣಕಾಸು ಆಯವ್ಯಯವನ್ನು ಮಂಡನೆ ಮಾಡಿದ ಅನುಭವ ಇರುವ ಸಿಎಂ ಸಿದ್ದರಾಮಯ್ಯ ಅವರಿಗೆ ಹಣ ವರ್ಗಾವಣೆ ವಿಷಯ ಗೊತ್ತಿಲ್ಲದೇ ನಡೆಯಲಿಕ್ಕೆ ಸಾಧ್ಯವಿಲ್ಲ. ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರೇ ಸಾಲದು. ಇದರಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಕೈವಾಡ ಇದೆ. ಇದರ ತನಿಖೆ ಸಿಬಿಐನಿಂದ ಆಗಬೇಕು ಎಂದು ಹೇಳಿದರು.

ಈ ಹಿಂದೆ ಹುಲಿ ಉಗುರಿನ ವಿಷಯವನ್ನು ಹರಿಬಿಟ್ಟು ತಾವು ಮಾಡಿರುವ ಬೃಹತ್ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು. ಕೇಂದ್ರದಿಂದ ಬರ ಪರಿಹಾರವನ್ನು ಪಡೆದ ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರಿಗೆ ಬರ ಅಥವಾ ಬೆಳೆ ಪರಿಹಾರವನ್ನು ನೀಡದೇ ಸತಾಯಿಸುತ್ತಿದೆ. ತೈಲ ಬೆಲೆ ಹೆಚ್ಚಿಸುವ ಮೂಲಕ ಎಲ್ಲ ದಿನಬಳಕೆ ವಸ್ತುಗಳ ದರ ಹೆಚ್ಚಳಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ಸುಮ್ಮನಿದ್ದ ಕಾಂಗ್ರೆಸ್ ಸರ್ಕಾರ ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲ ದರಗಳನ್ನು ಹೆಚ್ಚಿಸುತ್ತಿದೆ. ಜೊತೆಗೆ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಕಾಂಗ್ರೆಸ್ ಸರ್ಕಾರ ಮಾಡುವ ಅನ್ಯಾಯವಾಗಿದೆ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತ್ತವಾಡ, ವಾಸಣ್ಣ ಜೋಗಣ್ಣವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.