ಲಕ್ಕುಂಡಿ (ಗದಗ ಜಿಲ್ಲೆ): ಒಂದೆಡೆ ಕಳಶ ಹೊತ್ತ ಮಹಿಳೆಯರ ಸಾಲು, ಮತ್ತೊಂದೆಡೆ ಡೊಳ್ಳು, ಮಂಗಳವಾದ್ಯಗಳ ಸಂಭ್ರಮದೊಂದಿಗೆ ಪಲ್ಲಕ್ಕಿಗಳ ಸಾಲು ಹಳ್ಳಿಯ ಮನೆ ಮನೆಗೆ ತೆರಳಿ ನಾಣ್ಯ, ಪ್ರಾಚ್ಯವಸ್ತುಗಳನ್ನು ಸಂಗ್ರಹಿಸುವ ಮೂಲಕ ಲಕ್ಕುಂಡಿ ಗತವೈಭವದ ಮರುಸ್ಥಾಪನೆಗೆ ಮುನ್ನುಡಿ ಬರೆಯಲಾಯಿತು.
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ಲಕ್ಕುಂಡಿ ಪಾರಂಪರಿಕ ಪ್ರದೇಶ ವ್ಯಾಪ್ತಿಯ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮ’ವು ಹಬ್ಬದ ವಾತಾವರಣ ಸೃಷ್ಟಿಸಿತ್ತು.
ಶ್ರೀಮಂತ ಇತಿಹಾಸ, ಪರಂಪರೆಯನ್ನು ಹೊಂದಿರುವ ಲಕ್ಕುಂಡಿಯ ಗತವೈಭವವನ್ನು ಮರುಸ್ಥಾಪಿಸಲು ಹತ್ತು ದಿನಗಳಿಂದ ಈ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಕುರುಹುಗಳು, ಸ್ಮಾರಕಗಳ ಪತ್ತೆಗಾಗಿ ಇತಿಹಾಸಕಾರರು ಹಾಗೂ ತಜ್ಞರ ನೇತೃತ್ವದಲ್ಲಿ ಹಲವಾರು ತಂಡಗಳನ್ನು ರಚಿಸಲಾಗಿತ್ತು.
ಭಾನುವಾರ ಲಕ್ಕುಂಡಿ ಗ್ರಾಮದ ವಿವಿಧ ಓಣಿಗಳಿಗೆ ತೆರಳಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ನರಗುಂದ ಶಾಸಕ ಸಿ.ಸಿ. ಪಾಟೀಲ ಅವರನ್ನು ಮಹಿಳೆಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.
ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಗ್ರಾಮಸ್ಥರ ಬಳಿ ಇದ್ದ ಶಿಲ್ಪಗಳು, ನಾಣ್ಯಗಳು, ಸ್ಮಾರಕಗಳು, ವೀರಗಲ್ಲುಗಳು, ತಾಮ್ರದ ಪತ್ರಗಳು, ತಾಳೆ ಗರಿಗಳನ್ನು ಪಡೆದುಕೊಳ್ಳಲಾಯಿತು. ಈ ವಸ್ತುಗಳನ್ನು ಜನ ಪಲ್ಲಕ್ಕಿಯಲ್ಲಿ ಹಾಕುವ ಮೂಲಕ ಹೃದಯ ವೈಶಾಲ್ಯತೆ ಮೆರೆದರು.
ಲಕ್ಕುಂಡಿ ಕಲ್ಮಠದ ಹತ್ತಿರದ ನಿವಾಸಿ ವೀರಯ್ಯ ಅವರು ತಮ್ಮ ಮನೆಯ 18 ಗುಂಟೆ ಜಾಗವನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಪಾಟೀಲ, ‘ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನವೆಂಬರ್ 22 ರಿಂದ 24ರವರೆಗೆ ನಡೆದ ಈ ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ 1,050 ಸ್ಮಾರಕಗಳು, 13 ಶಾಸನಗಳು, ಬಾದಾಮಿ ಚಾಲುಕ್ಯರ, ಕಳಚೂರರ, ವಿಜಯನಗರ ಸಾಮ್ರಾಜ್ಯ ಕಾಲದ ಸಾವಿರಾರು ನಾಣ್ಯಗಳು ಸಂಗ್ರಹಿಸಲಾಗಿದೆ. ಶಿಲಾಯುಗದ ಆಯುಧವೊಂದು ಪತ್ತೆಯಾಗಿದ್ದು, ಇವುಗಳನ್ನು ಲಕ್ಕುಂಡಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಲಕ್ಕುಂಡಿಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಬೇಕಾದ ಅನುದಾನವನ್ನು ಮುಂದಿನ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗುವುದು. ಇಲ್ಲಿರುವ 101 ಬಾವಿಗಳು ಮತ್ತು ದೇವಸ್ಥಾನಗಳ ಅವಶೇಷಗಳು ಭೂಮಿಯಲ್ಲಿ ಹುದುಗಿ ಹೋಗಿದ್ದು, ಇವುಗಳನ್ನು ಪತ್ತೆಹಚ್ಚಲು ಡಿಸೆಂಬರ್ ಅಂತ್ಯದಲ್ಲಿ ಭೂ ಉತ್ಖನನ ಆರಂಭಿಸುವ ಚಿಂತನೆ ಇದ್ದು, ಈ ಕುರಿತು ತಜ್ಞರೊಂದಿಗೆ ಚರ್ಚಿಸಲಾಗುವುದು’ ಎಂದರು.
ಲಕ್ಕುಂಡಿಯಲ್ಲಿ ದೊರೆತಿರುವ ಬೃಹತ್ ಕಂಬಗಳು ಸ್ಮಾರಕಗಳ ಅವಶೇಷಗಳನ್ನು ಬಳಸಿಕೊಂಡು ದೇವಸ್ಥಾನ ಮರುನಿರ್ಮಾಣ ಮಾಡಲಾಗುವುದುಎಚ್.ಕೆ. ಪಾಟೀಲ ಪ್ರವಾಸೋದ್ಯಮ ಸಚಿವ
ಲಕ್ಕುಂಡಿ ಗ್ರಾಮದ ಸಾಂಸ್ಕೃತಿಕ ಐತಿಹಾಸಿಕ ಪರಂಪರೆ ಬಿಂಬಿಸುವ ಕುರುಹುಗಳನ್ನು ಸಂರಕ್ಷಿಸಿ ಇದನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಮಾಡುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕುಸಿ.ಸಿ. ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.