ADVERTISEMENT

ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿಎಂ ಕಿಡಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 16:25 IST
Last Updated 17 ಡಿಸೆಂಬರ್ 2023, 16:25 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಗದಗ: ‘ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದಂತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

‘ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಎದುರಾಗಿದೆ’ ಎಂಬ ಎಬಿವಿಪಿ ಆರೋಪಕ್ಕೆ ಭಾನುವಾರ ಇಲ್ಲಿ ಬಾಲಕಿಯರ ಬಾಲ ಮಂದಿರ ನೂತನ ಕಟ್ಟಡ ಉದ್ಘಾಟನೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ಎಬಿವಿಪಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆ. ಸುಳ್ಳು ಹೇಳುವುದೇ ಅವರ ಕೆಲಸ. ಸಂಘ ಪರಿವಾರ, ಬಜರಂಗದಳದವರೂ ಅದೇರೀತಿ ನಡೆದುಕೊಳ್ಳುತ್ತಾರೆ’ ಎಂದು ಹರಿಹಾಯ್ದರು.

‘ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ’ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಳೆದ ವರ್ಷ ಬಿಜೆಪಿ ಸರ್ಕಾರ ಇದ್ದಾಗ ನವೆಂಬರ್ ಅಂತ್ಯದ ವೇಳೆಗೆ ₹70,814 ಕೋಟಿ ಖರ್ಚು ಮಾಡಿತ್ತು. ನಮ್ಮ ಸರ್ಕಾರ ಮೇ 20ರಲ್ಲಿ ಅಸ್ತಿತ್ವಕ್ಕೆ ಬಂತು. ಜುಲೈನಲ್ಲಿ ಬಜೆಟ್ ಮಂಡಿಸಿ, ಆಗಸ್ಟ್ 1ರಿಂದ ಜಾರಿಗೆ ಬಂತು. ಆದರೆ, ನಮ್ಮ ಸರ್ಕಾರ ನವೆಂಬರ್ ಅಂತ್ಯದ ವೇಳೆಗೆ ₹73,928 ಕೋಟಿ ಹಣ ಅಭಿವೃದ್ಧಿ ಕೆಲಸಗಳಿಗೆ ವ್ಯಯಿಸಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂಬ ಬಿಜೆಪಿ ಆರೋಪ ಸುಳ್ಳಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ. ಶಕ್ತಿ ಯೋಜನೆಗೆ ಎಷ್ಟು ಖರ್ಚಾಗುತ್ತದೆಯೋ ಅಷ್ಟು ಹಣವನ್ನು ಸರ್ಕಾರ ಕೆಎಸ್ಆರ್‌ಟಿಸಿಗೆ ತುಂಬಿಕೊಡಲಿದೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದರೆ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು. ಅಗತ್ಯ ಇರುವ ಕಡೆಗಳಿಗೆ ಹೊಸ ಬಸ್ ಗಳನ್ನು ಕೊಡಲಾಗುವುದು’ ಎಂದರು.

‘ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಗಳು ಒಂದು ಪರಿಹಾರ ಸೂತ್ರ ರೂಪಿಸುತ್ತಿದ್ದಾರೆ. ಈ ಸಂಬಂಧ ಸಭೆ ನಡೆಸಿದ ನಂತರ ಸೂತ್ರವನ್ನು ಸರ್ಕಾರಕ್ಕೆ ನೀಡುತ್ತಾರೆ. ತದನಂತರ ಸರ್ಕಾರ ಪರಿಶೀಲನೆ ನಡೆಸಲಿದೆ. ಈ ಕೆಲಸವನ್ನು ತ್ವರಿತವಾಗಿ ಮಾಡಲು ಸೂಚಿಸಲಾಗಿದೆ’ ಎಂದು ಸಿಎಂ ತಿಳಿಸಿದರು.

‘ಬೆಳಗಾವಿ ಜಿಲ್ಲೆ ಹೊಸ ವಂಟಮೂರಿ ಪ್ರಕರಣವನ್ನು ನಮ್ಮ ಪೊಲೀಸರೇ ಸಮರ್ಥವಾಗಿ ತನಿಖೆ ಮಾಡಲು ಶಕ್ತರಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಧ್ಯಮದವರಿಗೆ ಸಿಎಂ ಪಾಠ...:

‘ಶ್ರೀರಾಮ ಮಂದಿರ ಉಳಿಯಬೇಕು ಅಂದರೆ ಭಾರತ ಹಿಂದೂ ರಾಷ್ಟ್ರ ಆಗಬೇಕು’ ಎಂಬ ಪೇಜಾವರ ಶ್ರೀಗಳ ಹೇಳಿಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಸಿಟ್ಟಿಗೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಜನಸಂಘ ಯಾವಾಗ ಶುರುವಾಯ್ತು ಗೊತ್ತಾ? ಹೇಳ್ರಯ್ಯ... 1950ರಲ್ಲಿ ಜನಸಂಘ ಶುರುವಾಯ್ತು. ಅವರು ಆಗಲೇ ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಹೇಳಿದ್ರು. ಭಾರತ ಬಹುತ್ವದ ದೇಶ. ಇಲ್ಲಿ ಕ್ರಿಶ್ಚಿಯನ್ ಮುಸ್ಲಿಂ ಸಿಖ್ ಬೌದ್ಧ ಜೈನರು ಎಲ್ಲರೂ ಇದ್ದಾರೆ. ಹಾಗಾಗಿ ನಮ್ಮ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಆಗಲ್ಲ. ಅದು ಬಿಜೆಪಿಯವರ ಸ್ಲೋಗನ್. ಗೊತ್ತಾಯ್ತಾ?’ ಎಂದು ಮಾಧ್ಯಮದವರಿಗೆ ಪಾಠ ಮಾಡಿದರು. ‘ಆರ್‌ಎಸ್‌ಎಸ್ ಯಾವಾಗ ಹುಟ್ಟಿತು? ಹೆಡಗೆವಾರ್ ಗೊತ್ತಾ? ಜನಸಂಘ ಆರ್ ಎಸ್ ಎಸ್ ಬಗ್ಗೆ ಬಿಜೆಪಿಯವರನ್ನು ಕೇಳಿ ಅವರಿಗೆ ಗೊತ್ತೇ ಇಲ್ಲ. ಸುಮ್ನೆ ಬುರುಡೆ ಬಿಡುತ್ತಾರೆ’ ಎಂದು  ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.