ಗದಗ: ಹಾಲು, ನೀರು, ತರಕಾರಿ, ಔಷಧ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತವು ನೀಡಿರುವ ಸಡಿಲಿಕೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಜನರು, ಬೆಳಗ್ಗಿನ ಹೊತ್ತು ಗುಂಪು ಗುಂಪಾಗಿ ಮಾರುಕಟ್ಟೆಗೆ ಮುಗಿಬೀಳುತ್ತಿರುವ ದೃಶ್ಯ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮುಂದುವರಿದಿದೆ.
ಲಾಕ್‌ಡೌನ್ ಘೋಷಣೆಯಾಗಿ ಐದು ದಿನಗಳು ಕಳೆದಿದ್ದು, ಸಾರ್ವಜನಿಕರಿಗೆ ಮನೆ ಬಾಗಿಲಲ್ಲೇ ತರಕಾರಿ ಸಿಗುವಂತಹ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ದಿನಸಿ ಖರೀದಿಗೂ ನಿರ್ದಿಷ್ಟ ಸಮಯ ನಿಗದಿಪಡಿಸಿದೆ. ಕಿರಾಣಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮಾರ್ಕಿಂಗ್ ಕೂಡ ಮಾಡಲಾಗಿದೆ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಿರುವ ಜನರು, ‘ಮನೆಯಲ್ಲಿ ಇರದೆ’ ಎಂದಿನಂತೆ ತಮ್ಮ ಓಡಾಟ ಮುಂದುವರಿಸಿದ್ದಾರೆ.
ಬೆಳಗಿನ ಹೊತ್ತು 7ರಿಂದ 10 ಗಂಟೆಯವರೆಗೆ ದಿನಸಿ ಮತ್ತು ತರಕಾರಿ ಖರೀದಿಗೆ ಜನರಿಗೆ ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಖರೀದಿ ನೆಪ ಹೇಳಿಕೊಂಡು ಮನೆಯಿಂದ ಹೊರಬರುವ ಜನರು ಮಾರುಕಟ್ಟೆ ಪ್ರದೇಶದಲ್ಲಿ ದೌಡಾಯಿಸುತ್ತಿದ್ದಾರೆ. ಬೆಳಿಗ್ಗೆ ಪೊಲೀಸರು ವಿಚಾರಣೆ ನಡೆಸುವುದಿಲ್ಲ, ಲಾಠಿ ಏಟು ನೀಡುವುದಿಲ್ಲ ಎನ್ನುವುದು ಖಚಿತವಾಗಿರುವುದರಿಂದ ದ್ವಿಚಕ್ರ ವಾಹನಗಳ ಓಡಾಟ ನಿರಾತಂಕವಾಗಿ ಮುಂದುವರಿದಿದೆ.
ಶನಿವಾರ ಬೆಳಿಗ್ಗೆ ನಗರದ ಮುಖ್ಯ ಮಾರುಕಟ್ಟೆಯನ್ನು ಸಂಪರ್ಕಿಸುವ ಟಾಂಗಾಕೂಟ ವೃತ್ತದಲ್ಲಿ ನೂರಾರು ದ್ವಿಚಕ್ರ ವಾಹನಗಳನ್ನು ಸಾಲುಗಟ್ಟಿ ನಿಂತಿದ್ದವು. ಕಿರಾಣಿ ಖರೀದಿ ನೆಪದಲ್ಲಿ ಜನರು ಮಾಸ್ಕ್ ಕೂಡ ಧರಿಸದೆ ಓಡಾಡುತ್ತಿದ್ದ ದೃಶ್ಯ ಕಂಡುಬಂತು.
ತಮ್ಮ ಮನೆ ಬಾಗಿಲಿಗೆ ತರಕಾರಿ ಬಂದರೂ ಖರೀದಿಸಲು ನಿರಾಸಕ್ತಿ ವಹಿಸುತ್ತಿರುವ ಜನರು, ದಿನಸಿ ಖರೀದಿ ನೆಪದಲ್ಲಿ ಚೀಲ ಹಿಡಿದುಕೊಂಡು ಬೆಳಿಗ್ಗೆ ಮಾರುಕಟ್ಟೆಗೆ ದೌಡಾಯಿಸುತ್ತಿದ್ದಾರೆ. ‘ಜನರು ಕನಿಷ್ಠ ಒಂದು ವಾರಕ್ಕೆ ಬೇಕಿರುವ ದಿನಸಿ ಖರೀದಿಸಿಟ್ಟುಕೊಳ್ಳುವುದಿಲ್ಲ. ಪಾವು ಕೆ.ಜಿ, ಅರ್ಧ ಕೆ.ಜಿ ಲೆಕ್ಕದಲ್ಲಿ ಖರೀದಿಸುತ್ತಾರೆ. ಮರುದಿನ ಮತ್ತೆ ಬರುತ್ತಾರೆ. ಜಾತ್ರೆ ಮಾಡಲು ಬಂದವರಂತೆ ಮಾರುಕಟ್ಟೆಗೆ ಬರುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಇಲ್ಲಿನ ವ್ಯಾಪಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.