ಮುಂಡರಗಿ: ಹಬ್ಬಗಳ ಸರಣಿ ಆರಂಭವಾಗುತ್ತಿದ್ದಂತೆ ಪೂಜಾ ಸಾಮಗ್ರಿಗಳ ದರವೂ ಗಗನಮುಖಿಯಾಗಿದೆ. ಅದರಲ್ಲೂ ಮುಖ್ಯವಾಗಿ ಬೇಕಾಗುವ ತೆಂಗಿನಕಾಯಿ ದರವು ಮರದಷ್ಟೇ ಎತ್ತರಕ್ಕೆ ಹೋಗಿದೆ.
ಪೂಜೆ ಹಾಗೂ ಆಹಾರ ಪದಾರ್ಥಗಳಲ್ಲಿ ಬಳಸುವುದಕ್ಕಾಗಿ ಯತ್ತೇಚ್ಛವಾಗಿ ತೆಂಗಿನಕಾಯಿ ಖರೀದಿಸುತ್ತಿದ್ದ ಜನರು ಈಗ ಚೌಕಾಸಿ ಮಾಡುತ್ತಿದ್ದಾರೆ. ತೀರಾ ಅಗತ್ಯಕ್ಕೆ ಮಾತ್ರ ತೆಂಗಿನಕಾಯಿ ಖರೀದಿಸುವ ಪರಿಸ್ಥಿತಿ ಬಂದೊದಗಿದೆ.
ಕಳೆದ ತಿಂಗಳು ಒಂದು ತೆಂಗಿನಕಾಯಿ ದರ ಕನಿಷ್ಠ ₹12 ಹಾಗೂ ಗರಿಷ್ಠ ದರ ₹20ರಷ್ಟಿತ್ತು. ಇದೀಗ ಕನಿಷ್ಠ ದರ ₹25 ಹಾಗೂ ಗರಿಷ್ಠ ದರ ₹40ಕ್ಕೆ ತಲುಪಿದೆ. ದೀಪಾವಳಿ ಹಬ್ಬದ ಹೊತ್ತಿಗೆ ತೆಂಗಿನಕಾಯಿ ದರ ₹50ರಿಂದ ₹60ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಚಿಲ್ಲರೆ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಸಗಟು ಮಾರುಕಟ್ಟೆಯಲ್ಲಿ ಪ್ರತಿ 100 ತೆಂಗಿನಕಾಯಿ ದರವು ₹900ರಿಂದ ₹1,800ವರೆಗೆ ಮಾರಾಟವಾಗಿದ್ದವು. ಈಗ ಸಗಟು ಮಾರುಕಟ್ಟೆಯಲ್ಲಿ 100 ತೆಂಗಿನಕಾಯಿ ದರ ₹1,800-₹3,500ವರೆಗೆ ಮಾರಾಟವಾಗುತ್ತಲಿವೆ. ಈ ಹಿಂದೆ ಇದ್ದ ಗರಿಷ್ಠ ಮಟ್ಟದ ದರವು ಈಗ ಕನಿಷ್ಠಮಟ್ಟಕ್ಕೆ ತಲುಪಿದೆ.
ಸಾಗಾಣಿಕೆ ವೆಚ್ಚ, ತೆರಿಗೆ ಹಾಗೂ ಮತ್ತಿತರ ಬಾಬತ್ತುಗಳನ್ನು ಸೇರಿಸಿದರೆ ತಲಾ ಒಂದು ತೆಂಗಿನಕಾಯಿ ಬೆಲೆ ₹36 ರೂಪಾಯಿಯಷ್ಟಾಗುತ್ತದೆ. ಇದರಿಂದಾಗಿ ಸಗಟು ವ್ಯಾಪಾರಿಗಳು, ಕಿರುಕಳ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುವಂತಾಗಿದೆ. ಶಿವಮೊಗ್ಗ, ಅರಸಿಕೇರೆ, ತಿಪಟೂರು, ಮಲೆಬೆನ್ನೂರು, ಕಡೂರು, ಕೇರಳ, ತಮಿಳುನಾಡು ಮೊದಲಾದ ಭಾಗಗಳಿಂದ ಮಾರುಕಟ್ಟೆಗೆ ತೆಂಗಿನ ಕಾಯಿ ತರಿಸಿಕೊಳ್ಳಲಾಗುತ್ತದೆ.
ವ್ಯಾಪಾರಸ್ಥರಿಗೆ ಸಾಗಾಣಿಕೆಯ ವೆಚ್ಚವೇ ಅಧಿಕವಾಗಿದ್ದು, ಅನ್ಯದಾರಿ ಕಾಣದೆ ವ್ಯಾಪಾರಸ್ಥರು ಅದರ ವೆಚ್ಚವನ್ನು ಗ್ರಾಹಕರ ಮೇಲೆ ಹೆರುತ್ತಿದ್ದಾರೆ. ಹೀಗಾಗಿ ಕಳೆದ ಹಲವು ದಿನಗಳಿಂದ ತೆಂಗಿನ ದರವು ಗಗನಮುಖಿಯಾಗಿದೆ. ದರ ಏರಿಕೆ ಹೋಟೆಲ್ ಉದ್ಯಮಿಗಳನ್ನು ಕೂಡಾ ಬಾಧಿಸುತ್ತಿದೆ.
ಹಬ್ಬ, ಹರಿದಿನಗಳ ಧಾರ್ಮಿಕ ಆಚರಣೆಯಲ್ಲಿ ತೆಂಗು ಅಗ್ರಸ್ಥಾನ ಪಡೆದಿದ್ದು, ತೆಂಗಿನಕಾಯಿ ಇಲ್ಲದೆ ಯಾವ ಪೂಜೆಯೂ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಜನ ಸಾಮಾನ್ಯರು ತೆಂಗನ್ನು ಖರೀಸಿಸಲೇ ಬೇಕಾಗುತ್ತದೆ. ಜೊತೆಗೆ ಹೋಟೆಲ್ ಉದ್ಯಮಿಗಳಿಗೆ ತೆಂಗು ಅನಿವಾರ್ಯವಾಗಿದ್ದು, ತೆಂಗು ಹಾಗೂ ಅಡುಗೆ ಎಣ್ಣೆಯ ಬೆಲೆ ಏರಿಕೆಯಿಂದಾಗಿ ಸಧ್ಯದಲ್ಲಿಯೇ ಅವರು ತಿಂಡಿ, ತಿನಿಸುಗಳ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಎಳೆನೀರು ಒಣಕೊಬ್ಬರಿ ಹಾಗೂ ಶುದ್ಧ ಕೊಬ್ಬರಿ ಎಣ್ಣೆಗಳ ಬೇಡಿಕೆಯಿಂದಾಗಿ ತೆಂಗಿಗೆ ಭಾರಿ ಬೇಡಿಕೆ ಉಂಟಾಗಿದೆ. ಹೀಗಾಗಿ ಬೆಲೆ ವಿಪರೀತವಾಗಿ ಏರಿದೆಆರ್.ಎಂ.ಕೊಪ್ಪಳ ತೆಂಗಿನಕಾಯಿ ಸಗಟು ವ್ಯಾಪಾರಿ ಮುಂಡರಗಿ
ಎಳನೀರು ಮಾರಾಟವೇ ಲಾಭ ಮುಂಡರಗಿ ತಾಲ್ಲೂಕಿನ ಹೆಸರೂರು ಕೊರ್ಲಹಳ್ಳಿ ಗಂಗಾಪುರ ಶೀರನಹಳ್ಳಿ ಶಿಂಗಟಾಲೂರು ಹಮ್ಮಿಗಿ ಮೊದಲಾದ ತುಂಗಭದ್ರಾ ನದಿ ದಂಡೆಯ ನೀರಾವರಿ ಜಮೀನುಗಳಲ್ಲಿ ಹೇರಳವಾಗಿ ತೆಂಗು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ತೆಂಗನ್ನು ರೈತರೆ ಮಾರುಕಟ್ಟೆಯಲ್ಲಿ ಎಳೆನೀರು ರೂಪದಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಂದು ಎಳೆನೀರು ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದೆ. ತೆಂಗಿನ ಮರದಲ್ಲಿ ಕಾಯಿ ಬಲಿತು ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಅದರಿಂದ ಹೆಚ್ಚೇನು ಲಾಭ ಬರುವುದಿಲ್ಲ. ಹೀಗಾಗಿ ಬಹುತೇಕ ರೈತರು ಎಳನೀರು ಮಾರಾಟದಲ್ಲಿ ತೊಡಗಿದ್ದಾರೆ. ಗದಗ ಹುಬ್ಬಳ್ಳಿ ಧಾರವಾಡ ಮೊದಲಾದ ಭಾಗಗಳ ವ್ಯಾಪಾರಸ್ಥರು ರೈತರ ಜಮೀನುಗಳಿಗೆ ಆಗಮಿಸಿ ಜಮೀನಿನಲ್ಲಿಯೇ ತಲಾ ₹30-₹35 ರೂಪಾಯಿಯಂತೆ ಎಳೆನೀರು ಕಾಯಿಗಳನ್ನು ಖರೀದಿಸಿ ಸ್ಥಳದಲ್ಲಿಯೆ ಹಣ ನೀಡುತ್ತಾರೆ. ಇದು ಇಲ್ಲಿಯ ರೈತರಿಗೆ ಅನುಕೂಲವಾಗಿದೆ. ಬಹುತೇಕ ರೈತರು ಬಲಿತ ತೆಂಗಿನಕಾಯಿಗಳ ಬದಲಾಗಿ ಎಳೆನೀರು ಮಾರಾಟಕ್ಕೆ ಮೊರೆಹೋಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.