ADVERTISEMENT

ನರಗುಂದ: ಚಿಕ್ಕನರಗುಂದ ಸ್ಮಶಾನದ ಉತಾರದಲ್ಲೂ ವಕ್ಫ್‌ ಹೆಸರು

2020ರಲ್ಲೇ ದಾಖಲೆ ಬದಲಾವಣೆಗೆ ಕೋರಿ ಗ್ರಾಮ ಪಂಚಾಯಿತಿಯಿಂದ ತಹಶೀಲ್ದಾರ್‌ಗೆ ಮನವಿ

ಬಸವರಾಜ ಹಲಕುರ್ಕಿ
Published 9 ನವೆಂಬರ್ 2024, 5:18 IST
Last Updated 9 ನವೆಂಬರ್ 2024, 5:18 IST
ನರಗುಂದ ತಾಲ್ಲೂಕಿನ ಚಿಕ್ಕನರಗುಂದದ ಸ್ಮಶಾನ ಜಾಗದ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿರುವುದು
ನರಗುಂದ ತಾಲ್ಲೂಕಿನ ಚಿಕ್ಕನರಗುಂದದ ಸ್ಮಶಾನ ಜಾಗದ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿರುವುದು   

ನರಗುಂದ: ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿರುವ ಸ್ಮಶಾನ ಜಾಗದ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದ್ದು, ಈ ಮೊದಲು ಇದ್ದಂತೆ ದಾಖಲೆಗಳನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿಕ್ಕನರಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೀಕಟ್ಟಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.113ರ 4 ಎಕರೆ 1 ಗುಂಟೆ ಜಮೀನು ಕಂದಾಯ ಇಲಾಖೆಯ ಸ್ಮಶಾನ ಭೂಮಿ ಎಂದು ದಾಖಲೆಗಳಲ್ಲಿ ನಮೂದಾಗಿತ್ತು. ಈ ಸ್ಮಶಾನದಲ್ಲಿ ಮೊದಲಿಗೆ ಮುಸ್ಲಿಮರು, ನಂತರ ಕುರುಬರು, ರೆಡ್ಡಿ, ಲಿಂಗಾಯತ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಸೇರಿದಂತೆ ಗ್ರಾಮದ ಸರ್ವ ಸಮುದಾಯದವರು ಶವಸಂಸ್ಕಾರವನ್ನು ತಮ್ಮ ಧರ್ಮ, ಸಂಪ್ರದಾಯಕ್ಕೆ ಅನುಗುಣವಾಗಿ ಇಂದಿನವರೆಗೂ ನಡೆಸುತ್ತಿದ್ದಾರೆ. ಈ ಜಾಗದಲ್ಲಿ 1975ರಿಂದಲೂ ಶವಸಂಸ್ಕಾರ ನಡೆಯುತ್ತಿದೆ.

ಆದರೆ, ಕಂದಾಯ ಇಲಾಖೆಯ ಸ್ಮಶಾನ ಜಾಗದ ಪಹಣಿಯಲ್ಲಿ 22.07.2019ರಿಂದ ಚಿಕ್ಕನರಗುಂದ ಮಕಾನ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಇದು ಗ್ರಾಮಸ್ಥರ ನಿದ್ದೆಗೆಡುವಂತೆ ಮಾಡಿದೆ.

ADVERTISEMENT

‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಶಾಸಕರ ವಿವಿಧ ಯೋಜನೆಗಳ ಅನುದಾನದಲ್ಲಿ ನಾಲ್ಕು ಎಕರೆ ವಿಸ್ತೀರ್ಣದ ಸ್ಮಶಾನದಲ್ಲಿ ಕುಡಿಯುವ ನೀರು, ಸಿ.ಸಿ.ರಸ್ತೆ, ವಿದ್ಯುತ್, ಚಿತಾಗಾರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಈ ಸ್ಮಶಾನದಲ್ಲಿ ಗ್ರಾಮದ ಪ್ರತಿಯೊಬ್ಬರೂ ಜಾತ್ಯತೀತವಾಗಿ ಶವ ಸಂಸ್ಕಾರ ನೆರವೇರಿಸಿಕೊಂಡು ಬಂದಿದ್ದೇವೆ. ಆದರೀಗ ಇಲ್ಲಿನ ಸ್ಮಶಾನಭೂಮಿಯ ಉತಾರದಲ್ಲಿ ವಕ್ಫ್‌ ಹೆಸರು ನಮೂದಾಗಿರುವುದು ಗೊಂದಲ ಮೂಡಿಸಿದೆ’ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.

ನರಗುಂದ ಕಂದಾಯ ಇಲಾಖೆಯಲ್ಲಿ 1975ರಿಂದ ಈವರೆಗಿನ ‘ಡ’ ಉತಾರ ಮಾಹಿತಿ ಕೇಳಿದರೆ. ‘ಅವೆಲ್ಲವೂ 1980ರ ರೈತ ಬಂಡಾಯದ ಸಂದರ್ಭದಲ್ಲಿ ಸುಟ್ಟುಕರಕಲಾಗಿವೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಮಶಾನ ಭೂಮಿಯಲ್ಲಿ ದಾಖಲಾಗಿರುವ ವಕ್ಫ್‌ ಹೆಸರನ್ನು ತೆಗೆಸಲು ತಕ್ಷಣವೇ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಿಕ್ಕನರಗುಂದ ಗ್ರಾಮದ ಸ್ಮಶಾನ ಜಾಗ ‘ಮಸನವಟ’ ಎಂಬ ಹೆಸರಿನಲ್ಲಿಯೇ ನಮೂದಾಗಬೇಕು. ವಕ್ಫ್‌ ಹೆಸರು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ 2020ರಲ್ಲಿಯೇ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿತ್ತು.

ನರಗುಂದ ತಹಶೀಲ್ದಾರ್‌ ಗ್ರಾಮ ಪಂಚಾಯಿತಿಯ ಮನವಿ ಪತ್ರಕ್ಕೆ ಮರು ಉತ್ತರ ನೀಡಿದ್ದು ಹೀಗೆ: ‘ಚಿಕ್ಕನರಗುಂದ ಗ್ರಾಮದ ವ್ಯಾಪ್ತಿಗೆ ಬರುವ ರಿ.ಸ.ನಂ. 113ರ ಪಹಣಿಯನ್ನು ಮಸಣವಟ ಎಂದು ತಿದ್ದುಪಡಿ ಮಾಡಲು ಕೋರಿದ್ದು, ಅದಕ್ಕೆ ಸಂಬಂಧಿಸಿ ನಮ್ಮ ಕಾರ್ಯಾಲಯದಲ್ಲಿ ಲಭ್ಯವಿದ್ದ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿ ಜಿಲ್ಲಾ ವಕ್ಫ್‌ ಅಧಿಕಾರಿ ಮತ್ತು 2018ರ ಆ.20ರಂದು ಜಿಲ್ಲಾಧಿಕಾರಿ ಬರೆದ ಪತ್ರ ಮತ್ತು ಆದೇಶದಂತೆ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಆದಕಾರಣ, ನಮ್ಮ ಹಂತದಲ್ಲಿ ತಿದ್ದುಪಡಿ ಮಾಡಲು ಅವಕಾಶ ಇಲ್ಲ’ ಎಂದು ತಿಳಿಸಿದ್ದರು.

‘2019ರಲ್ಲಿ ಸರ್ಕಾರ ಗೆಜೆಟ್ ಅಧಿಸೂಚನೆ ಮಾಡಿದ್ದರಿಂದ ತಾಲ್ಲೂಕಿನ ಕೆಲವು ಆಸ್ತಿಗಳ ಪಹಣಿಯಲ್ಲಿ ವಕ್ಫ್‌ ಎಂದು ನಮೂದಾಗಿದೆ. ಚಿಕ್ಕನರಗುಂದ ಗ್ರಾಮದ 4 ಎಕರೆ 1 ಗುಂಟೆ ಸ್ಮಶಾನದ ಪಹಣಿಯಲ್ಲಿ ವಕ್ಫ್‌ ಎಂದು ನಮೂದಾಗಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು’ ಎಂದು ತಹಶೀಲ್ದಾರ್‌ ಶ್ರೀಶೈಲ ತಳವಾರ ತಿಳಿಸಿದ್ದಾರೆ.

ವಕ್ಫ್‌ ಹೆಸರು ತೆಗೆಯುವಂತೆ ಮನವಿ

‘ಪ್ರತಿ ವರ್ಷ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಇಲ್ಲಿಯ ಸ್ಮಶಾನದಲ್ಲಿ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಪ್ರಸ್ತುತ ವಕ್ಫ್‌ ವಿವಾದದಿಂದ ಎಚ್ಚೆತ್ತುಕೊಂಡಿರುವ ಚಿಕ್ಕನರಗುಂದ ಗ್ರಾಮ ಪಂಚಾಯಿತಿ ಗ್ರಾಮದ ಸ್ಮಶಾನದ ಚಾಲ್ತಿ ಉತಾರ ತೆಗೆಸಿ ನೋಡಿದಾಗ ವಕ್ಫ್‌ ಹೆಸರು ನಮೂದಾಗಿರುವುದು ಬೆಳಕಿಗೆ ಬಂದಿದೆ. ಇದನ್ನು ತೆಗೆದು ಹಾಕುವಂತೆ ತಹಶೀಲ್ದಾರ್‌ಗೆ ಮನವಿ ಮಾಡಲಾಗಿದೆ’ ಎಂದು ಚಿಕ್ಕನರಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮುತ್ತು ರಾಯರಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಚಿಕ್ಕ ನರಗುಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಹಶೀಲ್ದಾರ್ ಮರು ಉತ್ತರ ನೀಡಿದ ಪ್ರತಿ
ಚಿಕ್ಕ ನರಗುಂದ ಗ್ರಾಮ ಪಂಚಾಯಿತಿ ಪಿಡಿಒ ಸ್ಮಶಾನ ಜಾಗದಲ್ಲಿ ವಕ್ಫ್‌ ಎಂದು ನಮೂದಾಗಿರುವುದನ್ನು ಬದಲಾಯಿಸುವಂತೆ ಕೋರಿ ತಹಶೀಲ್ದಾರ್‌ಗೆ 2020ರಲ್ಲಿ ಸಲ್ಲಿಸಿದ ಮನವಿ ಪ್ರತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.