ADVERTISEMENT

ಬರ ಪರಿಹಾರ: ಎಲ್ಲ ರೈತರಿಗೂ ಸಿಗಲಿ– ಆರ್.ಎಸ್. ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮೇ 2024, 14:44 IST
Last Updated 20 ಮೇ 2024, 14:44 IST
ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ಎಲ್ಲ ರೈತರಿಗೂ ಸರಿಯಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ರೋಣ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಎಚ್.ಕೆ. ಪಾಟೀಲ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ಎಲ್ಲ ರೈತರಿಗೂ ಸರಿಯಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ರೋಣ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಎಚ್.ಕೆ. ಪಾಟೀಲ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.   

ಗದಗ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ಎಲ್ಲ ರೈತರಿಗೂ ಸರಿಯಾಗಿ ಹಂಚಿಕೆ ಮಾಡಬೇಕು ಎಂದು ರೋಣ ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ.

ಧಾರವಾಡ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಐ.ಎಸ್. ಪಾಟೀಲ ನೇತೃತ್ವದಲ್ಲಿ ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ ಅವರನ್ನೊಳಗೊಂಡ ನಿಯೋಗವು ಜಿಲ್ಲಾಧಿಕಾರಿ ಮೂಲಕ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರಿಗೂ ಮನವಿ ನೀಡಿದರು.

ಕಾಂಗ್ರೆಸ್ ಮುಖಂಡ ಆರ್.ಎಸ್. ಪಾಟೀಲ ಮಾತನಾಡಿ, ‘ರಾಜ್ಯದ ಪ್ರತಿಯೊಬ್ಬ ರೈತನೂ ಬರದಿಂದ ತತ್ತರಿಸಿದ್ದಾನೆ. ಬರದ ಕಾರಣಕ್ಕೆ ಕೆಲವು ರೈತರು ಬಿತ್ತನೆ ಮಾಡಿಲ್ಲ. ಹೀಗಾಗಿ ಅವರನ್ನು ಅನರ್ಹ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಬಿತ್ತನೆ ಮಾಡಲಿ, ಮಾಡದಿರಲಿ, ಜಮೀನು ಇರುವ ಪ್ರತಿಯೊಬ್ಬ ರೈತನಿಗೂ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಈ ಬರಗಾಲದಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮತ್ತು ಪ್ರತಿಯೊಂದು ಗ್ರಾಮಗಳಲ್ಲಿಯೂ ದನಕರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ರೈತರನ್ನು ವಿಂಗಡಣೆ ಮಾಡುವುದು ಸರಿಯಲ್ಲ. ಅದಕ್ಕಾಗಿ ಸರ್ಕಾರವು ಎಲ್ಲಾ ರೈತರನ್ನು ಸಮಾನ ದೃಷ್ಟಿಯಿಂದ ಕಂಡು ಬರದಿಂದ ತತ್ತರಿಸಿರುವ ಎಲ್ಲಾ ರೈತರಿಗೂ ಪರಿಹಾರದ ಹಣ ವಿತರಿಸಬೇಕು ಎಂದು ಆಗ್ರಹಿಸಿದರು.

‘ಇದು ಕಾಂಗ್ರೆಸ್ ಸರ್ಕಾರದ ವಿರುದ್ಧದ ಪ್ರತಿಭಟನೆ ಅಲ್ಲ. ರಾಜ್ಯ ಸರ್ಕಾರ ರೈತರ ಪರವಾಗಿಯೇ ಇದೆ. ರೈತರಿಗೆ ಬರ ಪರಿಹಾರ ಕೊಡಬೇಕು ಎನ್ನುವ ಕಾರಣಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ಕೇಂದ್ರದಿಂದ ಪರಿಹಾರ ಪಡೆದುಕೊಂಡಿದೆ. ಆ ಹಣ ಎಲ್ಲ ರೈತರಿಗೂ ಸಿಗಬೇಕು ಎನ್ನುವ ಉದ್ದೇಶದೊಂದಿಗೆ ಮನವಿ ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಜಿಲ್ಲೆಯ ಅರ್ಹ ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ ಎನ್ನುವುದು ರೈತರ ಅಹವಾಲು. ಸದ್ಯ ಜಿಲ್ಲೆಯ 1.13 ಲಕ್ಷ ರೈತರಿಗೆ ಬರ ಪರಿಹಾರ ಸಿಕ್ಕಿದೆ. 22,300 ರೈತರಿಗೆ ಅನರ್ಹರು ಎಂದು ಗುರುತಿಸಿದ್ದಾರೆ. ಈ ಪೈಕಿ 9,800 ರೈತರು ಜಮೀನು ಪಡಾ ಬಿಟ್ಟಿರುವ ಕಾರಣಕ್ಕೆ ಅನರ್ಹ ಮಾಡಿದ್ದಾರೆ. ಅಷ್ಟು ದೊಡ್ಡ ಸಂಖ್ಯೆಯ ರೈತರು ಜಮೀನು ಖಾಲಿ ಬಿಡಲು ಸಾಧ್ಯವಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೂ ತಂದಿದ್ದೇನೆ. ಅರ್ಹ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವೆ’ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡ ಎಚ್.ಎಸ್. ಸೋಂಪೂರ, ರೋಣ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು, ರೋಣ ಭಾಗದ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.