ADVERTISEMENT

ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ: ಡಾ.ಪ್ಯಾರಾಲಿ ನೂರಾನಿ

​ಪ್ರಜಾವಾಣಿ ವಾರ್ತೆ
Published 29 ಮೇ 2024, 14:29 IST
Last Updated 29 ಮೇ 2024, 14:29 IST
ಗದಗ ನಗರದ ವಿದ್ಯಾದಾನ ಸಮಿತಿಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಡಾ.ಪ್ಯಾರಾಲಿ ನೂರಾನಿ ಉದ್ಘಾಟಿಸಿದರು
ಗದಗ ನಗರದ ವಿದ್ಯಾದಾನ ಸಮಿತಿಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಡಾ.ಪ್ಯಾರಾಲಿ ನೂರಾನಿ ಉದ್ಘಾಟಿಸಿದರು   

ಗದಗ: ನಗರದ ಎಂ.ಬಿ.ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಸಹಯೋಗ ಹಾಗೂ ನಗರದ ಐಎಂಎ ರಕ್ತಭಂಡಾರದ ಸಹಯೋಗದಲ್ಲಿ ಬಿ.ಇಡಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.

ಐಎಂಎ ಮಾಜಿ ಅಧ್ಯಕ್ಷ ಡಾ.ಪ್ಯಾರಾಲಿ ನೂರಾನಿ ಹಾಗೂ ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಕಾರ್ಯಕ್ರಮ ಉದ್ಘಾಟಿಸಿದರು.

ಡಾ.ಪ್ಯಾರಾಲಿ ನೂರಾನಿ ಮಾತನಾಡಿ, ‘ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಆತ್ಮತೃಪ್ತಿ ಸಿಗುತ್ತದೆ. ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 40  ದಶಲಕ್ಷಕ್ಕಿಂತ ಹೆಚ್ಚು ಯೂನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೇ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ‘ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿವೆ. ಜನ ಜಾಗೃತಿ ಅಭಿಯಾನ ಮೂಲಕ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ನಮ್ಮ ಹಿರಿಯರು ಹೇಳಿದಂತೆ ರಕ್ತ ಕೊಟ್ಟು ನೋಡು, ಸಂಬಂಧ ಕಟ್ಟಿ ನೋಡು ಎಂಬಂತೆ ನಾವು ರಕ್ತದಾನ ಮಾಡಬೇಕು’ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಗಂಗೂಬಾಯಿ ಪವಾರ ಅವರು ತಾವು ಮೊದಲು ರಕ್ತದಾನ ಮಾಡಿ ಪ್ರಶಿಕ್ಷಣಾರ್ಥಿಗಳಿಗೆ ಮಾದರಿಯಾದರು. ನಂತರ ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ ಹರ್ತಿ, ವಿಜಯ ಲಂಬಾಣಿ, ವಿನೋದ ಕುಮಾರ ಪೂಜಾರಿ, ಮಲ್ಲಿಕಾರ್ಜುನ ಉದ್ಧಾರ, ಜಯಪ್ರಕಾಶ ಹಿರೇಮಠ, ವಿಶ್ವ ಪ್ರಸಾದ, ಭಾರತಿ ಬಂಡಿ ರಕ್ತದಾನ ಮಾಡಿದರು. 

ಪ್ರತೀಕ್‌ ಎಸ್. ಹುಯಿಲಗೋಳ, ಮುಖ್ಯೋಪಾಧ್ಯಾಯ ಎಂ.ಆರ್.ಡೊಳ್ಳಿನ, ವಾದಿರಾಜ ಕಾತೊಟೆ, ಐಎಂಎ ರಕ್ತ ಭಂಡಾರ ಕೇಂದ್ರದ ಸಿಬ್ಬಂದಿ ವರ್ಗದವರು, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.