ಡಂಬಳ: ಬಡವ, ಶ್ರೀಮಂತ ಎಂಬ ಬೇಧಭಾವ ಮಾಡದೆ. ಪ್ರತಿಯೊಬ್ಬರಿಗೂ ನಮ್ಮ ಕಾಂಗ್ರೆಸ್ ಪಕ್ಷದ ಜನಪರ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ನಮ್ಮ ಯೋಜನೆಗಳನ್ನೇ ಬಿಜೆಪಿಯರು ಅನುಕರಣೆ ಮಾಡುತ್ತಿದ್ದಾರೆ. ಈಚೆಗೆ ಅಭಿವೃದ್ಧಿ ಕಾರ್ಯ ಮತ್ತು ಜನಪರ ಆಡಳಿತಕ್ಕಿಂತ ಸುಳ್ಳು ಹೆಚ್ಚು ಪ್ರಚಾರವಾಗುತ್ತಿರುವುದು ಮಾರಕ ಎಂದು ಶಾಸಕ ಜಿ.ಎಸ್.ಪಾಟೀಲ ಅಭಿಪ್ರಾಯಪಟ್ಟರು.
ಡಂಬಳ ಹೋಬಳಿಯ ಡೋಣಿ ಗ್ರಾಮದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ವಿವಿಧ ರಾಜ್ಯದಲ್ಲಿ ನಡೆಯುವ ಚುನಾವಣೆಗೆ ಕೇವಲ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಆದರೆ ನಮ್ಮ ಪಕ್ಷದ ಯುವನಾಯಕ ರಾಹುಲ್ ಗಾಂಧಿ ಜನರ ಸಂಕಷ್ಠ ಸಮಸ್ಯೆಗಳನ್ನು ಆಲಿಸಲು ಜನರ ಬಳಿಗೆ ಹೋಗುತ್ತಿದ್ದಾರೆ ಎಂದರು.
ಡಿಡಿಪಿಐ ಎಂ.ಎ.ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಮೃತೇಶ್ವರಮಠ ಹಾಲಸೋಮೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್ ಧನಂಜಯ ಮಾಲಗಿತ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಮೋರನಾಳ, ಯುವಮುಖಂಡ ಮಿಥುನಗೌಡ.ಜಿ.ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಕುಂಬಾರ, ಉಪಾಧ್ಯಕ್ಷೆ ನಾಗರತ್ನ ಒಡ್ಡರ, ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ಇದ್ದರು.
₹ 1.81 ಕೋಟಿ ವೆಚ್ಚದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡ, ₹ 25 ಲಕ್ಷ ಅನುದಾನದಲ್ಲಿ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಿಂದ ಮುಖ್ಯರಸ್ತೆಯವರೆಗೆ ಸಿ.ಸಿ.ರಸ್ತೆ. ₹ 10 ಲಕ್ಷ ಗ್ರಂಥಾಲಯ ಕಟ್ಟಡ ಉದ್ಘಾಟನೆ, ₹ 25 ಲಕ್ಷ ವೆಚ್ಚದ ಶ್ರೀ ಸದ್ಗುರು ಹಾಲೇಶ್ವರ ಆಶ್ರಮದ ಆವರಣದಲ್ಲಿ ಯಾತ್ರಿ ನಿವಾಸ ಕಟ್ಟಡ ಸೇರಿದಂತೆ ನೂತನ ಗ್ರಾಮ ಓನ್ ನಾಗರಿಕ ಸೇವಾ ಕೇಂದ್ರವನ್ನು ಶಾಸಕರು ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.