ADVERTISEMENT

ಗದಗ | ಒಳಮೀಸಲಾತಿ ವರ್ಗೀಕರಣ ತಿರಸ್ಕರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:11 IST
Last Updated 23 ಅಕ್ಟೋಬರ್ 2024, 16:11 IST
ವೈಜ್ಞಾನಿಕ ದತ್ತಾಂಶಗಳು ಲಭ್ಯವಾಗುವವರೆಗೂ ಒಳಮೀಸಲಾತಿ ವರ್ಗೀಕರಣ ಮಾಡಬಾರದು ಎಂದು ಆಗ್ರಹಿಸಿ ಅಲೆಮಾರಿ, ಬಂಜಾರ, ಭೋವಿ, ಕೊರಮ, ಕೊರಚ, ಕೊರವ ಸಮುದಾಯಗಳ ಮುಖಂಡರು ಗದಗ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು
ವೈಜ್ಞಾನಿಕ ದತ್ತಾಂಶಗಳು ಲಭ್ಯವಾಗುವವರೆಗೂ ಒಳಮೀಸಲಾತಿ ವರ್ಗೀಕರಣ ಮಾಡಬಾರದು ಎಂದು ಆಗ್ರಹಿಸಿ ಅಲೆಮಾರಿ, ಬಂಜಾರ, ಭೋವಿ, ಕೊರಮ, ಕೊರಚ, ಕೊರವ ಸಮುದಾಯಗಳ ಮುಖಂಡರು ಗದಗ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು   

ಗದಗ: ಸೂಕ್ತ ಅಧ್ಯಯನ ಮತ್ತು ಪ್ರಾತಿನಿಧ್ಯದ ಕೊರತೆ ಸಾಬೀತು ಪಡಿಸುವ ದತ್ತಾಂಶಗಳು ಲಭ್ಯವಾಗುವವರೆಗೂ ಸರ್ಕಾರ ಒಳಮೀಸಲಾತಿ ವರ್ಗೀಕರಣ ಮಾಡಬಾರದು ಎಂದು ಅಲೆಮಾರಿ, ಬಂಜಾರ, ಭೋವಿ, ಕೊರಮ, ಕೊರಚ, ಕೊರವ ಸಮುದಾಯಗಳ ಮುಖಂಡರು ಗದಗ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮುಖಂಡ ಚಂದ್ರಕಾಂತ ಚವ್ಹಾಣ ಮಾತನಾಡಿ, ‘ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ (ವರ್ಗೀಕರಣ) ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ಸಪ್ತಪೀಠ ತೀರ್ಪು ನೀಡಿದ್ದು ಸರಿಯಷ್ಟೇ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಾಗಿ ರಾಜ್ಯ ಸರ್ಕಾರ ಅವೈಜ್ಞಾನಿಕ, ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶಗಳನ್ನು ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗ್ಗೊಲೆಯಾಗಿದೆ’ ಎಂದು ಹರಿಹಾಯ್ದರು.

‘ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಮಗ್ರ ಹಾಗೂ ವಸ್ತುನಿಷ್ಟ ಅಂಕಿ-ಅಂಶಗಳ ಕೊರತೆ ಇದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳದೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಒಳಮೀಸಲಾತಿ ವರ್ಗೀಕರಣ ಕುರಿತಾಗಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದರು.

ADVERTISEMENT

‘ಸರ್ಕಾರವು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿಯ ಕುರಿತಂತೆ ಯಾವುದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಬಾರದು’ ಎಂದು ಒತ್ತಾಯಿಸಿದರು.

ವಿವಿಧ ಸಮುದಾಯಗಳ ಮುಖಂಡರಾದ ಕೆ.ಸಿ.ನಭಾಪೂರ, ಕುಬೇರಪ್ಪ ರಾಠೋಡ, ಶಿವಪ್ಪ ನಾಯ್ಕ, ಟಿ.ಡಿ.ಪೂಜಾರ, ಎನ್.ವಿ.ರಾಠೋಡ, ಕುಬೇರಪ್ಪ ಪವಾರ, ಠಾಕೂರ ಜಾಧವ, ಗೋಪಾಲ ಪೂಜಾರ, ರಾಮಪ್ಪ ಗುರಪ್ಪ ನಾಯ್ಕ, ಧನುರಾಮ ತಂಬೂರಿ, ಅನಿಲ ಕಾರಭಾರಿ, ವಿಠ್ಠಲ ತೋಟದ, ಧನಸಿಂಗ ನಾಯ್ಕ, ರಾಮಪ್ಪ ಚವ್ಹಾಣ, ಗೋವಿಂದ ಡೋಣಿ, ಬಸವರಾಜ ಭಜಂತ್ರಿ, ರಾಘವೇಂದ್ರ ಶಾಂತಗಿರಿ, ವಿಜಯ ಪೂಜಾರ, ಸುರೇಶ ಕಟ್ಟಿಮನಿ, ಲೋಕೇಶ ಕಟ್ಟಿಮನಿ ಹಾಗೂ ಅವಕಾಶ ವಂಚಿತ ಅಲೆಮಾರಿ, ಬಂಜಾರ ಭೋವಿ ಕೊರಮ- ಕೊರಚ-ಕೊರವ ಸಮುದಾಯಗಳ ಮುಖಂಡರು, ಯುವಕರು ಇದ್ದರು.

Cut-off box - ಒಳಮೀಸಲಾತಿ ವಿರೋಧಿ ಸಮಿತಿಯ ಹಕ್ಕೋತ್ತಾಯಗಳು * ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ ಸಮಗ್ರ ವಸ್ತುನಿಷ್ಟ ಅಂಕಿ- ಅಂಶಗಳ ಕೊರತೆ ಇರುವ ಅತಾರ್ಕಿಕ ದತ್ತಾಂಶಗಳ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಆಧರಿಸಿದ ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣವನ್ನು ತಿರಸ್ಕರಿಸಬೇಕು. * ಪರಿಶಿಷ್ಟ ಜಾತಿಯ ಶೈಕ್ಷಣಿಕ ಔದ್ಯೋಗಿಕ ರಾಜಕೀಯ ಮೀಸಲಾತಿ ಪ್ರಾತಿನಿಧ್ಯ ಕುರಿತಾದ ಸಮರ್ಥನೀಯ ವೈಜ್ಞಾನಿಕ ದತ್ತಾಂಶಗಳನ್ನು ಕ್ರೋಡೀಕರಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸಲು ತಜ್ಞರ ಸಮಿತಿ ರಚಿಸಬೇಕು. * ತಜ್ಞರ ಸಮಿತಿಯ ವರದಿ ಪಡೆದು 101 ಜಾತಿಗಳ ಅಹವಾಲುಗಳನ್ನು ಮುಕ್ತವಾಗಿ ಆಲಿಸಿ ಸಮುದಾಯಗಳ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಚಿಂತಕರೊಂದಿಗೆ ಸಮಾಲೋಚನೆ ನಡೆಸಿ ನಂತರ ಪರಿಶಿಷ್ಟ ಜಾತಿ ಒಳಮೀಸಲಾತಿಯ (ವರ್ಗೀಕರಣ) ತೀರ್ಮಾನ ಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.