ಮುಂಡರಗಿ: ಪ್ರೇಕ್ಷಕರ ಕೊರತೆ, ಆರ್ಥಿಕ ಮುಗ್ಗಟ್ಟು, ಬದಲಾದ ಪ್ರೇಕ್ಷಕರ ಅಭಿರುಚಿ, ಪ್ರೋತ್ಸಾಹದ ಕೊರತೆ ಮೊದಲಾದ ಕಾರಣಗಳಿಂದ ವೃತ್ತಿ ರಂಗಭೂಮಿಯು ಹಲವು ವರ್ಷಗಳಿಂದ ಕುಂಟುತ್ತಾ ಸಾಗಿದೆ.
ಬೆಳ್ಳಿ ಪರದೆ, ಕಂಪ್ಯೂಟರ್, ಮೊಬೈಲ್ ಮೊದಲಾದ ಆಧುನಿಕ ಮಾಧ್ಯಮಗಳೊಂದಿಗೆ ಸೆಣಸಾಡುತ್ತಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ವೃತ್ತಿ ರಂಗಭೂಮಿಯ ಹೆಗ್ಗಳಿಕೆಯಾಗಿದೆ. ಹೀಗೆ ಹಲವಾರು ಸಮಸ್ಯೆಗಳ ನಡುವೆ ಪಟ್ಟಣದ ಹೊರ ವಲಯದ ಹೆಸರೂರು ರಸ್ತೆಯ ಬಳಿ ಬೀಡು ಬಿಟ್ಟಿದ್ದ ಶ್ರೀಕುಮಾರ ವಿಜಯ ವೃತ್ತಿ ನಾಟಕ ಮಂದಿರವು ಭಾರಿ ಮಳೆ, ಗಾಳಿಗಳ ಹೊಡೆತಕ್ಕೆ ಸಿಕ್ಕು ಧರೆಗುರುಳಿದೆ.
ಈ ಕಂಪನಿಯು ‘ತವರಿಗೆ ಬಾ ತಂಗಿ’, ‘ಕಿವುಡ ಮಾಡಿದ ಕಿತಾಪತಿ’, ‘ತವರು ಬಿಟ್ಟ ತಂಗಿ’, ‘ಸಂದಿಮನಿ ಸಂಗವ್ವ’, ‘ಚೋರ ಗುರು, ಚಾಂಡಾಲ ಶಿಷ್ಯ’, ‘ಅಕ್ಕ ಸೂಪರ್, ತಂಗಿ ಬಂಪರ್’ ಮೊದಲಾದ ಸದಭಿರುಚಿಯ ನಾಟಕಗಳ ಮೂಲಕ ಕಂಪನಿಯು ಎಲ್ಲ ವರ್ಗದ ಪ್ರೇಕ್ಷಕರ ಮನ ಗೆದ್ದಿತ್ತು.
ಶ್ರೀಕುಮಾರ ವಿಜಯ ನಾಟಕ ಕಂಪನಿಯು ಹೆಸರಾಂತ ಕಲಾವಿದರನ್ನು ಒಳಗೊಂಡಿದ್ದು, ಪ್ರತಿಯೊಂದು ಪ್ರದರ್ಶನದಲ್ಲಿಯೂ ಕಲಾವಿದರು ಪ್ರೇಕ್ಷಕರಿಗೆ ನವರಸಗಳ ರಸದೌತಣ ನೀಡುತ್ತಿದ್ದಾರೆ. ಖಾಸಗಿ ವಾಹಿನಿಯ ಮೂಲಕ ಖ್ಯಾತರಾಗಿರುವ ಹಿರಿಯ ಕಲಾವಿದ ದಯಾನಂದ ಬೀಳಗಿ, ಶ್ವೇತಾ ಬೀಳಗಿ ಕಂಪನಿಯ ಕಾಯಂ ಕಲಾವಿದರಾದ ಮಂಜುನಾಥ ಜಾಲಿಹಾಳ, ಅಪರಂಜಮ್ಮ ಜಾಲಿಹಾಳ, ವಿಜಯಕುಮಾರ ಜಾಲಿಹಾಳ, ಮಹಾದೇವ ಜಾಲಿಹಾಳ, ಪೃಥ್ವಿರಾಜ ಬದಾಮಿ, ಸುನೀಲ ಬಿಜಾಪೂರ, ಕಲಾವತಿ ಬಿಜಾಪೂರ, ಬಸವರಾಜ ಯಳವಾರ, ಸಂತೋಷ ಜಾಲಿಹಾಳ, ಶ್ವೇತಾ ಶಿವಮೊಗ್ಗ ಮೊದಲಾದ ಕಲಾವಿದರು ಪ್ರೇಕ್ಷಕರ ಮನಗೆದ್ದಿದ್ದಾರೆ. ಸಂಗೀತಗಾರ ರಘುವೀರ ಬನಹಟ್ಟಿ ಹಾಗೂ ನೂತನಕುಮಾರ ರಾಯಚೂರ ಅವರ ಉತ್ತಮ ಸಂಗೀತ ಕೇಳುಗರಿಗೆ ಮುದ ನೀಡುತ್ತಲಿದೆ.
ಅ.11ರಂದು ಸಂಜೆ ಬೀಸಿದ ಭಾರಿ ಗಾಳಿಗೆ ನಾಟಕ ಮಂದಿರವು ಸಂಪೂರ್ಣವಾಗಿ ಧರೆಗುರುಳಿದ್ದು, ಕಂಪನಿ ಮಾಲೀಕರು ಹಾಗೂ ಅದರಿಂದಲೇ ಬದುಕು ಕಟ್ಟಿಕೊಂಡಿದ್ದ ಹಲವಾರು ಕಲಾವಿದರ ಬದುಕು ಬೀದಿಗೆ ಬೀಳುವಂತಾಗಿದೆ. ನಾಟಕ ಮಂದಿರವು ಮುಗುಚಿ ಬಿದ್ದಿದ್ದರಿಂದ ರಸ್ತೆ, ಉದ್ಯಾನ, ಮನೆ ಮೊದಲಾದವುಗಳ ಪರದೆ ಸೇರಿದಂತೆ ಸುಮಾರು ₹4 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಒಳಗೊಂಡ ರಂಗಸಜ್ಜಿಕೆಯು ಸಂಪೂರ್ಣವಾಗಿ ನಾಶವಾಗಿದೆ.
ನಾಟಕ ಮಂದಿರದೊಳಗಿದ್ದ ಸುಮಾರು 500 ಪ್ಲಾಸ್ಟಿಕ್ ಕುರ್ಚಿಗಳು, ₹1 ಲಕ್ಷ ಮೌಲ್ಯದ ಅಲಂಕಾರಿಕ ವಿದ್ಯುತ್ ದೀಪಗಳು, ₹1 ಲಕ್ಷ ಮೌಲ್ಯದ ಧ್ವನಿವರ್ಧಕ ಪರಿಕರಗಳು, ಮೈಕ್ ಸೆಟ್, ನಾಟಕ ಮಂದಿರದ ಹೊರಗೆ ತೂಗು ಹಾಕಿದ್ದ ಬೃಹತ್ ಗಾತ್ರದ ಬ್ಯಾನರ್‌ಗಳು, ಪರದೆಗಳು, ಪ್ರಸಾಧನ ಸಲಕರಣೆಗಳು, ಕಲಾವಿದರ ಬಟ್ಟೆ, ಬರೆಗಳು, ಪಾತ್ರೆಗಳು, ಆಹಾರ ಸಾಮಗ್ರಿಗಳು ಹಾಳಾಗಿ ಹೋಗಿವೆ.
ನಾಟಕ ಮಂದಿರದೊಳಗೆ ನಿಲ್ಲಿಸಿದ್ದ ಒಂದು ಕಾರು ಹಾಗೂ ಎರಡು ಬೈಕುಗಳು ಜಖಂಗೊಂಡಿವೆ. ಮಂದಿರ ನಿರ್ಮಾಣಕ್ಕೆ ಬಳಸಲಾಗಿದ್ದ ತಗಡುಗಳು, ಕಟ್ಟಿಗೆಯ ಕಂಬಗಳು, ಬಿದಿರಿನ ಡಂಬುಗಳು ಭಾಗಶಃ ಮುರಿದಿವೆ. ನಾಟಕ ಮಂದಿರ ನೆಲಕಚ್ಚಿದ್ದರಿಂದ ಸುಮಾರು ₹10 ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ನಾಟಕ ಪ್ರದರ್ಶನಗಳಿಂದ ಬರುವ ಅಲ್ಪ ಆದಾಯವನ್ನೇ ನಂಬಿದ್ದ ಕಂಪನಿಯ ಮಾಲೀಕರು ಹಾಗೂ ಕಲಾವಿದರು ಬೃಹತ್ ಮೊತ್ತದ ಹಾನಿಯನ್ನು ಸರಿದೂಗಿಸಲು ಈಗ ಹರಸಾಹಸ ಪಡುತ್ತಿದ್ದಾರೆ.
ಸಂಕಷ್ಟಗಳ ನಡುವೆಯೂ ರಂಗಭೂಮಿಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿರುವ, ನಾಟಕಾಭಿಮಾನಿಗಳನ್ನು ರಂಜಿಸುತ್ತಿರುವ ನಾಟಕ ಕಂಪನಿಗಳ ಉಳಿವಿಗೆ ಸರ್ಕಾರ ಕೈಜೋಡಿಸಬೇಕು ಎಂಬುದು ರಂಗಪ್ರೇಮಿಗಳ ಆಗ್ರಹವಾಗಿದೆ.
ಸರ್ಕಾರ ನೆರವು ನೀಡಲಿ ನಾಟಕ ಕಂಪನಿಗಳು ಹಾಗೂ ಕಲಾವಿದರು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಪ್ರಾಕೃತಿಕ ವಿಕೋಪಗಳಿಂದ ಹಾನಿಗೊಳಗಾದ ನಾಟಕ ಕಂಪನಿಗಳಿಗೆ ಸರ್ಕಾರ ನೆರವು ನೀಡಬೇಕು. ಆ ಮೂಲಕ ರಂಗಭೂಮಿಗೆ ಚೈತನ್ಯ ನೀಡಲು ಮುಂದಾಗಬೇಕು.
–ರಾಮಕೃಷ್ಣ ದೊಡ್ಡಮನಿ ರಂಗ ಕಲಾವಿದ ಹಾಗೂ ಮಾಜಿ ಶಾಸಕ
ನಾಟಕ ನೋಡಿ ಕಲಾವಿದರಿಗೆ ನೆರವಾಗಿ ನಾಟಕ ಮಂದಿರ ಧರೆಗುರುಳಿರುವುದರಿಂದ ಕಂಪನಿಯ ಮಾಲೀಕರು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಮುಂಬರುವ ದಿನಗಳಲ್ಲಿ ನಾಟಕಗಳನ್ನು ನೋಡುವ ಮೂಲಕ ನಾವೆಲ್ಲ ಬಡ ಕಲಾವಿದರ ನೆರವಿಗೆ ಕೈಜೋಡಿಸಬೇಕು. ನಾಟಕ ನೋಡುವ ಮೂಲಕ ಅವರ ಹೊರೆ ಕಡಿಮೆ ಮಾಡಬೇಕು.
–ವೈ.ಎನ್.ಗೌಡರ ರಂಗ ಕಲಾವಿದ ಹಾಗೂ ಹೋರಾಟಗಾರ ಮುಂಡರಗಿ
ಮುಂಡರಗಿ ಜನ ಸಹೃದಯರು ನಾಟಕ ಮಂದಿರ ನೆಲಕ್ಕುರುಳಿರುವುದರಿಂದ ಸಾಕಷ್ಟು ಹಾನಿ ಸಂಭವಿಸಿದ್ದು ಕಲಾವಿದರ ಬದುಕು ಬೀದಿಗೆ ಬೀಳುವಂತಾಗಿದೆ. ಸಂಕಷ್ಟ ಸಮಯದಲ್ಲಿ ಇಲ್ಲಿಯ ಪ್ರೇಕ್ಷಕರು ಹಾಗೂ ಅಭಿಮಾನಿಗಳು ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ.
–ಮಂಜುನಾಥ ಜಾಲಿಹಾಳ ನಾಟಕ ಕಂಪನಿ ಮಾಲೀಕ
ಪ್ರಾಕೃತಿ ವಿಕೋಪಗಳಿಂದ ಸಂಕಷ್ಟ ಆಧುನಿಕ ಮನರಂಜನಾ ಮಾಧ್ಯಮಗಳ ಭರಾಟೆಯಲ್ಲಿ ನಾಟಕಗಳು ಹಿನ್ನಡೆ ಅನುಭವಿಸುತ್ತಲಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಮಳೆ ಗಾಳಿಯಂತಹ ಪ್ರಕೃತಿ ವಿಕೋಪಗಳು ಸಂಭವಿಸಿದರೆ ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ನಾವೆಲ್ಲ ನಾಟಕಗಳನ್ನು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ.
–ಮಂಜುನಾಥ ಇಟಗಿ ಸಮಾಜ ಸೇವಕ ಮುಂಡರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.