ನರೇಗಲ್: ಹೋಬಳಿಯ ಜಕ್ಕಲಿ ಗ್ರಾಮದ ದೊಡ್ಡಮೇಟಿ ಮನೆಯ ಜಗುಲಿ ಮೇಲೆ ಭುವನೇಶ್ವರಿಗೆ (ಕನ್ನಡಮ್ಮನಿಗೆ) ನಿತ್ಯ ಪೂಜೆ, ಪ್ರಾರ್ಥನೆ ನಡೆಯುತ್ತದೆ. ಗ್ರಾಮಸ್ಥರು ಹಬ್ಬದ ದಿನಗಳಲ್ಲಿ ದೇವಿಗೆ ನಮಸ್ಕರಿಸಿದ ನಂತರ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ವಿಶೇಷ.
ಏಕೀಕರಣಕ್ಕಾಗಿ ನಡೆಯುತ್ತಿದ್ದ ಹೋರಾಟದ ಸಂದರ್ಭದಲ್ಲಿ 1953ರ ಜನವರಿ 11ರಂದು ಜಕ್ಕಲಿಯ ಅನ್ನದಾನೇಶ್ವರ ಮಠದಲ್ಲಿ ಈ ತೈಲಚಿತ್ರವನ್ನು ಅಂದಾನಪ್ಪ ದೊಡ್ಡಮೇಟಿ ಅವರ ಕಲ್ಪನೆಯಂತೆ ಮೊದಲ ಬಾರಿಗೆ ರಚಿಸಿದವರು ಗದುಗಿನ ಚಿತ್ರಕಲಾವಿದ ಸಿ.ಎನ್. ಪಾಟೀಲ. ಅಂದಿನಿಂದ ದೊಡ್ಡಮೇಟಿ ಅವರ ಮನೆಯ ಜಗುಲಿ ಮೇಲೆ ಆರಡಿ ಎತ್ತರದ ಭುವನೇಶ್ವರಿ ತೈಲಚಿತ್ರಕ್ಕೆ ನಿತ್ಯ ಬೆಳಿಗ್ಗೆ ಪೂಜೆ ಸಲ್ಲುತ್ತಿದೆ.
‘ಭುವನೇಶ್ವರಿಯ ಈ ಚಿತ್ರವನ್ನು ರಚನೆ ಮಾಡಿಸಲು ಕಲಾವಿದ ಸಿ.ಎನ್. ಪಾಟೀಲ ಅವರನ್ನು ಮುಂಬೈಗೆ ತರಬೇತಿಗಾಗಿ ಅಂದಾನಪ್ಪನವರು ಕಳುಹಿಸಿದ್ದರು. ಕಲಾವಿದರ ಮನೆಯ ಖರ್ಚು ತಾವೇ ನೋಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ಭುವನೇಶ್ವರಿಯ ಚಿತ್ರಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇಂಗ್ಲೆಂಡ್‌ನಿಂದ ಬಣ್ಣವನ್ನು ಆಗಿನ ಕಾಲದಲ್ಲಿಯೇ ಆಮದು ಮಾಡಿಕೊಂಡಿದ್ದರು. ಕನ್ನಡಮ್ಮನ ಮೇಲೆ ಅಷ್ಟೊಂದು ಪ್ರೀತಿ ಅವರಿಗಿತ್ತು’ ಎಂದು ಜಕ್ಕಲಿ ಗ್ರಾಮದ ಹಿರಿಯ ಎಂ.ಎಸ್. ಧಡೆಸೂರಮಠ ಹೇಳಿದರು.
ಜಕ್ಕಲಿಯಲ್ಲಿರುವ ತೈಲಚಿತ್ರದಲ್ಲಿ ಭುವನೇಶ್ವರಿ ಎಡಗೈಯಲ್ಲೊಂದು ಪುಸ್ತಕವಿದೆ. ಹೀಗಾಗಿ ಸರಸ್ವತಿ ಎನ್ನಬಹುದು. ಇನ್ನೊಂದು ಕೈಯಲ್ಲಿ ತ್ರಿಶೂಲ ಹಿಡಿದಿರುವುದರಿಂದ ಪರಮೇಶ್ವರಿ ಎನ್ನಬಹುದು. ಮತ್ತೊಂದು ಕೈಯಲ್ಲಿ ಕಮಲ ಹಿಡಿದಿರುವುದರಿಂದ ಲಕ್ಷ್ಮಿ ಎನ್ನಬಹುದು. ಬಿಳಿಸೀರೆ ಹಾಗೂ ಹಸಿರು ಕುಪ್ಪಸ ತೊಡಿಸಲಾಗಿದೆ. ಮುಖ್ಯವಾಗಿ ಭುವನೇಶ್ವರಿ ನಿಂತ ಭಂಗಿಯೇ ಕರ್ನಾಟಕ ನಕ್ಷೆಯಾಗಿದೆ. ಭುವನೇಶ್ವರಿ ಸುತ್ತ ಹೊಯ್ಸಳರು, ಬನಶಂಕರಿ ದೇವಸ್ಥಾನ, ಚಾಲುಕ್ಯರ ಶಿಲ್ಪಕಲೆ, ಹಂಪಿ ಕಡಲೆಕಾಳು ಗಣಪ, ಹಂಪಿ ವಿರೂಪಾಕ್ಷ, ಶ್ರವಣಬೆಳಗೊಳ, ಜೋಗ, ವಿಜಯಪುರ ಗೋಳಗುಮ್ಮಟ, ಕರ್ನಾಟಕದ ಕರಾವಳಿ ಪ್ರದೇಶ, ಹಸಿರು ಸಂಪತ್ತನ್ನು ಚಿತ್ರಿಸಲಾಗಿದೆ. ರತ್ನಖಚಿತ ಮೆಟ್ಟಿಲುಗಳ ಮೇಲೆ ಭುವನೇಶ್ವರಿ ಕುಳಿತಿದ್ದಾಳೆ.
‘ಮಂತ್ರಮಯಿ ಕರ್ನಾಟಕ ಮಾತೆ’ ಎಂದೇ ಪ್ರಸಿದ್ಧಿ ಪಡೆದಿರುವ ದೊಡ್ಡಮೇಟಿಯವರ ಕನ್ನಡಮ್ಮನ ಕೃತಿಗೆ ಬಳ್ಳಾರಿ ಶಿಲ್ಪಿ ಕೊಂಡಾಚಾರಿಯವರು 1953ರಲ್ಲಿ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಇವರ ಶ್ಲೋಕಗಳನ್ನು ಸಂಸ್ಕೃತಕ್ಕೆ ಅನುವಾದಿಸಿ ಪ್ರಕಟಿಸಿದವರು ವಿದ್ವಾನ್ ಹ.ಪಿ.ನಾರಾಯಣ ಶಾಸ್ತ್ರಿಯವರು. ‘ಕರ್ನಾಟಕ ಮಹಿಮ್ನಃಸ್ತೋತ್ರ’ವೇ ಭುವನೇಶ್ವರಿ ತೈಲಚಿತ್ರಕ್ಕೆ ಮೂಲ ಆಕಾರವೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಡಾ. ಸಿ.ಆರ್.ಗೋವಿಂದರಾಜು ಅವರ ‘ಕನ್ನಡಮ್ಮ’ ಕೃತಿ ದಾಖಲಿಸಿದೆ. ದೊಡ್ಡಮೇಟಿಯವರು ರಚಿಸಿದ ‘ಕರ್ನಾಟಕ ಮಹಿಮ್ನಃ ಸ್ತೋತ್ರ’ದ ಶ್ಲೋಕವನ್ನು ಅ.ನ.ಕೃಷ್ಣರಾಯರ ‘ಕನ್ನಡಮ್ಮನ ಗುಡಿ’ ಕಾದಂಬರಿಯಲ್ಲಿಯೂ ಕಾಣಬಹುದು.
ಏಕೀಕರಣದ ಹೋರಾಟದ ಸಂದರ್ಭದಲ್ಲಿ ರಚನೆಗೊಂಡ ಭುವನೇಶ್ವರಿ ತೈಲಚಿತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಆದ್ದರಿಂದ ಸರ್ಕಾರ ಅಧಿಕೃತ ಭುವನೇಶ್ವರಿ ಚಿತ್ರವೆಂದು ಘೋಷಣೆ ಮಾಡಬೇಕು. ಇಲ್ಲವಾದರೆ ಕನ್ನಡಪರ ಸಂಘಟನೆಗಳಿಂದ ಹೊರಾಟಕ್ಕೆ ಮುಂದಾಗುತ್ತೇವೆ-ವಿನಾಯಕ ಜರತಾರಿ ಕರ್ನಾಟಕ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.