ಗಜೇಂದ್ರಗಡ (ಗದಗ): ಅಳಿವಿನಂಚಿನಲ್ಲಿರುವ ಅಪರೂಪದ ನೀಳ ಕೊಕ್ಕಿನ ರಣಹದ್ದುಗಳು (Long-billed vulture) ಮೂರು ದಶಕಗಳ ಬಳಿಕ ಇಲ್ಲಿನ ಗಜೇಂದ್ರಗಡ, ಕಾಲಕಾಲೇಶ್ವರ, ನಾಗೇಂದ್ರಗಡ ಬೆಟ್ಟಗಳ ಸಾಲಿನಲ್ಲಿ ಕಾಣಿಸಿಕೊಂಡಿವೆ.
ಜೀವ ವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾದ ಕೇಶವ ಮೂರ್ತಿ, ಕಾರ್ತಿಕ ಎನ್.ಜೆ, ಶಿರಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳಾದ ನಾಗರಾಜ, ಮಂಜುನಾಥ ಅವರು ಇತ್ತೀಚೆಗೆ ಗಜೇಂದ್ರಗಡ ಸುತ್ತಮುತ್ತಲಿನ ಬೆಟ್ಟಗಳ ಸಾಲಿನಲ್ಲಿ ಸಮೀಕ್ಷೆ ನಡೆಸಿ, ಉದ್ದ ಕೊಕ್ಕಿನ ರಣಹದ್ದುಗಳ 6 ಗೂಡುಗಳನ್ನು ಪತ್ತೆ ಹಚ್ಚಿದ್ದಾರೆ.
ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟವು ಉದ್ದ ಕೊಕ್ಕಿನ ರಣಹದ್ದುಗಳ ಆವಾಸ ಸ್ಥಾನವಾಗಿದೆ. ಆ ಬೆಟ್ಟದ ಸುತ್ತಲಿನ 856 ಎಕರೆ ಪ್ರದೇಶವನ್ನು ಸರ್ಕಾರ 2012ರಲ್ಲಿ ದೇಶದ ಮೊದಲ ರಣಹದ್ದು ಸಂರಕ್ಷಣಾ ಧಾಮವನ್ನಾಗಿ ಘೋಷಣೆ ಮಾಡಿದೆ. ಇದೀಗ ಗಜೇಂದ್ರಗಡ ಸುತ್ತಮುತ್ತಲಿನ ಬೆಟ್ಟದಲ್ಲೂ ರಣಹದ್ದುಗಳು ಕಾಣಿಸಿ
ಕೊಂಡಿರುವುದು, ಇವುಗಳ ಕುರಿತು ಅಧ್ಯಯನ ನಡೆಸುತ್ತಿರುವವರಲ್ಲಿ ಕುತೂಹಲ ಮೂಡಿಸಿದೆ. ಮೂರು ದಶಕಗಳ ಹಿಂದೆ ಗಜೇಂದ್ರಗಡ ಸುತ್ತಮುತ್ತಲಿನ ಗುಡ್ಡಗಳ ಶ್ರೇಣಿಯಲ್ಲಿ ರಣಹದ್ದುಗಳು ಸಾಮಾನ್ಯವಾಗಿದ್ದವು. ಆದರೆ, 1990ರ ದಶಕದ ನಂತರ ಇವು ಕಣ್ಮರೆಯಾಗಿದ್ದವು. ಇದೀಗ ಮತ್ತೆ ಇವು ಪ್ರತ್ಯಕ್ಷವಾಗಿದ್ದು, ಗೂಡುಕಟ್ಟಲು ಸಿದ್ಧತೆ ನಡೆಸಿರುವುದನ್ನು ಈ ತಂಡ ಗುರುತಿಸಿದೆ.
‘ರಣಹದ್ದುಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಮ್ಮೆ ಗೂಡು ಕಟ್ಟಿದ ಸ್ಥಳ ಸುರಕ್ಷಿತ ಅನಿಸಿದರೆ, ಅವು ಪ್ರತಿವರ್ಷ ಸಂತಾನೋತ್ಪತ್ತಿಗೆ ಮರಳಿ ಬರುತ್ತವೆ. ಉದ್ದಕೊಕ್ಕಿನ ರಣಹದ್ದುಗಳು ನವೆಂಬರ್‌ನಿಂದ ಮಾರ್ಚ್‌ವರೆಗೆ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ದೇಶದಲ್ಲಿ ರಣಹದ್ದುಗಳ ಸಂತತಿ ಕ್ಷೀಣಿಸುತ್ತಿದ್ದು, ಬಿಳಿಬೆನ್ನಿನ ರಣಹದ್ದು (Gyps vultures White-backed), ನೀಳ ಕೊಕ್ಕಿನ ರಣಹದ್ದು (Long-billed vulture) ಹಾಗೂ ಸಣ್ಣ ಕೊಕ್ಕಿನ ರಣಹದ್ದು (Slender-billed vulture) ಅಳಿವಿನಂಚಿನಲ್ಲಿ ಇವೆ’ ಎನ್ನುತ್ತಾರೆ ಸಂಶೋಧಕ ಮಂಜುನಾಥ ನಾಯಕ.
‘ಗಜೇಂದ್ರಗಡ, ನಾಗೇಂದ್ರಗಡ, ಕಾಲಕಾಲೇಶ್ವರ ಬೆಟ್ಟ, ಶಾಂತೇಶ್ವರ ಬೆಟ್ಟಗಳು ರಣಹದ್ದು ಸೇರಿದಂತೆ ಇತರೆ ಸಾಮಾನ್ಯ ಹದ್ದುಗಳಿಗೂ ನೈಸರ್ಗಿಕ ಆವಾಸ ತಾಣಗಳಾಗಿದೆ. ಇಲ್ಲಿ ತೋಳ, ಕತ್ತೆ ಕಿರುಬ (ಹೈನಾ), ಅಡವಿ ಬೆಕ್ಕು, ಉಡಗಳು ಇದ್ದು, ಅರಣ್ಯ ಇಲಾಖೆ ಇವುಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಅಳಿವಿನಂಚಿಗೆ ಹೇಗೆ?
ಸತ್ತ ಪ್ರಾಣಿಗಳ ಮಾಂಸ ತಿನ್ನುವುದು ರಣಹದ್ದುಗಳ ಆಹಾರ ಕ್ರಮ. ಜಾನುವಾರುಗಳಿಗೆ ನೋವು ನಿವಾರಕ ಇಂಜೆಕ್ಷನ್ ಅಗಿ ಡೈಕ್ಲೋಫಿನಾಕ್ ಔಷಧವನ್ನು ನೀಡಲಾಗುತ್ತಿತ್ತು. ಈ ಇಂಜೆಕ್ಷನ್ ಪಡೆದ ಜಾನುವಾರುಗಳು ಮೃತಪಟ್ಟ ಸಂದರ್ಭ ಅವುಗಳನ್ನು ರಣಹದ್ದುಗಳು ತಿನ್ನುತ್ತಿದ್ದವು. ಆದರೆ ಡೈಕ್ಲೋಫಿನಾಕ್‌ನಿಂದಾಗಿ ಹದ್ದುಗಳ ಕಿಡ್ನಿ ಸೇರಿದಂತೆ ಹಲವು ಅಂಗಗಳು ಹಾಳಾಗಿ, ಬಹು ಅಂಗಾಂಗ ವೈಫಲ್ಯದಿಂದ ಅವು ಮೃತಪಡುತ್ತಿದ್ದವು. ಹೀಗಾಗಿ ಇವುಗಳ ಸಂತತಿ ಕ್ಷೀಣಿಸಿದ್ದವು. ಈ ಔಷಧ ಬಳಕೆ ನಿಷೇಧಿಸಿದ ಬಳಿಕ, ಇದೀಗ ಮತ್ತೆ ರಣಹದ್ದುಗಳು ಕಂಡುಬರುತ್ತಿವೆ.
***
ರಾಮನಗರ ಜಿಲ್ಲೆ ರಾಮದೇವರ ಬೆಟ್ಟದಂತೆ ಈ ಭಾಗದಲ್ಲೂ ರಣಹದ್ದುಗಳ ವಾಸಕ್ಕೆ ಪೂರಕ ವಾತಾವರಣ ಇದೆ. ರಣಹದ್ದುಗಳ ಸಂತತಿ ಉಳಿಸಿ ಸಂರಕ್ಷಿಸುವ ಅಗತ್ಯವಿದೆ
-ಮಂಜುನಾಥ ನಾಯಕ, ಜೀವವೈವಿಧ್ಯ ಸಂಶೋಧಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.