ADVERTISEMENT

ಮೈಕ್‌ ತೆರವಿಗೆ ಆಗ್ರಹಿಸಿ ಭಜನೆ ಮಾಡಿ ಶ್ರೀರಾಮ ಸೇನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 2:16 IST
Last Updated 9 ಜೂನ್ 2022, 2:16 IST
ಶ್ರೀರಾಮ ಸೇನೆ ಕಾರ್ಯಕರ್ತರು ಸಚಿವ ಸಿ.ಸಿ.ಪಾಟೀಲ ಅವರ ಜನಸಂಪರ್ಕ ಕಾರ್ಯಾಲಯದ ಎದುರು ಬುಧವಾರ ಭಜನೆ ಹಾಡಿ, ಪ್ರತಿಭಟನೆ ನಡೆಸಿದರು
ಶ್ರೀರಾಮ ಸೇನೆ ಕಾರ್ಯಕರ್ತರು ಸಚಿವ ಸಿ.ಸಿ.ಪಾಟೀಲ ಅವರ ಜನಸಂಪರ್ಕ ಕಾರ್ಯಾಲಯದ ಎದುರು ಬುಧವಾರ ಭಜನೆ ಹಾಡಿ, ಪ್ರತಿಭಟನೆ ನಡೆಸಿದರು   

ಗದಗ: ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಬುಧವಾರ ಎರಡನೇ ಹಂತದ ಪ್ರತಿಭಟನೆ ನಡೆಸಿದರು.

ಶ್ರೀರಾಮ ಸೇನೆ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿರುವ ಸಚಿವ ಸಿ.ಸಿ.ಪಾಟೀಲ ಅವರ ಜನಸಂಪರ್ಕ ಕಾರ್ಯಾಲಯದ ಎದುರು ಬುಧವಾರ ಭಜನೆ ಮಾಡುತ್ತ ಪ್ರತಿಭಟಿಸಿದರು.

ಮೇ 8ರಂದು ಶ್ರೀರಾಮ ಸೇನೆ ಆರಂಭಿಸಿದ ಹೋರಾಟಕ್ಕೆ ಮಣಿದ ಸರ್ಕಾರ, ಮಸೀದಿ, ಮಂದಿರ ಸೇರಿ ಚರ್ಚ್‌ಗಳಲ್ಲಿನ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು. ರಾತ್ರಿ 10ರಿಂದ ಬೆಳಗಿನ 6ರವರೆಗೆ ಧ್ವನಿವರ್ಧಕ ನಿಷೇಧ ಪಾಲನೆ ಮಾಡುವಂತೆ ಹೇಳಲಾಗಿತ್ತು. ಆದರೆ, ಈವರೆಗೂ ಅಂತಹ ಯಾವುದೇ ನಿಯಮ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಈ ವಿಚಾರದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಸಚಿವ ಸಿ.ಸಿ. ಪಾಟೀಲ ಅವರು ಅನಧಿಕೃತ ಮೈಕ್‍ಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಅನಧಿಕೃತ ಮೈಕ್‍ಗಳ ತೆರವಿಗೆ ಮುಂದಾಗಗಿದ್ದಲ್ಲಿ ಮುಂದಿನ ಏಳು ದಿನಗಳೊಳಗಾಗಿ ಶ್ರೀರಾಮ ಸೇನೆ ಕಾರ್ಯಕರ್ತರು ಜನಸಾಮಾನ್ಯರೊಂದಿಗೆ ಸೇರಿ ಖುದ್ದು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ, ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ರೋಖಡೆ, ಶಿವಯೋಗಿ ಹಿರೇಮಠ, ಮಹಾಂತೇಶ್ ಪಾಟೀಲ, ಅಶೋಕ ಭಜಂತ್ರಿ, ಸಂಜು ಚಟ್ಟಿ, ಶರಣು ಲಕ್ಕುಂಡಿ, ಭರತ್ ಹೂಗಾರ, ಮಂಜು ಪೂಜಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.