ADVERTISEMENT

ಡಂಬಳ: ಈರುಳ್ಳಿ ರಾಶಿಗೆ ನುಗ್ಗಿದ ಕಾಲುವೆ ನೀರು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 4:26 IST
Last Updated 6 ಅಕ್ಟೋಬರ್ 2024, 4:26 IST
<div class="paragraphs"><p>ಡಂಬಳದಲ್ಲಿ ಶನಿವಾರ ಸ್ಥಳೀಯ ವಿಕ್ಟೋರಿಯಾ ಮಹಾರಾಣಿ ಕೆರೆಯ ನೀರು ಕಾಲುವೆ ಮೂಲಕ ಈರುಳ್ಳಿ ರಾಶಿಯ ಹತ್ತಿರ ಹರಿಯಿತು</p></div>

ಡಂಬಳದಲ್ಲಿ ಶನಿವಾರ ಸ್ಥಳೀಯ ವಿಕ್ಟೋರಿಯಾ ಮಹಾರಾಣಿ ಕೆರೆಯ ನೀರು ಕಾಲುವೆ ಮೂಲಕ ಈರುಳ್ಳಿ ರಾಶಿಯ ಹತ್ತಿರ ಹರಿಯಿತು

   

ಡಂಬಳ: ಈರುಳ್ಳಿ ರಾಶಿಗೆ ಕಾಲುವೆ ನೀರು ನುಗ್ಗಿದ ಪರಿಣಾಮ ಬೆಳೆ ರಕ್ಷಣೆಗೆ ರೈತರು ಪರದಾಡಿದ ಘಟನೆ ಡಂಬಳದಲ್ಲಿ ಶನಿವಾರ ನಡೆದಿದೆ.

ಈರುಳ್ಳಿ ಬೆಲೆ ಇಳಿಕೆಯ ಆತಂಕ, ಬೀಜ ಗೊಬ್ಬರ ಕಳೆ ತಗೆಯುವುದು ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದು ಕಟಾವು ಮಾಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳುಹಿಸಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಅನಿರೀಕ್ಷಿತವಾಗಿ ವಿಕ್ಟೋರಿಯಾ ಮಹಾರಾಣಿ ಕೆರೆಯ ನೀರು ಸಣ್ಣ ನೀರಾವರಿ ಇಲಾಖೆಯ ಕಾಲುವೆ ಮೂಲಕ ಈರುಳ್ಳಿ ರಾಶಿಗೆ ನುಗ್ಗಿದೆ.

ADVERTISEMENT

ಸ್ಥಳೀಯ ತೋಂಟದಾರ್ಯ ಮಠದ ಗದಗ ಮುಂಡರಗಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಯಲು ಜಾಗೆಯಲ್ಲಿ ಹಲವು ರೈತರು ಈರುಳ್ಳಿ ಕೊಯ್ಲು ಮಾಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳಿಸಲು ಸಿದ್ದತೆ ಮಾಡಿಕೊಂಡಿದ್ದರು.

ಸಾಲ ಮಾಡಿ ದುಬಾರಿ ಗೊಬ್ಬರ, ಕೂಲಿ ಸೇರಿ ಈರುಳ್ಳಿಗೆ ಕನಿಷ್ಠ ಪ್ರತಿ ಎಕರೆಗೆ ₹60 ಸಾವಿರ ಖರ್ಚು ಬರುತ್ತದೆ. ಕಟಾವು ಮಾಡಿ ಸ್ವಚ್ಛಗೊಳಿಸಿ ಸ್ವಲ್ಪ ಒಣಹಾಕಿ ಚೀಲಕ್ಕೆ ತುಂಬಿ ಮಾರುಕಟ್ಟೆಗೆ ಕಳಿಸುವ ಸಿದ್ದತೆ ಮಾಡಿಕೊಂಡಿದ್ದೇವು. ಆದರೆ ಈರುಳ್ಳಿ ರಾಶಿಗೆ ಕಾಲುವೆ ನೀರು ನುಗ್ಗಿದ್ದರಿಂದ ಈರುಳ್ಳಿ ತೊಯ್ದು ಹೋಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ ಎಂದು ರೈತ ಮಹಿಳೆಯರಾದ ಜಯಶ್ರೀ ಸೊರಟೂರ ಮತ್ತು ಶೋಭಾ ತಳವಾರ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ನಮ್ಮ ಕೆರೆಯಿಂದ ನೂರಾರು ರೈತರ ಸಾವಿರಾರು ಎಕರೆಗೆ ಪ್ರದೇಶ ನೀರಾವರಿಯಾಗಲಿದೆ. ನಮ್ಮ ಗ್ರಾಮದ ಕೆರೆ ಮತ್ತು ಕಾಲುವೆ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಡಂಬಳ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಗ್ರಾಮವಾಗಿದೆ. ನೀರು ಇದ್ದರೂ ಎಲ್ಲಾ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಈ ರೀತಿ ರೈತರ ಈರುಳ್ಳಿ ರಾಶಿಗೆ ನೀರು ನುಗ್ಗಿದರೆ ಯಾರು ಹೊಣೆ ಎಂದು ರೈತ ಶ್ರಿಕಾಂತ ಪ್ಯಾಟಿ ಅಸಮಾಧಾನ
ವ್ಯಕ್ತಪಡಿಸಿದರು.

ರಸ್ತೆಯಲ್ಲಿ ಮತ್ತು ಇರುಳ್ಳಿ ರಾಶಿಗೆ ನೀರು ನುಗ್ಗಿದ ಪರಿಣಾಮ ಕೆಲಕಾಲ ಗದಗ ಮುಂಡರಗಿ ಮಾರ್ಗದಲ್ಲಿ ಸಂಪರ್ಕ ಮಾಡುವ ಸಾರಿಗೆ ಬಸ್ ಮತ್ತು ವಾಹನಗಳಲ್ಲಿ ಸ್ವಲ್ಲ ಸಂಚಾರದಲ್ಲಿ ವಿಳಂಬವಾಯಿತು. ಈರುಳ್ಳಿ ರಕ್ಷಣೆ ಮಾಡಿಕೊಳ್ಳಲು ರೈತರು ಹಾಗೂ ಕೂಲಿ ಕಾರ್ಮಿಕರು ಹರಸಾಹಸ ಪಡುವುದನ್ನು ನೋಡಿ ಸಾರ್ವಜನಿಕರು ಮಮ್ಮಲ ಮರುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.