ADVERTISEMENT

ನರಗುಂದ: ಜಂತ್ಲಿ ಮನೆತನದವರು ನಿರ್ಮಿಸಿದ ಗಣೇಶ ಮೂರ್ತಿಗಳಿಗೆ ಭಾರಿ ಬೇಡಿಕೆ

ಬಸವರಾಜ ಹಲಕುರ್ಕಿ
Published 7 ಸೆಪ್ಟೆಂಬರ್ 2024, 5:54 IST
Last Updated 7 ಸೆಪ್ಟೆಂಬರ್ 2024, 5:54 IST
ನರಗುಂದದಲ್ಲಿ ಜಂತ್ಲಿ ಮನೆತನದವರು ತಯಾರಿಸಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು
ನರಗುಂದದಲ್ಲಿ ಜಂತ್ಲಿ ಮನೆತನದವರು ತಯಾರಿಸಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು   

ನರಗುಂದ: ಗಣೇಶೋತ್ಸವ ಆಚರಣೆಗೆ ಪಟ್ಟಣ ಸಿದ್ದಗೊಂಡಿದೆ. ಈಗಾಗಲೇ ಪುರಸಭೆಯು  ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದಿದ್ದು, ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪನೆಗೆ ಆದೇಶಿಸಿದೆ. ಇದರಿಂದ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಜನರು ಒಲುವು ತೋರಿಸಿದ್ದಾರೆ. ಹೀಗಾಗಿ ಈ ವರ್ಷದ ಗಣೇಶೋತ್ಸವ ಪರಿಸರ ರಕ್ಷಣೆಗೆ ಪೂರಕವಾಗಿದೆ.

ಪಟ್ಟಣದ ವಿಶ್ವಕರ್ಮ ಹಾಗೂ ಚಿತ್ರಗಾರ ಮನೆತನಗಳು ಹಲವು ವರ್ಷಗಳಿಂದ ಹುತ್ತದ ಮಣ್ಣು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಜವಳಿ ಬಜಾರದಲ್ಲಿನ ವಿಶ್ವಕರ್ಮ ಸಮಾಜದ ಜಂತ್ಲಿ ಮನೆತನದ ನಾರಾಯಣ, ಪತ್ನಿ ಅನುರಾಧ ಹಾಗೂ ಮಕ್ಕಳು ಅಚ್ಚನ್ನು ಬಳಸದೆ ಕೈಯಿಂದಲೇ ಸುಂದರವಾದ ಗಣಪತಿ ವಿಗ್ರಹಗಳನ್ನು ಮಾಡುತ್ತಾ ಬಂದಿರುವುದು ವಿಶೇಷ.

6 ತಲೆಮಾರುಗಳಿಂದ ಜತ್ಲಿ ಮನೆತನದವರು  ಗಣಪತಿ ವಿಗ್ರಹ ತಯಾರಿಸುತ್ತಾ ಬಂದಿದ್ದಾರೆ. ಆಧುನಿಕತೆ ಭರಾಟೆ ನಡುವೆಯೂ ಕುಶಲ ಕಲೆಯಿಂದ ಮೂರ್ತಿ ತಯಾರಿಸುತ್ತಿದ್ದಾರೆ. ಪಟ್ಟಣದ ಪ್ರತಿಷ್ಠಿತ 40 ಮನೆತನದವರು ಜಂತ್ಲಿ ಕುಟುಂಬದವರು ತಯಾರಿಸುವ ಗಣೇಶ ಮೂರ್ತಿ ಒಯ್ಧು ಪ್ರತಿಷ್ಠಾಪಿಸುವುದು ಪರಂಪರೆ, ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ADVERTISEMENT

ವಿವಿಧ ವಿನ್ಯಾಸದ ಮೂರ್ತಿಗಳು: ‘ಇಲ್ಲಿ ವಿವಿಧ ವಿನ್ಯಾಸದ ಮೂರ್ತಿಗಳನ್ನು ತಯಾರಿಸಲಾಗಿದೆ. ಪದ್ಮಾಸನ ಗಣೇಶ, ಗೌಡರ ಗಣೇಶ, ಕಮಲಾಸನ ಗಣೇಶ, ನಂದಿ ಗಣಪ, ಪರಿಸರ ಗಣಪ ಮತ್ತು ಸಿಂಹಾಸನ ಗಣೇಶ ಹೀಗೆ ಹಲವು ರೀತಿಯ 24 ಇಂಚು ಎತ್ತರವುಳ್ಳ ಗಣೇಶ ಮೂರ್ತಿಗಳು ಇಲ್ಲಿವೆ‌. ಹುತ್ತದ ಮಣ್ಣು, ಅರಳಿ, ಗಂಗಾಜಲ, ಗಂಗಾಮಟ್ಟಿ, ಗೋಮೂತ್ರ ಬಳಸಿ ವಿಗ್ರಹಗಳನ್ನು ತಯಾರಿಸಲಾಗಿದೆ. ಈ ಪರಿಸರಸ್ನೇಹಿ ಗಣಪತಿಗಳು ವಿಸರ್ಜನೆ ಮಾಡಿದ ಮೂರ್ನಾಲ್ಕು ಗಂಟೆಗಳಲ್ಲಿ ನೀರಲ್ಲಿ ಸಂಪೂರ್ಣ ಕರಗಿ ಹೋಗುತ್ತವೆ’ ಎನ್ನುತ್ತಾರೆ ಮೂರ್ತಿ ತಯಾರಕರಾದ ನಾರಾಯಣ ಅವರು.

ಪೂರ್ವಜರ ಕಾಲದಿಂದಲೂ ಜಂತ್ಲಿ ಮನೆತನದವರು ತಯಾರಿಸಿದ ಗಣೇಶ ವಿಗ್ರಹಗಳನ್ನೇ ತಂದು ಪೂಜಿಸುತ್ತಾ ಬಂದಿದ್ದೇವೆ. ಇವು ಪರಿಸರಸ್ನೇಹಿ ಆಗಿವೆ. ಅಲ್ಲದೆ ನೋಡಲೂ ಆಕರ್ಷಕವಾಗಿವೆ
ಚಂದ್ರಗೌಡ ಪಾಟೀಲ ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.