ಗದಗ: ಶಿವಾನಂದ ಮಠದ ಉತ್ತರಾಧಿಕಾರತ್ವ ಹಾಗೂ ಜಾತ್ರಾ ಮಹೋತ್ಸವದ ಆಚರಣೆಗೆ ಸಂಬಂಧಿಸಿದಂತೆ ಹಿರಿಯ ಮತ್ತು ಕಿರಿಯ ಶ್ರೀಗಳ ನಡುವಿನ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಶನಿವಾರ ನಡೆಯಬೇಕಿದ್ದ ಮಹಾರಥೋತ್ಸವವೇ ರದ್ದಾಯಿತು. ಮಠದ ಇತಿಹಾಸದಲ್ಲಿ ರಥೋತ್ಸವ ರದ್ದುಗೊಂಡಿರುವುದು ಇದೇ ಮೊದಲು ಎನ್ನಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಶಿವಾನಂದ ಮಠದ ಉತ್ತರಾಧಿಕಾರಿಯನ್ನಾಗಿ ಶಿವಾನಂದ ಮಠದ ಘೋಡಗೇರಿ ಶಾಖಾ ಮಠದ ಕೈವಲ್ಯಾನಂದ ಶ್ರೀಗಳನ್ನು ನೇಮಿಸಲಾಗಿತ್ತು. ಆದರೆ, ಹಿರಿಯ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಒಮ್ಮಿಂದೊಮ್ಮೆಲೆ ಕಿರಿಯ ಶ್ರೀಗಳನ್ನು ಉತ್ತರಾಧಿಕಾರಿ ಹುದ್ದೆಯಿಂದ ವಜಾಗೊಳಿಸಿರುವುದಾಗಿ ಹೇಳಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆ ಮಾಡಿಸಿದ್ದರು. ಹಿರಿಯ ಶ್ರೀಗಳ ನಡವಳಿಕೆ ಖಂಡಿಸಿ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿ ಧಾರವಾಡದ ಹೈಕೋರ್ಟ್ ಪೀಠದ ಮೆಟ್ಟಿಲೇರಿದ್ದರು.
ನ್ಯಾಯಾಲಯವು ಕಳೆದ ಡಿಸೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಿ, ಮಾರ್ಚ್‌ನಲ್ಲಿ ನಡೆಯುವ ಶಿವರಾತ್ರಿ ಹಾಗೂ ಹಬ್ಬದ ಮರುದಿನ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕಿರಿಯ ಶ್ರೀಗಳ ಹಕ್ಕಿಗೆ ಧಕ್ಕೆಯಾಗದಂತೆ ನಡೆಸಿಕೊಳ್ಳಬೇಕು ಎಂದು ಸೂಚಿಸಿ ಮಧ್ಯಂತರ ಆದೇಶ ನೀಡಿತ್ತು.
ಆ ಬಳಿಕವೂ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಹಿರಿಯ ಮತ್ತು ಕಿರಿಯ ಶ್ರೀಗಳ ಭಕ್ತರ ನಡುವೆ ಘರ್ಷಣೆ ನಡೆಯುತ್ತಲೇ ಇತ್ತು. ಈ ಸಂಬಂಧ ಎಸ್‌ಪಿ ಬಿ.ಎಸ್.ನೇಮಗೌಡ ಅವರು, ಉಭಯ ಶ್ರೀಗಳ ಭಕ್ತರ ಸಭೆ ನಡೆಸಿ ಶಾಂತಿಯಿಂದ ಜಾತ್ರಾ ಮಹೋತ್ಸವ ನಡೆಸುವಂತೆ ಸೂಚಿಸಿದ್ದರು. ತಿಕ್ಕಾಟಗಳು ಇದೇ ರೀತಿ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.
ನ್ಯಾಯಾಲಯದ ಆದೇಶ, ಪೊಲೀಸರ ಎಚ್ಚರಿಕೆ ಮಧ್ಯೆಯೂ ಹಿರಿಯ ಶ್ರೀಗಳು ಕಿರಿಯ ಶ್ರೀಗಳನ್ನು ಮಠದ ಜಾತ್ರೆಯ ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂದು ಭಕ್ತರು ದೂರಿದ್ದರು.
ಈ ಮಧ್ಯೆ ಮಾರ್ಚ್ 8ರಂದು ಸಂಜೆ ಮಠದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಹಿರಿಯ ಶ್ರೀ, ‘ಭಕ್ತರ ಅಪೇಕ್ಷೆ ಹಾಗೂ ಮಠದ ಪರಂಪರೆಗೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಪ್ರವಚನ ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳೊಂದಿಗೆ ಸಾನ್ನಿಧ್ಯ ವಹಿಸುವೆ. ಪರಂಪರೆಯಂತೆ ತಾವೊಬ್ಬರೇ ಕಿರೀಟ ಪೂಜೆ, ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಕೂರುತ್ತೇನೆ’ ಎಂದು ತಿಳಿಸಿದ್ದರು.
ಬಳಿಕ ಕಿರಿಯ ಶ್ರೀ ಕೂಡ, ‘ಹಿರಿಯ ಶ್ರೀಗಳು ಹೇಳಿದ್ದಕ್ಕೆಲ್ಲಾ ನನ್ನ ಒಪ್ಪಿಗೆ ಇದ್ದು, ಅವರು ಹೇಳಿದಂತೆ ನಡೆಯುವೆ. ಭಕ್ತರ ಸಂತೋಷಕ್ಕಾಗಿ ಅವರಿಗೆ ಸಹಕಾರ ನೀಡುವೆ’ ಎಂದು ತಿಳಿಸಿದ್ದರು.
ಆದರೆ, ಹಿರಿಯ ಶ್ರೀಗಳು ಶುಕ್ರವಾರ ರಾತ್ರಿ ಮತ್ತೇ ತಮ್ಮ ನಿಲುವು ಬದಲಿಸಿ ತಾವೊಬ್ಬರೇ ಎಲ್ಲ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ವಹಿಸುವುದಾಗಿ ಘೋಷಿಸಿದರು. ಇದರಿಂದಾಗಿ ಮತ್ತೇ ಉಭಯ ಶ್ರೀಗಳ ಭಕ್ತರ ನಡುವೆ ತಿಕ್ಕಾಟ ಉಂಟಾಯಿತು.
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಪೊಲೀಸ್ ಅಧಿಕಾರಿಗಳು ಶಾಂತಿ, ಸುವ್ಯವಸ್ಥೆ ಹದಗೆಡುವ ಮುನ್ಸೂಚನೆ ಇದೆ ಎಂದು ಮೇಲಧಿಕಾರಿಗಳಿಗೆ ತಿಳಿಸಿದ್ದರು. ಪೊಲೀಸ್ ಅಧಿಕಾರಿಗಳ ಶಿಫಾರಸಿನಂತೆ ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ನೋಟಿಸ್ ನೀಡಿದರು. ಮಾರ್ಚ್ 8ರಂದು ರಾತ್ರಿ 8ರಿಂದ ಮಾರ್ಚ್ 9ರ ಮಧ್ಯರಾತ್ರಿ 12 ಗಂಟೆವರೆಗೆ 144 ಜಾರಿ ಮಾಡಿ, ಆದೇಶಿಸಿದರು. ಇದರಿಂದಾಗಿ ಐತಿಹಾಸಿಕ ಜಾತ್ರಾ ಮಹೋತ್ಸವ ಇದೇ ಮೊದಲಬಾರಿಗೆ ರದ್ದುಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.