ಗದಗ: ಕೊವಿಡ್ 19 ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ (ಪಿ-166) 80 ವರ್ಷದ ವೃದ್ಧೆ ಬುಧವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.
ನಗರದ 80 ವರ್ಷದ ವೃದ್ಧೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು.ಜಿಲ್ಲೆಯಲ್ಲಿ ಇದು ಮೊದಲ ಪ್ರಕರಣವಾಗಿತ್ತು.
‘ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಏ.6ರಂದು ಪರೀಕ್ಷಾ ವರದಿ ಪಾಸಿಟಿವ್ ಎಂದು ಬಂದಿತ್ತು.ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್ಸ್) ಚಿಕಿತ್ಸೆ ಮುಂದುವರಿಸಲಾಗಿತ್ತು’ ಎಂದುಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿಮಂಗಳವಾರ ವಿವರ ನೀಡಿದ್ದರು.
ಸೋಂಕಿತ ವೃದ್ಧೆಯ ತಂಗಿ, ತಂಗಿಯ ಇಬ್ಬರು ಮಕ್ಕಳು ಹಾಗೂ ವೃದ್ಧೆಯ ಸಂಪರ್ಕಕ್ಕೆ ಬಂದಿದ್ದ 44 ಮಂದಿಯ ರಕ್ತ ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲರನ್ನೂ ಜಿಲ್ಲಾ ಆಸ್ಪತ್ರೆ ಸಮೀಪ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿ, ನಿಗಾ ವಹಿಸಲಾಗಿದೆ. ಇವರ ವರದಿಗಳು ನೆಗೆಟಿವ್ ಬಂದಿದೆ. ವೃದ್ಧೆಯುವ ವಿದೇಶಕ್ಕೆ ತೆರಳಿರಲಿಲ್ಲ ಮತ್ತು ವಿದೇಶಕ್ಕೆ ತೆರಳಿದ್ದವರ ಸಂಪರ್ಕದ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ.
ಮಾರ್ಚ್ 23ರಂದು ವೃದ್ಧೆ ಗದುಗಿನ ಎಸ್.ಎಂ ಕೃಷ್ಣ ನಗರದಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅಲ್ಲಿಗೆ ಗೋವಾದಿಂದ ಬಂದಿದ್ದ ಜಿಲ್ಲೆಯ 7 ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ಎರಡು ದಿನಗಳ ಬಳಿಕ ವೃದ್ಧೆಗೆ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದು, ನಂತರ ಅವರ ಸೂಚನೆಯಂತೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.
ಸೋಂಕು ದೃಢಪಟ್ಟ ಬೆನ್ನಲ್ಲೇ, ವೃದ್ಧೆ ವಾಸವಿದ್ದ ಮತ್ತು ಅವರು ಭೇಟಿ ನೀಡಿದ ಪ್ರದೇಶದ 500 ಮೀಟರ್ ಸುತ್ತಳತೆಯನ್ನು ಜಿಲ್ಲಾಡಳಿತ ಕಂಟೈನ್‌ಮೆಂಟ್ ಪ್ರದೇಶವಾಗಿ ಘೋಷಿಸಿ, ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈಕೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಮಾಡಲು ಜಿಲ್ಲಾಡಳಿತವು ಟಾಸ್ಕ್‌ಫೋರ್ಸ್ ರಚಿಸಿದೆ.
ದೇಶದಲ್ಲಿ ಒಟ್ಟು 5,521 ಮಂದಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. 500 ಮಂದಿ ಗುಣಮುಖರಾಗಿದ್ದಾರೆ. 172 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 181 ಮುಟ್ಟಿದೆ. ಒಟ್ಟು ಆರು ಮಂದಿಬಲಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.