ADVERTISEMENT

ನರೇಗಲ್:‌ ಭೂ ಪರಿವರ್ತನೆ ಮಾಡದೇ ಘಟಕ ಸ್ಥಾಪನೆ?

ಕಾಯ್ದೆ ಗಾಳಿಗೆ ತೂರಿದ ಖಾಸಗಿ ಕಂಪನಿ: ಶೇ 90 ಕಾಮಗಾರಿ ಮುಗಿದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಪ್ರಜಾವಾಣಿ ವಿಶೇಷ
Published 19 ಆಗಸ್ಟ್ 2023, 6:25 IST
Last Updated 19 ಆಗಸ್ಟ್ 2023, 6:25 IST
ನರೇಗಲ್‌ ಹೋಬಳಿ ನಿಡಗುಂದಿಯಲ್ಲಿ ರಸ್ತೆ ಪಕ್ಕದ ಹೊಲದಲ್ಲಿ ಕೆ.ಎಸ್.ಟಿ ಕಂಪನಿಯಿಂದ ಸ್ಥಾಪನೆ ಮಾಡಲಾಗಿರುವ ಕಾಂಕ್ರೀಟ್‌ ಘಟಕ
ನರೇಗಲ್‌ ಹೋಬಳಿ ನಿಡಗುಂದಿಯಲ್ಲಿ ರಸ್ತೆ ಪಕ್ಕದ ಹೊಲದಲ್ಲಿ ಕೆ.ಎಸ್.ಟಿ ಕಂಪನಿಯಿಂದ ಸ್ಥಾಪನೆ ಮಾಡಲಾಗಿರುವ ಕಾಂಕ್ರೀಟ್‌ ಘಟಕ   

ಚಂದ್ರು ಎಂ. ರಾಥೋಡ್

ನರೇಗಲ್:‌ ಹೋಬಳಿ ನಿಡಗುಂದಿಯ ಹೊಲವೊಂದರಲ್ಲಿ ಖಾಸಗಿ ಕಂಪನಿಯವರು ಕೃಷಿ ಭೂಮಿಯಲ್ಲಿಯೇ ಕಾಂಕ್ರೀಟ್‌ ಘಟಕ ಸ್ಥಾಪಿಸಿದ್ದಾರೆ. ಇಲ್ಲಿವರೆಗೆ ಯಾವುದೇ ಇಲಾಖೆಯಿಂದ ಎನ್‌ಒಸಿ ಪಡೆಯದೇ ಶೇ 90ರಷ್ಟು ಕಾಮಗಾರಿ ಮುಗಿಸಿದ್ದಾರೆ!

ಇಷ್ಟಾದರೂ ಅಧಿಕಾರಿಗಳು, ‘ಘಟಕ ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲ. ಸ್ಥಳಕ್ಕೆ ಹೋಗಿ ಪರಿಶೀಲಿಸಿಲ್ಲ’ ಎಂದು ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಕಂಪನಿಯವರು ಅನುಮತಿ ಪಡೆಯದೇ ಭೂ ಪರಿವರ್ತನೆ ನಿಯಮವನ್ನು ಗಾಳಿಗೆ ತೂರಿದ್ದರೂ ಸಹ ಸಂಬಂಧಪಟ್ಟ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುವುದು ಸರ್ವಜನಿಕರ ಆರೋಪವಾಗಿದೆ.

ADVERTISEMENT

‘ನಿಡಗುಂದಿ ಗ್ರಾಮದ ನಿವಾಸಿ ಅಶೋಕ ಕಳಕಪ್ಪ ಇಟಗಿ ಎಂಬುವರ ಸರ್ವೆ ನಂ. 92/4ರಲ್ಲಿ ಒಂದು ಎಕರೆ ಹಾಗೂ ಅದರ ಪಕ್ಕದಲ್ಲಿರುವ ಸೋಮಲಿಂಗಪ್ಪ ಕಳಕಪ್ಪ ಇಟಗಿ ಎಂಬುವರ ಸರ್ವೆ ನಂ. 92/3ರಲ್ಲಿ ಒಂದು ಎಕರೆ ಒಟ್ಟು ಅಂದಾಜು ಮೂರು ಎಕರೆಯಷ್ಟು ಭೂಮಿಯನ್ನು ಕೆ.ಎಸ್.ಟಿ ಕಂಪನಿಯವರು ಕಾಂಕ್ರೀಟ್‌ ಘಟಕದ ಸ್ಥಾಪನೆಗಾಗಿ ವ್ಯವಹಾರದ ರೂಪದಲ್ಲಿ ಕೃಷೆಯೇತರ ಚಟುವಟಿಕೆಗೆ ಪಡೆದಿದ್ದಾರೆ. ಸದ್ಯ ನಮ್ಮ ಜಮೀನಿನಲ್ಲಿ ಘಟಕ ಸ್ಥಾಪನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಭೂಮಿಯನ್ನು ಬಳಕೆ ಮಾಡಿಕೊಳ್ಳಬಹುದು. ಆದರೆ ಭೂಪರಿವರ್ತನೆ ಬಗ್ಗೆ ಮಾಹಿತಿ ಇಲ್ಲ’ ಎನ್ನುತ್ತಾರೆ ರೈತ ಅಶೋಕ ಕಳಕಪ್ಪ ಇಟಗಿ.

‘ಬಹುರಾಷ್ಟ್ರೀಯ ಪವನ ವಿದ್ಯುತ್‌ ಖಾಸಗಿ ಕಂಪನಿಯವರು ವಿವಿಧ ಮಾರ್ಗಗಳ ಮೂಲಕ ನರೇಗಲ್‌ ಹೋಬಳಿಯ ಭಾಗದ ಕೃಷಿ ಭೂಮಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಳವಡಿಸುತ್ತಿರುವ ಫ್ಯಾನ್‌ ಅಳವಡಿಸಲು ಅಗತ್ಯವಿರುವ ಕಾಂಕ್ರೀಟ್‌ ಸರಬರಾಜು ಮಾಡುವ ಘಟಕ ಇದಾಗಿದೆ. ಯಾವುದೇ ಅನುಮತಿ ಪಡೆಯದೆ ಅದರಲ್ಲೂ ರಸ್ತೆ ಪಕ್ಕದಲ್ಲಿಯೇ ಅಂದಾಜು 30 ಅಡಿ ಅಂತರದಲ್ಲಿ ಸ್ಥಾಪನೆ ಮಾಡಿದ್ದಾರೆ. ಘಟಕದ ದೂಳು, ಅದರಿಂದ ಹೊರಗೆ ಬರುವ ವಸ್ತುಗಳು ನೇರವಾಗಿ ವಾಹನ ಸವಾರರ ಮೇಲೆ ಬೀಳುವ ಸಾಧ್ಯತೆಯಿದೆ. ಘಟಕ ಸ್ಥಾಪನೆಯ ಅಂತರ ಹಾಗೂ ನಿಯಮಗಳನ್ನು ಸ್ಥಾನಿಕವಾಗಿ ಪರಿಶೀಲನೆ ನಡೆಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವಿನಾಯಕ ಜರತಾರಿ ಆರೋಪಿಸಿದ್ದಾರೆ.

‘ಇಲ್ಲಿ ಸ್ಥಾಪಿಸಿರುವ ಘಟಕಕ್ಕೆ ಯಂತ್ರಗಳನ್ನು ಕೊಡುವುದು ಹಾಗೂ ಅಳವಡಿಸುವುದು ಮಾತ್ರ ನಮ್ಮ ಕೆಲಸವಾಗಿದೆ. ಅನುಮತಿ ಪಡೆಯುವುದು ಕೆ.ಎಸ್.ಟಿಯವರು ಕಾರ್ಯವಾಗಿದೆ’ ಎಂದು ಅಪೋಲೊ ಕಂಪನಿ ಪ್ರತಿನಿಧಿ ಡಿ. ಸಾಮಿ ಹೇಳಿದರು.

ಕೃಷಿಯೇತರ ಪರಿವರ್ತನೆ ಹಾಗೂ ಅನುಮತಿಗಳನ್ನು ನಮ್ಮ ಕಂಪನಿಯ ಮ್ಯಾನೇಜರ್ ಪಡೆದಿರುವುದಾಗಿ ಹೇಳಿದ್ದಾರೆ ಎಂದು ಕೆ.ಎಸ್.ಟಿಯ ಸ್ಥಾನಿಕ ಸೂಪರ್‌ವೈಸರ್‌ ವೀರಮಣಿ ಮಾಹಿತಿ ನೀಡಿದರು.

‘ಕಾಂಕ್ರೀಟ್‌ ಘಟಕದ ಅನುಮತಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ’ ಎಂದು ಕೆ.ಎಸ್.ಟಿ ಕಂಪನಿ ವ್ಯವಸ್ಥಾಪಕ ಶ್ರೀನಿವಾಸ ತಿಳಿಸಿದ್ದಾರೆ. 

‘ಗ್ರಾಮ ಪಂಚಾಯ್ತಿಗೆ ಎನ್.‌ಒ.ಸಿಗಾಗಿ ಮನವಿ ಸಲ್ಲಿದ್ದಾರೆ. ಇನ್ನೂ ನಾವು ನೀಡಿಲ್ಲ’ ಎಂದು ನಿಡಗುಂದಿ ಗ್ರಾಮ ಪಂಚಾಯ್ತಿ ಪಿಡಿಒ ಅಮರೇಶ ಮೂಲಿಮನಿ‌ ಹೇಳಿದರು.

ನಿಡಗುಂದಿಯ ಘಟಕದ ಬಗ್ಗೆ ಮಾಹಿತಿ ಒದಗಿಸುವಂತೆ ಕಂದಾಯ ನಿರೀಕ್ಷಕರಿಗೆ ತಿಳಿಸಲಾಗಿದೆ. ಅಲ್ಲಿಂದ ಮಾಹಿತಿ ಬಂದ ನಂತರ ಒದಗಿಸಲಾಗುವುದು
–ಕಿರಣಕುಮಾರ ಜಿ. ಕುಲಕರ್ಣಿ ತಹಶೀಲ್ದಾರ್‌ ಗಜೇಂದ್ರಗಡ
ಘಟಕ ಸ್ಥಾಪನೆ ಬಗ್ಗೆ ಮಾಹಿತಿ ಇಲ್ಲ. ಸ್ಥಳಕ್ಕೆ ಹೋಗಿ ಪರಿಶೀಲಿಸಿಲ್ಲ. ಕಂಪನಿಯಿಂದ ಅರ್ಜಿ ಬಂದಿದೆ. ಇನ್ನೂ ಯಾವುದೇ ಪ್ರಮಾಣಪತ್ರಗಳನ್ನು ನೀಡಿಲ್ಲ
–ಪಿ.ಬಿ.ಮಾಲಿಪಾಟೀಲ ಕಂದಾಯ ನಿರೀಕ್ಷಕ ನರೇಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.